ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣಗಳಿಗೆ ಕನ್ನಡಿಯಾದ ಕವಿಗೋಷ್ಠಿ

Last Updated 3 ಫೆಬ್ರುವರಿ 2018, 5:08 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶುಕ್ರವಾರ ನಡೆದ ವಿಶೇಷ ಕವಿಗೋಷ್ಠಿಯು, ಸಾಮಾಜಿಕ ತಲ್ಲಣಗಳು, ಆ ತಲ್ಲಣಗಳು ಮೂಡಿಸುತ್ತಿರುವ ಕಳವಳ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಜಾತ್ಯತೀತ ಸಮಾಜದ ಅವಶ್ಯಕತೆ, ಬದಲಾಗುತ್ತಿರುವ ಸಮಾಜದ ಮನಸ್ಥಿತಿಯನ್ನು ಬಹಳ ಅಚ್ಚುಕಟ್ಟಾಗಿ ಬಿಂಬಿಸಿತು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಕವಿಗಳು, ತಮ್ಮ ಅನುಭವಕ್ಕೆ ದಕ್ಕಿದ, ಮತ್ತು ತಾವು ಕಂಡಿದ್ದನ್ನು ಎಲ್ಲರೂ ಹೌದು ಎಂದು ಒಪ್ಪಿಕೊಳ್ಳಬಹುದಾದ ಬದುಕಿನ ಸಹಜ ಸಂಗತಿಗಳನ್ನು, ಸಮಾಜದ ಚಿತ್ರಣವನ್ನು ತಮ್ಮ ತಮ್ಮ ಕಾವ್ಯದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟರು.

ಎಸ್‌.ಮಂಜುನಾಥ ಅವರು ವಾಚಿಸಿದ ‘ಊಟಕ್ಕೆ ಬನ್ನಿರಿ ನಮ್ಮನೆಗೆ’ ಕವಿತೆ ಕೋಮುವಾದಿ ಸಮಾಜದ ವಿರುದ್ಧ ಪ್ರತಿಭಟನೆಯ ಧ್ವನಿಯಂತೆ ಕಂಡರೆ, ಗೋವಿಂದರಾಜು ಕಲ್ಲೂರ ಅವರ ‘ಮಾಯೆಯಲ್ಲಾ ಭವದೊಳು’ ಮತ್ತು ರಂಗಮ್ಮ ಹೊದೇಕಲ್‌ ಅವರ ‘ಕವಿತೆ ಒಡ್ಡಿದ ಸವಾಲು’ ಕವಿತೆಗಳು ವಿಭಿನ್ನ ನೆಲೆಗಟ್ಟಿನಲ್ಲಿ ಸ್ತ್ರೀ ಸಂವೇದಿ ಆಶಯಗಳನ್ನು ಪ್ರಕಟಿಸಿದವು.

ಮಣ್ಣೆರಾಜು ಅವರು ತಮ್ಮ ವಿಡಂಬನಾ ರಚನೆಗಳ ಮೂಲಕ ನೆರೆದಿದ್ದವರಲ್ಲಿ ನಗೆಯನ್ನು ಮೂಡಿಸಿದರು. ಗಂಡನೊಂದಿಗೆ ವನವಾಸ ಮಾಡಿದ್ದ ಸೀತೆಯ ಬಾಳು ಘೋರವೇ ನಿಜ ಆದರೆ, ಗಂಡನಿಲ್ಲದೇ ಮನೆವಾಸ ಮಾಡಿರುವ ಊರ್ಮಿಳೆಯ ಬಾಳು ಅತಿ ಘೋರ ಎನ್ನುವುದನ್ನು ತಮ್ಮ ಕವಿತೆಗಳಲ್ಲಿ ತಿಳಿಸಿದರು. ರಾಗಿಗೆ ವಿಶ್ವಮಾನ್ಯತೆ ಬರಲು ದೇವೆಗೌಡರೇ ರಾಯಭಾರಿ ಎನ್ನುವ ಅರ್ಥದಲ್ಲಿದ್ದ
ಕವಿತೆಯನ್ನು ಕೇಳಿದಾಗ ಸಭೆಯಲ್ಲಿ ನಗೆ ಚೆಲ್ಲಿತು.

ಮಿರ್ಜಾ ಬಷೀರ್‌ ಅವರ ‘ಬಿಕ್ಷುಕನ ಜೋಳಿಗೆ’, ಪಾಂಡುರಂಗ ಹೊಸಹಳ್ಳಿ ಅವರ ‘ಅರೆ ಬುಡುಬುಡಿಕೆಯವನು ಶಕುನ ಹೇಳುತ್ತಾನೆ, ಕೇಳುವರ‍್ಯಾರು?’, ಎಂ.ಎಸ್‌.ಸುಶೀಲಾ ಕಿಬ್ಬನಹಳ್ಳಿ ಅವರ ‘ಭೂ ಗೋ ಮಾತೆ’, ರೇಖಾ ಹಿಮಾನಂದ್‌ ಅವರ ‘ಬೆಳಕಾಗಲಿಲ್ಲ’, ಚಿಕ್ಕಪ್ಪಯ್ಯ ಅವರ ‘ಸಂಚಕಾರ’, ದುಗ್ಗನಹಳ್ಳಿ ಸಿದ್ದೇಶ್‌ ಅವರ ‘ನಾವು ರೈತರು’ ಕವನಗಳು ಮೆಚ್ಚುಗೆಗೆ ಪಾತ್ರವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT