ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್‌ ಫುಟ್‌ಬಾಲ್‌ ಅರ್ಹತೆಗೆ ಭಾರತ ತಂಡಕ್ಕೆ ಕೊನೆಯ ಅವಕಾಶ

Last Updated 6 ಜೂನ್ 2021, 11:44 IST
ಅಕ್ಷರ ಗಾತ್ರ

ದೋಹಾ: ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ಅರ್ಹತೆ ಗಳಿಸುವ ಭಾರತ ತಂಡದ ಕನಸು ಜೀವಂತವಾಗಿರಬೇಕಾದರೆ ಬಾಂಗ್ಲಾದೇಶ ವಿರುದ್ಧ ಸೋಮವಾರ ನಡೆಯುವ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಈ ವರೆಗೆ ಆರು ಪಂದ್ಯಗಳನ್ನು ಆಡಿರುವಸುನಿಲ್ ಚೆಟ್ರಿ ಬಳಗಕ್ಕೆ ಟೂರ್ನಿಯಲ್ಲಿ ಗೆಲುವು ಮರೀಚಿಕೆಯಾಗಿದೆ.

ವಿಶ್ವಕಪ್‌ ಮತ್ತು 2023ರ ಏಷ್ಯಾಕಪ್‌ಗೆ ಅರ್ಹತೆ ಗಳಿಸುವ ಟೂರ್ನಿ ಜೊತೆಯಾಗಿ ನಡೆಯುತ್ತಿದೆ. ವಿಶ್ವಕಪ್ ಅರ್ಹತೆಯಿಂದ ಭಾರತ ಈಗಾಗಲೇ ಹೊರಬಿದ್ದಿರುವ ಕಾರಣ ಈಗ ಏಷ್ಯಾಕಪ್‌ ಅಷ್ಟೇ ತಂಡದ ಕನಸು. ಆದರೆ ಅದರಲ್ಲೂ ಉತ್ತಮ ಸಾಮರ್ಥ್ಯ ತೋರಲು ಆಗಲಿಲ್ಲ.

ಆರು ಪಂದ್ಯಗಳಲ್ಲಿ ತಂಡ ಈ ವರೆಗೆ ಮೂರು ಪಾಯಿಂಟ್ಗಳಿಸಿದ್ದು ‘ಇ’ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎಂಟು ಗುಂಪುಗಳ ಪೈಕಿ ಅತ್ಯುತ್ತಮ ಸಾಧನೆ ಮಾಡಿ ನಾಲ್ಕನೇ ಸ್ಥಾನ ಗಳಿಸುವ ನಾಲ್ಕು ತಂಡಗಳಿಗೆ ನೇರವಾಗಿ ಮೂರನೇ ಸುತ್ತು ಪ್ರವೇಶಿಸುವ ಅರ್ಹತೆ ಇದೆ. ಭಾರತಕ್ಕೆ ಸದ್ಯ ಈ ಅವಕಾಶವೂ ಸಿಗುವ ಸಾಧ್ಯತೆ ಇಲ್ಲ. ಬಾಂಗ್ಲಾ ವಿರುದ್ಧ ಜಯ ಗಳಿಸಿದರೆ ತಂಡದ ಸ್ಥಿತಿ ಉತ್ತಮವಾಗಲಿದ್ದು ಸಮಸ್ಯೆಗಳಿಂದ ಹೊರಬರಲು ಸಾಧ್ಯ.

ಉತ್ತಮ ಸಾಮರ್ಥ್ಯ ತೋರದೆ ನಾಲ್ಕನೇ ಸ್ಥಾನ ಗಳಿಸುವ ನಾಲ್ಕು ತಂಡಗಳು ಮತ್ತು ಪ್ರತಿ ಗುಂಪಿನ ಕೊನೆಯ ಸ್ಥಾನಗಳಲ್ಲಿ ಉಳಿಯುವ ತಂಡಗಳಿಗೆ ಪ್ಲೇ ಆಫ್ ಸುತ್ತು ಇರುತ್ತದೆ. ಪರಿಸ್ಥಿತಿಯನ್ನು ಅಲ್ಲಿಯ ವರೆಗೂ ಕೊಂಡೊಯ್ಯುವುದು ಬೇಡ ಎಂದಿದ್ದರೆ ತಂಡ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಸದ್ಯ ನಾಲ್ಕನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಆರು ತಂಡಗಳು ಭಾರತಕ್ಕಿಂತ ಹೆಚ್ಚು ಪಾಯಿಂಟ್‌ಗಳನ್ನು ಹೊಂದಿದ್ದು ಉತ್ತಮ ಸ್ಥಿತಿಯಲ್ಲಿವೆ. ಸೋಮವಾರದ ಪಂದ್ಯದಲ್ಲಿ ಗೆದ್ದರೆ ವಿಶ್ವಕಪ್ ಅರ್ಹತಾ ಟೂರ್ನಿಯೊಂದರಲ್ಲಿ ಭಾರತ ಆರು ವರ್ಷಗಳಲ್ಲಿ ಗಳಿಸುವ ಮೊದಲ ಜಯ ಆಗಲಿದೆ. 2015ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗುವಾಮ್ ಎದುರು ಭಾರತ 1–0 ಅಂತರದಲ್ಲಿ ಗೆಲುವು ಸಾಧಿಸಿತ್ತು.

ಭರವಸೆ ತುಂಬಿದ ‘ಸೋಲು’
ಕಳೆದ ಗುರುವಾರ ನಡೆದ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್‌ ಕತಾರ್ ವಿರುದ್ಧ ಭಾರತ 0–1 ಅಂತರದಿಂದ ಸೋತಿತ್ತು. ಪಂದ್ಯದ 18ನೇ ನಿಮಿಷದಿಂದ ತಂಡದಲ್ಲಿ 10 ಮಂದಿ ಮಾತ್ರ ಇದ್ದರು. ಆದರೂ ಒಂದು ಗೋಲು ಮಾತ್ರ ಬಿಟ್ಟುಕೊಟ್ಟಿತ್ತು. ಹೀಗಾಗಿ ಆ ಪಂದ್ಯ ಕೋಚ್‌ ಇಗೋರ್ ಸ್ಟಿಮ್ಯಾಚ್ ಅವರಲ್ಲಿ ಭರವಸೆ ತುಂಬಿದೆ. ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಯುಎಇ ವಿರುದ್ಧ 0–6 ಗೋಲುಗಳ ಸೋಲಿನಿಂದ ತಂಡ ಚೇತರಿಸಿಕೊಂಡಿದೆ ಎಂಬುದು ಕತಾರ್ ಎದುರಿನ ಪಂದ್ಯದಲ್ಲಿ ಸ್ಪಷ್ಟವಾಗಿತ್ತು.

ಇತಿಹಾಸವನ್ನು ಕೆದಕಿದರೆ ಬಾಂಗ್ಲಾದೇಶ ವಿರುದ್ಧ ಭಾರತ ಪ್ರಾಬಲ್ಯ ಮೆರೆದಿರುವುದು ಕಂಡುಬರುತ್ತದೆ. ರ‍್ಯಾಂಕಿಂಗ್‌ನಲ್ಲಿ 105ನೇ ಸ್ಥಾನದಲ್ಲಿರುವ ಸುನಿಲ್ ಚೆಟ್ರಿ ಬಳಗ 184ನೇ ಸ್ಥಾನದಲ್ಲಿರುವ ಬಾಂಗ್ಲಾವನ್ನು ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದೆ. 1985ರಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಭಾರತ 2–1ರಲ್ಲಿ ಗೆದ್ದಿತ್ತು.

ಆದರೆ ಈಗ ಬಾಂಗ್ಲಾದೇಶ ತಂಡವನ್ನು ಕ್ಷುಲ್ಲಕವಾಗಿ ಕಾಣುವಂತಿಲ್ಲ. 2019ರಲ್ಲಿ ಕೋಲ್ಕತ್ತದಲ್ಲಿ ನಡೆದ ಮೊದಲ ಲೆಗ್ ಪಂದ್ಯದ ಆರಂಭದಲ್ಲೇ ಗೋಲು ಗಳಿಸಿ ಆ ತಂಡ ಮುನ್ನಡೆ ಸಾಧಿಸಿತ್ತು. 88ನೇ ನಿಮಿಷದಲ್ಲಿ ಭಾರತ ಸಮಬಲ ಸಾಧಿಸಿತ್ತು. ಹೀಗಾಗಿ ಪಂದ್ಯ ಡ್ರಾ ಆಗಿತ್ತು. ಎರಡು ಪಾಯಿಂಟ್ ಹೊಂದಿರುವ ಬಾಂಗ್ಲಾ ‘ಇ’ ಗುಂಪಿನ ಕೊನೆಯಲ್ಲಿದೆ. ಅಫ್ಗಾನಿಸ್ತಾನ ಎದುರು 1–1ರ ಡ್ರಾ ಸಾಧಿಸಿ ಅದು ದೋಹಾಗೆ ಬಂದಿಳಿದಿದೆ.

ಆರಂಭ: ರಾತ್ರಿ 7.20 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ 1,2,3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT