ಸೋಮವಾರ, ಮಾರ್ಚ್ 8, 2021
26 °C
ಸುನಿಲ್‌ ಚೆಟ್ರಿ ಏಕಾಂಗಿ ಹೋರಾಟ

ಐಎಸ್‌ಎಲ್‌ ಫುಟ್‌ಬಾಲ್‌: ಚೆನ್ನೈಯಿನ್‌ ಎದುರು ಸೋತ ಬಿಎಫ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಚೆನ್ನೈಯಿನ್‌ ಎಫ್‌ಸಿ ತಂಡದವರು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ಗೆ (ಬಿಎಫ್‌ಸಿ) ಆಘಾತ ನೀಡಿದ್ದಾರೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋರಾಟದಲ್ಲಿ ಚೆನ್ನೈಯಿನ್‌ 2–1 ಗೋಲುಗಳಿಂದ ಗೆದ್ದಿತು. ಈ ತಂಡ ಈ ಬಾರಿಯ ಲೀಗ್‌ನಲ್ಲಿ ದಾಖಲಿಸಿದ ಎರಡನೇ ಜಯ ಇದು.

ಈ ಪಂದ್ಯದಲ್ಲಿ ಸೋತರೂ ಬೆಂಗಳೂರಿನ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. 15 ಪಂದ್ಯಗಳನ್ನು ಆಡಿರುವ ಸುನಿಲ್‌ ಚೆಟ್ರಿ ಪಡೆಯ ಖಾತೆಯಲ್ಲಿ 31 ಪಾಯಿಂಟ್ಸ್‌ ಇವೆ.

ಸುನಿಲ್‌ ಚೆಟ್ರಿ ಪಡೆಯು ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈಯಿನ್‌ ತಂಡವನ್ನು ಸುಲಭವಾಗಿ ಮಣಿಸಿ ‘ಪ್ಲೇ ಆಫ್‌’ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಲಿದೆ ಎಂದೇ ಭಾವಿಸಲಾಗಿತ್ತು. ಅಭಿಮಾನಿಗಳ ಈ ನಿರೀಕ್ಷೆ ಹುಸಿಯಾಯಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿಗೆ ಮೊದಲ 30 ನಿಮಿಷಗಳ ಆಟದಲ್ಲಿ ಚೆನ್ನೈಯಿನ್‌ ತಂಡ ಪ್ರಬಲ ಪೈಪೋಟಿ ಒಡ್ಡಿತು. ಅನಂತರ ಆತಿಥೇಯರ ಆಟ ರಂಗೇರಿತು. 32ನೇ ನಿಮಿಷದಲ್ಲಿ ಜೆಜೆ ಲಾಲ್‌ಪೆಕ್ಲುವಾ ಗೋಲು ಗಳಿಸಿ ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಮೊದಲಾರ್ಧದ ಆಟ ಮುಗಿಯಲು ಮೂರು ನಿಮಿಷ ಬಾಕಿ ಇದ್ದಾಗ (42) ಗ್ರೆಗೋರಿ ನೆಲ್ಸನ್‌ ಕಾಲ್ಚಳಕ ತೋರಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಬಿಎಫ್‌ಸಿ ಆವರಣ ಪ್ರವೇಶಿಸಿದ ಅವರು ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

0–2 ಗೋಲುಗಳ ಹಿನ್ನಡೆಯೊಂದಿಗೆ ವಿರಾಮಕ್ಕೆ ಹೋದ ಬಿಎಫ್‌ಸಿ, ದ್ವಿತೀಯಾರ್ಧದ ಆರಂಭದಲ್ಲಿ ಗುಣಮಟ್ಟದ ಆಟದ ಮೂಲಕ ಗಮನ ಸೆಳೆಯಿತು. 57ನೇ ನಿಮಿಷದಲ್ಲಿ ಮುಂಚೂಣಿ ವಿಭಾಗದ ಆಟಗಾರ ಚೆಟ್ರಿ ಗೋಲು ಹೊಡೆದರು. ಹೀಗಾಗಿ ಪ್ರವಾಸಿ ತಂಡದ ಹಿನ್ನಡೆ 1–2ಕ್ಕೆ ತಗ್ಗಿತು. ಬಳಿಕ ಉಭಯ ತಂಡಗಳೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಚೆಟ್ರಿ ಪಡೆ ಸಮಬಲದ ಗೋಲು ಗಳಿಸಲು ನಿರಂತರವಾಗಿ ಪ್ರಯತ್ನಿಸಿತು. ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಲು ಬಿಎಫ್‌ಸಿ ಆಟಗಾರರು ವಿಫಲರಾದರು. ಹೀಗಾಗಿ ತಂಡದ ಗೆಲುವಿನ ಕನಸು ಕಮರಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು