ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ನಾರ್ತ್ ಈಸ್ಟ್‌–ಹೈದರಾಬಾದ್‌ಗೆ ಅಗ್ರ ನಾಲ್ಕರ ಮೇಲೆ ಕಣ್ಣು

Last Updated 7 ಜನವರಿ 2021, 15:24 IST
ಅಕ್ಷರ ಗಾತ್ರ

ವಾಸ್ಕೊ, ಗೋವಾ: ಅಮೋಘ ಆಟ ಆಡುತ್ತಿರುವ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಸೆಣಸಲಿದ್ದು ‍ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಲೆಕ್ಕಾಚಾರದೊಂದಿಗೆ ಕಣಕ್ಕೆ ಇಳಿಯಲಿವೆ.

ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ನಾಲ್ಕನೇ ಸ್ಥಾನಕ್ಕೇರಲಿದೆ. ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮೊದಲ ಆರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿತ್ತು. ನಂತರ ಕೆಲ ಪಂದ್ಯಗಳಲ್ಲಿ ಕಳೆಗುಂದಿತ್ತು. ಹೀಗಾಗಿ ಏಳನೇ ಸ್ಥಾನಕ್ಕೆ ಜಾರಿತ್ತು. ಜೆರಾಡ್ ನೂಸ್‌ ಮಾರ್ಗದರ್ಶನದ ತಂಡ ಹಿಂದಿನ ಐದು ಪಂದ್ಯಗಳಲ್ಲಿ ಗೆಲುವು ಕಂಡಿಲ್ಲ. ಎರಡು ಪಂದ್ಯಗಳಲ್ಲಿ ಸೋತಿರುವ ತಂಡ ಮೂರನ್ನು ಡ್ರಾ ಮಾಡಿಕೊಂಡಿದೆ.

ಹೈದರಾಬಾದ್‌ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು ಕಳೆದ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಎದುರು 4-1 ಅಂತರದ ಗೆಲುವು ಸಾಧಿಸಿರುವುದರಿಂದ ಆತ್ಮವಿಶ್ವಾಸದಲ್ಲಿದೆ. ಸ್ಟ್ರೈಕರ್‌ ಅರಿದಾನೆ ಸಂಟಾನ ಹಿಂದಿನ ಕೆಲವು ಪಂದ್ಯಗಳಲ್ಲಿ ಯಶಸ್ಸು ಗಳಿಸದೇ ಇದ್ದರೂ ಸೋಲಿನ ಸರಪಳಿಯನ್ನು ತುಂಡರಿಸಲು ತಂಡಕ್ಕೆ ಸಾಧ್ಯವಾಗಿದೆ.

ಕಳೆದ ಆವೃತ್ತಿಯಲ್ಲಿ ನಾರ್ತ್‌ಈಸ್ಟ್‌ ಮತ್ತು ಹೈದರಾಬಾದ್‌ ಎಫ್‌ಸಿ ತಂಡಗಳು ಪಾಯಿಂಟ್‌ಪಟ್ಟಿಯ ಕೊನೆಯ ಎರಡು ಸ್ಥಾನಗಳಲ್ಲಿದ್ದವು. ಈ ಬಾರಿ ಎರಡೂ ತಂಡಗಳು ಪ್ಲೇ ಆಫ್‌ನತ್ತ ಹೆಜ್ಜೆ ಹಾಕಿವೆ.

ಆತ್ಮವಿಶ್ವಾಸದ ಅಲೆಯಲ್ಲಿರುವ ಹೈದರಾಬಾದ್‌ ಎಫ್‌ಸಿ ಪಂದ್ಯದಲ್ಲಿ ಕಠಿಣ ಸವಾಲೊಡ್ಡಲಿದೆ ಎಂಬುದನ್ನು ನೂಸ್‌ ಒಪ್ಪಿಕೊಂಡಿದ್ದಾರೆ. ‘ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಹೈದರಾಬಾದ್‌ ಬಲಿಷ್ಠವಾಗಿದೆ. ಬಗೆಬಗೆಯಲ್ಲಿ ಗೋಲು ಗಳಿಸುವ ಸಾಮರ್ಥ್ಯ ಆ ತಂಡದ ಆಟಗಾರರಿಗೆ ಇದೆ’ ಎಂದು ನೂಸ್‌ ಹೇಳಿದ್ದಾರೆ.

ಹೈದರಾಬಾದ್‌ನ ಕೋಚ್‌ ಮ್ಯಾನ್ಯುಯೆಲ್‌ ಮಾರ್ಕಸ್‌ಗೆ ತಂಡದ ರಕ್ಷಣಾ ವಿಭಾಗದ ವೈಫಲ್ಯದ್ದೇ ಚಿಂತೆ. ತಂಡ ಈ ಬಾರಿ ಒಟ್ಟು 11 ಗೋಲುಗಳನ್ನು ಬಿಟ್ಟುಕೊಟ್ಟಿದೆ.

‘ನಾರ್ತ್‌ಈಸ್ಟ್‌, ಬಲಿಷ್ಠ ತಂಡಗಳ ವಿರುದ್ಧ ಗೆಲುವು ಸಾಧಿಸಿ ಸಾಮರ್ಥ್ಯ ತೋರಿದೆ. ಅವರಲ್ಲಿ ಅನುಭವಿ ಆಟಗಾರರು ಮತ್ತು ಉದಯೋನ್ಮುಖ ಯುವ ಪ್ರತಿಭೆಗಳಿದ್ದಾರೆ. ಹೀಗಾಗಿ ಅದು ಅಪಾಯಕಾರಿ ತಂಡ’ ಎಂದು ಮಾರ್ಕಸ್ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT