ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup | ಉರುಗ್ವೆ ಎದುರು ಘಾನಾಗೆ ಮುಯ್ಯಿ ತೀರಿಸುವ ಅವಕಾಶ

Last Updated 1 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ದೋಹಾ: ಘಾನಾ ಮತ್ತು ಉರುಗ್ವೆ ತಂಡಗಳು ವಿಶ್ವಕಪ್‌ ಟೂರ್ನಿಯ ‘ಎಚ್‌’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಎದುರಾಗಲಿದ್ದು, ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಈ ಪಂದ್ಯ 2010ರ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದ ಪುನರಾವರ್ತನೆ ಎನಿಸಿದೆ. ಅಂದು ಪೆನಾಲ್ಟಿ ಶೂಟೌಟ್‌ನಲ್ಲಿ ಘಾನಾ ತಂಡವನ್ನು ಮಣಿಸಿದ್ದ ಉರುಗ್ವೆ ಸೆಮಿಫೈನಲ್‌ ಪ್ರವೇಶಿಸಿತ್ತು. ಆ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ಘಾನಾ ತಂಡಕ್ಕೆ ಒದಗಿ ಬಂದಿದೆ.

2010ರ ಪಂದ್ಯದಲ್ಲಿ ಘಾನಾ ತಂಡದ ಸೋಲಿಗೆ ಉರುಗ್ವೆಯ ಲೂಯಿಸ್‌ ಸೊರೇಜ್‌ ಅವರು ಕಾರಣರಾಗಿದ್ದರು. ಇಂಜುರಿ ಅವಧಿಯಲ್ಲಿ ಘಾನಾ ತಂಡಕ್ಕೆ ದೊರೆತ ಗೋಲು ಗಳಿಸುವ ಅವಕಾಶವನ್ನು ಸೊರೇಜ್‌ ಕೈಯಿಂದ ತಡೆದಿದ್ದರು.

ಆ ಬಳಿಕ ಅವರು ರೆಡ್‌ ಕಾರ್ಡ್‌ ಪಡೆದು ಅಂಗಳದಿಂದ ಹೊರನಡೆದಿದ್ದರು. ಆದರೆ ಪೆನಾಲ್ಟಿ ಅವಕಾಶದಲ್ಲಿ ಘಾನಾ ತಂಡದ ಅಸಮೋ ಗ್ಯಾನ್‌ ಗೋಲು ಗಳಿಸಲುವ ವಿಫಲರಾಗಿದ್ದರು. ಅವರು ಒದ್ದ ಚೆಂಡು ಕ್ರಾಸ್‌ಬಾರ್‌ಗೆ ಬಡಿದಿತ್ತು. ಡಗ್‌ಔಟ್‌ನಲ್ಲಿ ಕುಳಿದಿದ್ದ ಸೊರೇಜ್‌ ಈ ವೇಳೆ ಸಂಭ್ರಮಿಸಿದ್ದರು. ಆ ಬಳಿಕ ನಡೆದಿದ್ದ ಪೆನಾಲ್ಟಿ ಶೂಟೌಟ್‌ನಲ್ಲಿ ಘಾನಾ ಸೋತಿತ್ತು. ಮಾತ್ರವಲ್ಲ, ವಿಶ್ವಕಪ್‌ ಟೂರ್ನಿಯ ಸೆಮಿ ಪ್ರವೇಶಿಸಿದ ಆಫ್ರಿಕಾ ಖಂಡದ ಮೊದಲ ತಂಡ ಎನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿತ್ತು.

ಅಂದು ಎದುರಾಗಿದ್ದ ಸೋಲು ಘಾನಾ ತಂಡವನ್ನು ಈಗಲೂ ಕಾಡುತ್ತಿದ್ದು, ಇದೀಗ ಮುಯ್ಯಿ ತೀರಿಸುವ ಅವಕಾಶ ದೊರೆತಿದೆ. ಗುರುವಾರ ಗೆದ್ದರೆ ಘಾನಾ ತಂಡ ನಾಕೌಟ್‌ ಹಂತ ಪ್ರವೇಶಿಸಲಿದೆ. ಉರುಗ್ವೆ ಟೂರ್ನಿಯಿಂದ ಹೊರ ಬೀಳಲಿದೆ.

ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪೋರ್ಚುಗಲ್‌– ದಕ್ಷಿಣ ಕೊರಿಯಾ ಎದುರಾಗಲಿದೆ. ಈ ಪಂದ್ಯದಲ್ಲಿ ಪೋರ್ಚುಗಲ್‌ ಗೆದ್ದರೆ, ಘಾನಾ ತಂಡಕ್ಕೆ ನಾಕೌಟ್‌ ಪ್ರವೇಶಿಸಲು ಘಾನಾ ತಂಡಕ್ಕೆ ಡ್ರಾ ಸಾಧಿಸಿದರೂ ಸಾಕಾಗುತ್ತದೆ.

ಕಳೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 3–2 ಗೋಲುಗಳಿಂದ ಮಣಿಸಿದ್ದ ಘಾನಾ ತಂಡದ ಆಟಗಾರರು ಉತ್ತಮ ಲಯದಲ್ಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT