ಗುರುವಾರ , ಅಕ್ಟೋಬರ್ 17, 2019
24 °C
ಮಾಜಿ ನಾಯಕ ಬೈಚುಂಗ್‌ ಭುಟಿಯಾ ಅಭಿಪ್ರಾಯ

ಚೆಟ್ರಿ ಜೊತೆ ಇತರರೂ ಗೋಲು ಹೊಡೆಯಲಿ

Published:
Updated:
Prajavani

ಕೋಲ್ಕತ್ತ: ಭಾರತ ಫುಟ್‌ಬಾಲ್‌ ತಂಡದ ಮುಂಚೂಣಿ ದಾಳಿಯ ವಿಭಾಗ ಸುನಿಲ್‌ ಚೆಟ್ರಿ ಅವರನ್ನೇ ಬಲವಾಗಿ ಅವಲಂಬಿಸಿದೆ. ಇತರ ಆಟಗಾರರೂ ಎದುರಾಳಿ ಆವರಣದತ್ತ ನುಗ್ಗಿ ಗೋಲುಗಳನ್ನು ಹೊಡೆಯಬೇಕಾದ ಅಗತ್ಯವಿದೆ ಎಂದು ತಂಡದ ಮಾಜಿ ನಾಯಕ ಬೈಚುಂಗ್‌ ಭುಟಿಯಾ ಹೇಳಿದರು.

ವಿಶ್ವಕಪ್‌ನ ಅರ್ಹತಾ ಸುತ್ತಿನ ಕೊನೆಯ ಎರಡು ಪಂದ್ಯಗಳಲ್ಲಿ ರಕ್ಷಣಾ ವಿಭಾಗ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇದೇ 15ರಂದು ಬಾಂಗ್ಲಾ ದೇಶ ವಿರುದ್ಧ ನಡೆಯುವ ಪಂದ್ಯದಲ್ಲಿ ಫಾರ್ವರ್ಡ್‌ ಆಟಗಾರರ ಮೇಲೆ ಹೆಚ್ಚಿನ ಭಾರ ಇದೆ ಎಂದರು.

‘ರಕ್ಷಣಾ ವಿಭಾಗದ ಬಗ್ಗೆ ನಮಗೆ ಹೆಚ್ಚಿನ ಆತಂಕ ಇತ್ತು. ಆದರೆ ಆ ವಿಭಾಗದವರು ಈಗಿನ ಆಟವನ್ನು ಮುಂದುವರಿಸಿಕೊಂಡು ಹೋದರೂ ಸಾಕು. ಬಾಂಗ್ಲಾದೇಶ ಎದುರಿನ ಪಂದ್ಯ ಮುಂಚೂಣಿ ಆಟಗಾರರಿಗೆ ದೊಡ್ಡ ಪರೀಕ್ಷೆಯಾಗಲಿದೆ’ ಎಂದು ಅವರು ಸಂದರ್ಶನದಲ್ಲಿ ತಿಳಿಸಿದರು.

‘ಕತಾರ್‌ ಎದುರಿನ (ಡ್ರಾ ಆದ) ಪಂದ್ಯದಲ್ಲಿ ಭಾರತದ ರಕ್ಷಣಾ ಆಟ ಚೆನ್ನಾಗಿತ್ತು. ನಮಗೆ ಗೋಲು ಹೊಡೆಯಬಲ್ಲ ಇನ್ನಷ್ಟು ಆಟಗಾರರ ಅಗತ್ಯವಿದೆ. ಸುನಿಲ್‌ ಮಾತ್ರ ಈಗ ಸ್ಕೋರ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಂದ ಸರಿಯಾದ ಆಟ ಬರದಿದ್ದರೆ, ಇಲ್ಲವೇ ಗೋಲು ಹೊಡೆಯದಿದ್ದರೆ ನಮಗೆ ಪಂದ್ಯ ಗೆಲುವುದು ತುಂಬಾ ಕಷ್ಟ’ ಎಂದು ಬೈಚುಂಗ್‌ ವಿಶ್ಲೇಷಿಸಿದರು.

ದೋಹಾದಲ್ಲಿ ‘ಡ್ರಾ’ ಆದ ಪಂದ್ಯದಿಂದ ಭಾರತಕ್ಕೆ, ವಿಶ್ವ ಕಪ್‌ ಅರ್ಹತಾ ಸುತ್ತಿನ ‘ಇ’ ಗುಂಪಿನಲ್ಲಿ ಮೊದಲ ಪಾಯಿಂಟ್‌ ಬಂದಿತ್ತು. ನಂತರ ಗುವಾಹಟಿಯಲ್ಲಿ ಒಮಾನ್‌ ವಿರುದ್ಧದ ಪಂದ್ಯದಲ್ಲಿ 1–2 ರಲ್ಲಿ ಸೋತಿತ್ತು. ಅರ್ಹತಾ ಸುತ್ತಿನಲ್ಲಿ ಮುಂದಿನ ಪಂದ್ಯಕ್ಕೆ ಹೋಗುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಭಾರತ, ಬಾಂಗ್ಲಾದೇಶ ವಿರುದ್ಧ ಗೆಲುವಿನ ಅಗತ್ಯವಿದೆ. ಬಾಂಗ್ಲಾದೇಶ ಈಗ ವಿಶ್ವ ಕ್ರಮಾಂಕದಲ್ಲಿ 187ನೇ ಸ್ಥಾನದಲ್ಲಿದೆ. ಇದು ಭಾರತಕ್ಕಿಂತ 83 ಸ್ಥಾನಗಳಿಗಿಂತ ಕಡಿಮೆ.

Post Comments (+)