ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿಗೆ ಗೆಲುವಿನ ಕನಸು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮುಂಬೈ ಸಿಟಿ ಎಫ್‌ಸಿ ಎದುರಾಳಿ
Last Updated 9 ಜನವರಿ 2022, 14:35 IST
ಅಕ್ಷರ ಗಾತ್ರ

ಫತೋರ್ಡ: ನೀರಸ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್‌ಸಿಯನ್ನು ಸೋಮವಾರ ಎದುರಿಸಲಿದೆ. ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನ ಉಳಿಸಿಕೊಳ್ಳಲು ಮುಂಬೈ ಪ್ರಯತ್ನಿಸಲಿದೆ.

ಕಳೆದ ಪಂದ್ಯದಲ್ಲಿ ಮುಂಬೈ ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ಎದುರು ಗೋಲುರಹಿತ ಡ್ರಾ ಮಾಡಿಕೊಂಡಿತ್ತು. ಈ ಮೂಲಕ ಸತತ ನಾಲ್ಕು ‍ಪಂದ್ಯಗಳಲ್ಲಿ ಜಯ ಗಳಿಸಲಾಗದೆ ನಿರಾಸೆ ಕಂಡಿತ್ತು. ಇದರಲ್ಲಿ ಎರಡು ಸೋಲು ಕೂಡ ಸೇರಿವೆ. ಪಾಯಿಂಟ್ ಪಟ್ಟಿಯ ಕೊನೆಯಲ್ಲಿರುವ ಈಸ್ಟ್ ಬೆಂಗಾಲ್ ಎದುರಿನ ಪಂದ್ಯದಲ್ಲಿ ತಂಡಕ್ಕೆ ಯಾವ ವಿಭಾಗದಲ್ಲೂ ಮಿಂಚಲು ಆಗಲಿಲ್ಲ.

ಮೊದಲ 6 ಪಂದ್ಯಗಳಲ್ಲಿ ಮುಂಬೈ ಒಟ್ಟು 17 ಗೋಲುಗಳನ್ನು ಗಳಿಸಿತ್ತು. ಆದರೆ ಕಳೆದ 4 ಪಂದ್ಯಗಳಲ್ಲಿ ಐದು ಗೋಲುಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಬಿಎಫ್‌ಸಿ ಎದುರಿನ ಪಂದ್ಯದಲ್ಲಿ ಮಿಡ್‌ಫೀಲ್ಡರ್ ಅಹಮ್ಮದ್ ಜಹೋ ಅವರು ಲಭ್ಯ ಇರುವುದಿಲ್ಲ. ಅವರು ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ರಾವ್ಲಿನ್ ಬೋರ್ಜೆಸ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಆದ್ದರಿಂದ ವಿನೀತ್ ರಾಯ್ ಮತ್ತು ಅಪುಯಾ ಅವರನ್ನು ತಂಡ ಆಶ್ರಯಿಸಿಕೊಂಡಿದೆ.

ಆರಂಭದಲ್ಲಿ ಸೋಲಿನ ಬಲೆಯಲ್ಲಿದ್ದ ಬೆಂಗಳೂರು ಎಫ್‌ಸಿ ನಿಧಾನಕ್ಕೆ ಲಯ ಕಂಡುಕೊಂಡಿತ್ತು. ಟೂರ್ನಿಯ ಮೊದಲಾರ್ಧದಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಜಯಿಸಿತ್ತು. ಕಳೆದ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಎದುರು ಎಲ್ಲ ಸಾಮರ್ಥ್ಯವನ್ನು ಹೊರಗೆಡವಿಯೂ 1–1ರ ಡ್ರಾಗೆ ಸಮಾಧಾನಪಟ್ಟುಕೊಂಡಿತ್ತು. ಹಿಂದಿನ 4 ಪಂದ್ಯಗಳಲ್ಲಿ ಸೋಲು ಕಂಡಿಲ್ಲ ಎಂಬುದು ಬೆಂಗಳೂರು ಎಫ್‌ಸಿಗೆ ಸಮಾಧಾನ ತಂದಿರುವ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT