ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ಬೆಂಗಳೂರು ಎಫ್‌ಸಿಗೆ ಕಿರೀಟ

ಹೆಚ್ಚುವರಿ ಅವಧಿಯಲ್ಲಿ ರಾಹುಲ್‌ ಭೆಕೆ ಮಿಂಚು
Last Updated 17 ಮಾರ್ಚ್ 2019, 20:25 IST
ಅಕ್ಷರ ಗಾತ್ರ

ಮುಂಬೈ: ಕೆಚ್ಚೆದೆಯ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದ ರಾಹುಲ್ ಭೆಕೆ ಹೆಚ್ಚುವರಿ ಅವಧಿಯಲ್ಲಿ ಮ್ಯಾಜಿಕ್ ಮಾಡಿದರು.

ಹೆಡರ್‌ ಮೂಲಕ ಅವರು ಗಳಿಸಿದ ಏಕೈಕ ಗೋಲಿನ ಮೂಲಕ ಸುನಿಲ್ ಚೆಟ್ರಿ ಬಳಗ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಬಿಎಫ್‌ಸಿ ತಂಡ ಎಫ್‌ಸಿ ಗೋವಾ ತಂಡವನ್ನು 1–0ಯಿಂದ ಮಣಿಸಿತು.

ಈ ಮೂಲಕ ಕಳೆದ ಬಾರಿ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿನ ನಿರಾಸೆಯನ್ನು ಮರೆಯಿತು. ಗೋವಾ ತಂಡ 2015ರಲ್ಲಿ ಮೊದಲ ಬಾರಿ ಫೈನಲ್‌ಗೇರಿ ಸೋತಿತ್ತು.

ಆರಂಭದಲ್ಲೇ ಸಿಕ್ಕಿದ ಅವಕಾಶ ಗಳು: ಭಾನುವಾರ ಎರಡನೇ ನಿಮಿಷದಲ್ಲೇ ಬಿಎಫ್‌ಸಿಗೆ ಉತ್ತಮ ಅವಕಾಶ ಒದಗಿತ್ತು. ನಿಶು ಕುಮಾರ್ ಅವರ ಥ್ರೋವನ್ನು ಎದುರಾಳಿ ಆವರಣದಲ್ಲಿ ನಿಯಂತ್ರಿಸಿದ ಮಿಕು, ಚೆಂಡನ್ನು ನಾಯಕ ಸುನಿಲ್ ಚೆಟ್ರಿ ಅವರತ್ತ ತಳ್ಳಿದರು. ಚೆಟ್ರಿ ಬಲವಾಗಿ ಒದ್ದ ಚೆಂಡು ಗೋಲುಪೆಟ್ಟಿಗೆಯ ಹೊರಗೆ ಸಾಗಿತು.

ಆರನೇ ನಿಮಿಷದಲ್ಲಿ ಮಿಕು ಅವರಿಗೆ ಸುವರ್ಣಾವಕಾಶ ಲಭಿಸಿತ್ತು. ಚೆಂಡನ್ನು ಎದುರಾಳಿಗಳ ಆವರಣದ ಬಳಿ ನಿಯಂತ್ರಿಸಿದ ಸುನಿಲ್ ಚೆಟ್ರಿ ನಿಖರವಾಗಿ ಮಿಕು ಬಳಿಗೆ ಪಾಸ್ ಮಾಡಿದರು.

ಮಿಕು, ಆರು ಡಿಫೆಂಡರ್‌ಗಳನ್ನು ಕಬಳಿಸಿ ಮುನ್ನುಗ್ಗಿದರು. ಇನ್ನೇನು ತಂಡ ಮೊದಲ ಗೋಲು ಗಳಿಸಿಯೇ ಬಿಟ್ಟಿತು ಎಂಬಷ್ಟರಲ್ಲಿ ನಿರಾಸೆ ಕಾಡಿತು. ಕೊನೆಯ ಕ್ಷಣದಲ್ಲಿ ಗುರಿಯತ್ತ ಒದ್ದ ಚೆಂಡನ್ನು ಗೋವಾದ ಗೋಲ್‌ಕೀಪರ್‌ ನವೀನ್ ಕುಮಾರ್‌ ಚಾಣಾಕ್ಷತನದಿಂದ ತಡೆದರು.

ಎರಡೂ ತಂಡಗಳು ಆಕ್ರಮಣಕಾರಿ ಆಟದೊಂದಿಗೆ ರಕ್ಷಣೆಗೂ ಒತ್ತು ನೀಡಿದ್ದರಿಂದ ಪಂದ್ಯ ರೋಚಕವಾಗುತ್ತ ಸಾಗಿತು. 14ನೇ ನಿಮಿಷದಲ್ಲಿ ಗೋವಾ ಕೂಡ ಬಿಎಫ್‌ಸಿ ಪಾಳಯದಲ್ಲಿ ಆತಂಕ ಸೃಷ್ಟಿಸಿತು.

ಅಹಮ್ಮದ್ ಜೊಹೌ ಅವರು ದೂರದಿಂದ ನೀಡಿದ ಚೆಂಡಿನ ಮೇಲೆ ಆಧಿಪತ್ಯ ಸಾಧಿಸಿದ ಜಾಕಿಚಾಂದ್ ಸಿಂಗ್ ವೇಗವಾಗಿ ಡ್ರಿಬಲ್ ಮಾಡುತ್ತ ಚೆಟ್ರಿ ಬಳಗದ ಪಾಳಯಕ್ಕೆ ನುಗ್ಗಿದರು. ನಂತರ ಫೆರಾನ್ ಕೊರೊಮಿನಾಸ್ ಕಡೆಗೆ ತಳ್ಳಿದರು. ಟೂರ್ನಿಯಲ್ಲಿ ಅತಿಹೆಚ್ಚು ಗೋಲು ಗಳಿಸಿರುವ ಕೊರೊಮಿನಾಸ್ ಈ ಪ್ರಯತ್ನದಲ್ಲಿ ಫಲ ಕಾಣಲಿಲ್ಲ.

27ನೇ ನಿಮಿಷದಲ್ಲಿ ಉದಾಂತ ಸಿಂಗ್ ಮತ್ತು ಮಿಕು ಅವರು ಪ್ರಬಲ ದಾಳಿ ನಡೆಸಿದರು. ಆದರೆ ಗುರಿಯತ್ತ ಒದ್ದ ಚೆಂಡನ್ನು ಮೊರ್ತಜಾ ಫಾಲ್‌ ಹೆಡ್ ಮಾಡಿ ಹೊರಗಟ್ಟಿದರು. ಮೊದಲಾರ್ಧದ ಆಟದಲ್ಲಿ ಗೋಲು ಗಳಿಸಲು ನಡೆಸಿದ ಉಭಯ ತಂಡಗಳ ಪ್ರಯತ್ನಗಳು ವಿಫಲವಾಗುತ್ತಿದ್ದಂತೆ ಆಕ್ರಮಣ ಇನ್ನಷ್ಟು ಹೆಚ್ಚಾಯಿತು. 41ನೇ ನಿಮಿಷದಲ್ಲಿ ಗೋವಾ ತಂಡದ ನಾಯಕ ಮಂದಾರ್ ದೇಸಾಯಿ ಗಾಯಗೊಂಡರು. ಆದರೆ ಅದು ಅಂಗಣ ತೊರೆಯುವಷ್ಟು ಗಂಭೀರ ಆಗಿರದ ಕಾರಣ ತಂಡ ನಿಟ್ಟುಸಿರು ಬಿಟ್ಟಿತು.

ದ್ವಿತೀಯಾರ್ಧದಲ್ಲಿ ರೋಚಕ ಹೋರಾಟ: ಗೋಲು ಗಳಿಸದೆ ವಿರಾಮಕ್ಕೆ ತೆರಳಿದ ಎರಡೂ ತಂಡದವರು ದ್ವಿತೀಯಾರ್ಧದಲ್ಲಿ ರೋಚಕ ಹೋರಾಟ ನಡೆಸಿದರು. ಆದರೆ ನಿಗದಿತ ಅವಧಿಯಲ್ಲಿ ಗೋಲು ಗಳಿಸಲು ಆಗಲಿಲ್ಲ. ಹೆಚ್ಚುವರಿ ಅವಧಿಯಲ್ಲಿ (116ನೇ ನಿಮಿಷ) ಲಭಿಸಿದ ಅವಕಾಶದಲ್ಲಿ ರಾಹುಲ್‌ ಭೆಕೆ ಚುರುಕಾಗಿ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT