ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಜೆಎಫ್‌ಸಿಗೆ ಮುಂಬೈ ಆಘಾತ

Last Updated 19 ಡಿಸೆಂಬರ್ 2019, 19:44 IST
ಅಕ್ಷರ ಗಾತ್ರ

ಜೆಮ್‌ಶೆಡ್‌ಪುರ: ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಜಯಭೇರಿ ಮೊಳಗಿಸಿತು.

ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಆತಿಥೇಯ ಜೆಮ್‌ಶೆಡ್‌ಪುರ ಎಫ್‌ಸಿಯನ್ನು 2–1 ಗೋಲುಗಳಿಂದ ಮಣಿಸಿತು. 15ನೇ ನಿಮಿಷದಲ್ಲಿ ‍ಪೌಲೊ ಮಚಾದೊ ಗಳಿಸಿದ ಗೋಲಿನ ಮೂಲಕ ಮುಂಬೈ ಮುನ್ನಡೆ ಗಳಿಸಿತು.

ಆದರೆ 37ನೇ ನಿಮಿಷದಲ್ಲಿ ನಾಯಕ ತಿರಿ ಚೆಂಡನ್ನು ಗುರಿ ಮುಟ್ಟಿಸಿ ಜೆಎಫ್‌ಸಿ ಸಮಬಲ ಸಾಧಿಸಲು ನೆರವಾದರು. ರೇನಿಯರ್ ಫರ್ನಾಂಡಿಸ್ 56ನೇ ನಿಮಿಷದಲ್ಲಿ ಗೋಲು ಗಳಿಸಿ ಮುಂಬೈಗೆ ಮತ್ತೆ ಮುನ್ನಡೆ ತಂದುಕೊಟ್ಟರು. ನಂತರ ಆತಿಥೇಯರು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಚೆನ್ನೈಯಿನ್‌–ಬ್ಲಾಸ್ಟರ್ಸ್‌ ಹಣಾಹಣಿ: ಚೆನ್ನೈನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಸೆಣಸಲಿವೆ. ಸಾಂಪ್ರದಾಯಿಕ ವೈರಿಗಳೆಂದೇ ಪರಿಗಣಿಸಲಾಗುವ ಎರಡೂ ತಂಡಗಳ ನಡುವಿನ ‘ದಕ್ಷಿಣ ಡರ್ಬಿ’ಯ ಫಲಿತಾಂಶ ಕುತೂಹಲ ಕೆರಳಿಸಿದೆ. ಯಾಕೆಂದರೆ ಎರಡೂ ತಂಡಗಳು ಆರನೇ ಆವೃತ್ತಿಯಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ತೋರಲು ವಿಫಲವಾಗಿವೆ. ಆದ್ದರಿಂದ ಪಾರಮ್ಯ ಮೆರೆಯಲು ಉಭಯ ತಂಡಗಳೂ ಪ್ರಯತ್ನಿಸಲಿವೆ.
ಏಳು ಪಾಯಿಂಟ್ ಗಳಿಸಿರುವ ಕೇರಳ ಬ್ಲಾಸ್ಟರ್ಸ್‌ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು ಆರು ಪಾಯಿಂಟ್‌ಗಳೊಂದಿಗೆ ಚೆನ್ನೈಯಿನ್ ಒಂಬತ್ತನೇ ಸ್ಥಾನದಲ್ಲಿದೆ. ಆದ್ದರಿಂದ ತವರಿನಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೇಲೇರುವ ನಿರೀಕ್ಷೆಯೊಂದಿಗೆ ಚೆನ್ನೈಯಿನ್ ಕಣಕ್ಕೆ ಇಳಿಯಲಿದೆ.

‘ಬ್ಲಾಸ್ಟರ್ಸ್‌ ಉತ್ತಮ ತಂಡ. ಆದ್ದರಿಂದ ಈ ಹಣಾಹಣಿಗೆ ನಮ್ಮ ಆಟಗಾರರು ಭಾರಿ ಅಭ್ಯಾಸ ಮಾಡಿದ್ದಾರೆ. ಆದ್ದರಿಂದ ಸೋಲಿನ ಆತಂಕವಿಲ್ಲದೆ ಆಡಲಿದ್ದಾರೆ’ ಎಂದು ಚೆನ್ನೈಯಿನ್‌ ಕೋಚ್ ಓವನ್ ಕೋಯ್ಲ್ ಹೇಳಿದ್ದಾರೆ.

ನಮ್ಮ ತಂಡ ಪ್ರತಿ ಪಂದ್ಯದಲ್ಲೂ ಉತ್ತಮ ಸಾಮರ್ಥ್ಯ ತೋರಿದೆ. ಗಾಯದ ಸಮಸ್ಯೆಯ ನಡುವೆಯೂ ಉತ್ತಮವಾಗಿ ಆಡಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ತಂಡ ಸುಧಾರಣೆ ಕಾಣುತ್ತಿದೆ. ಆದ್ದರಿಂದ ಚೆನ್ನೈಯಿನ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ’ ಎಂದು ಬ್ಲಾಸ್ಟರ್ಸ್‌ ಸಹಾಯಕ ಕೋಚ್ ಇಷ್ಫಾಕ್ ಅಹಮ್ಮದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT