ಸೋಮವಾರ, ಮಾರ್ಚ್ 20, 2023
30 °C
ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್‌ ತಂಡಕ್ಕೆ ನಿರಾಸೆ

ಯೂರೊ ಕಪ್ ಫುಟ್‌ಬಾಲ್‌: ಪ್ರಶಸ್ತಿ ಸುತ್ತಿಗೆ ಇಟಲಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಎರಡು ಗೋಲುಗಳನ್ನು ತಡೆದ ಗಿಯಾನ್‌ಲ್ಯೂಗಿ ಡೊನ್ನಾರುಮ್ಮಾ ಇಟಲಿ ತಂಡವು ಯೂರೊ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ತಲುಪುವಂತೆ ಮಾಡಿದರು. ಅವರ ಸೊಗಸಾದ ಆಟದ ಬಲದಿಂದ ತಂಡವು ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಪರಾಭವಗೊಳಿಸಿತು.

ವೆಂಬ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ತಡರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ 4–2ರಿಂದ ಜಯ ಒಲಿಯಿತು. ಭಾನುವಾರ ಇದೇ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಡೆನ್ಮಾರ್ಕ್ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಾಗಲಿಲ್ಲ. ಹೀಗಾಗಿ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು. ಇಲ್ಲಿ ಇಟಲಿ ಪಾರಮ್ಯ ಮೆರೆಯಿತು.

ಹೆಚ್ಚು ಅವಧಿಗೆ ಸ್ಪೇನ್ ತಂಡದ ನಿಯಂತ್ರಣದಲ್ಲೇ ಇದ್ದ ಹಣಾಹಣಿಯಲ್ಲಿ 60ನೇ ನಿಮಿಷ ಇಟಲಿಯ ಫೆಡರಿಕೊ ಚೀಸಾ ಮೋಡಿ ಮಾಡಿದರು. ಎದುರಾಳಿ ಗೋಲ್‌ಕೀಪರ್‌ರನ್ನು ವಂಚಿಸಿ ಮೊದಲ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಆದರೆ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಅಲ್ವಾರಾ ಮೊರಾಟ 80ನೇ ನಿಮಿಷದಲ್ಲಿ ಸ್ಪೇನ್‌ ಪರ ಗೋಲು ದಾಖಲಿಸಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ಸತತ 33 ಪಂದ್ಯಗಳಲ್ಲಿ ಅಜೇಯವಾಗುಳಿದು ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಇಟಲಿ, ಟೂರ್ನಿಯಲ್ಲಿ ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿದೆ. ಎರಡನೇ ಬಾರಿ ಪ್ರಶಸ್ತಿಗಾಗಿ ಸೆಣಸಲು ಸಜ್ಜಾಗಿದೆ. 1968ರಲ್ಲಿ ತಂಡವು ಚಾಂಪಿಯನ್ ಆಗಿತ್ತು.

ಪಂದ್ಯದಲ್ಲಿ ಸ್ಪೇನ್‌ನ ಮೊರಾಟ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಗಳಿಸುವಲ್ಲಿ ವಿಫಲರಾದದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು