ಬುಧವಾರ, ಸೆಪ್ಟೆಂಬರ್ 30, 2020
19 °C

ಜೆಮ್ಶೆಡ್‌ಪುರ ಎಫ್‌ಸಿಗೆ ಒವೆನ್ ಕೊಯ್ಲೆ ಕೋಚ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೆಮ್ಶೆಡ್‌ಪುರ: ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಜೆಮ್ಶೆಡ್‌ಪುರ ಎಫ್‌ಸಿ ತಂಡವು ಸ್ಕಾಟ್ಲೆಂಡ್‌ನ ಒವೆನ್ ಕೊಯ್ಲೆ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಬಾಲ್ಟನ್ ವಾಂಡರರ್ಸ್ ತಂಡದ ಮ್ಯಾನೇಜರ್ ಆಗಿದ್ದ ಕೊಯ್ಲೆ ಈ ಹಿಂದೆ ಚೆನ್ನೈಯಿನ್ ಎಫ್‌ಸಿಯ ಕೋಚ್ ಆಗಿದ್ದರು.

ಐರ್ಲೆಂಡ್‌ನಲ್ಲಿ ಬೆಳೆದ 54 ವರ್ಷದ ಕೊಯ್ಲೆ ಅವರ ಬಳಿ ತರಬೇತಿ ಪಡೆದ ಚೆನ್ನೈಯಿನ್ ಎಫ್‌ಸಿ ಕಳೆದ ಬಾರಿ ಐಎಸ್‌ಎಲ್‌ನಲ್ಲಿ ರನ್ನರ್ ಅಪ್ ಆಗಿತ್ತು. ಹಿಂದಿನ ಕೋಚ್ ವಿಫಲರಾಗಿದ್ದ ಕಾರಣ ಕೊಯ್ಲೆ ಅವರನ್ನು ಐಎಸ್‌ಎಲ್‌ನ ಮಧ್ಯ ಭಾಗದಲ್ಲಿ ಚೆನ್ನೈಯಿನ್ ನೇಮಕ ಮಾಡಿಕೊಂಡಿತ್ತು.

ಐಎಸ್‌ಎಲ್‌ನ ಮೂರು ಆವೃತ್ತಿಗಳಲ್ಲಿ ತಂಡವನ್ನು ಕಣಕ್ಕೆ ಇಳಿಸಿರುವ ಜೆಮ್ಶೆಡ್‌ಪುರ ಎಫ್‌ಸಿಯ ನಾಲ್ಕನೇ ಕೋಚ್ ಆಗಲಿದ್ದಾರೆ ಕೊಯ್ಲೆ. ಮೊದಲ ಎರಡು ಆವೃತ್ತಿಗಳಲ್ಲಿ ಕ್ರಮವಾಗಿ ಸ್ಟೀವ್ ಕೊಪೆಲ್ ಮತ್ತು ಸೀಸರ್ ಫರ್ನಾಂಡೊ ಕೋಚ್ ಆಗಿದ್ದರು. ಆ ಎರಡೂ ಆವೃತ್ತಿಗಳಲ್ಲಿ ತಂಡ ಐದನೇ ಸ್ಥಾನ ಗಳಿಸಿತ್ತು. ಕಳೆದ ಬಾರಿ ಆ್ಯಂಟೋನಿಯೊ ಇರಿಯಾಂಡೊ ಅಡಿಯಲ್ಲಿ ತಂಡ ಎಂಟನೇ ಸ್ಥಾನಕ್ಕೆ ಕುಸಿದಿತ್ತು.

ಬಾಲ್ಟನ್ ವಾಂಡರರ್ಸ್ ಮತ್ತು ಮದರ್‌ವೆಲ್ ಎಫ್‌ಸಿ ಸೇರಿದಂತೆ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ವಿವಿಧ ಕ್ಲಬ್‌ಗಳಲ್ಲಿ ಆಡಿರುವ ಕೊಯ್ಲೆ ಐರ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ ಒಂದು ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದಾರೆ. ಇಂಗ್ಲಿಷ್ ಪ್ರೀಮಿಯರ್‌ಷಿಪ್‌ನಲ್ಲಿ ಬರ್ನ್ಲಿ ಮತ್ತು ಬಾಲ್ಟನ್ ವಾಂಡರರ್ಸ್ ತಂಡಗಳ ಮ್ಯಾಜೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಬರ್ನ್ಲಿ ತಂಡ 2009ರಲ್ಲಿ ಪ್ರೀಮಿಯರ್ ಲೀಗ್‌ಗೆ ಬಡ್ತಿ ಪಡೆದುಕೊಂಡಿತ್ತು.

‘ಇದು ದೊಡ್ಡ ಸವಾಲಿನ ಕಾರ್ಯ. ಭಾರತದ ಯುವ ಆಟಗಾರರು ಈಗ ಚೆನ್ನಾಗಿ ಪಳಗಿದ್ದಾರೆ. ಅವರನ್ನು ಬಳಸಿಕೊಂಡು, ಐಎಸ್‌ಎಲ್ ಬಗ್ಗೆ ಮಾತನಾಡುವಾಗಲೆಲ್ಲ ಜೆಮ್ಶೆಡ್‌ಪುರ ಎಫ್‌ಸಿಯ ಪ್ರಸ್ತಾಪ ಆಗುವಂತೆ ಮಾಡುತ್ತೇನೆ. ಈ ಕ್ಲಬ್‌ಗೆ ಯಶಸ್ಸು ತಂದುಕೊಡಲು ಪ್ರಯತ್ನಿಸಲಿದ್ದೇನೆ. ಎಲ್ಲ ವಿಭಾಗಗಳನ್ನೂ ಬಲಿಷ್ಠಗೊಳಿಸುವುದು ನನ್ನ ಉದ್ದೇಶ. ಏನೇ ಮಾಡಿದರೂ ಪಂದ್ಯದಲ್ಲಿ ಗೋಲು ಗಳಿಸುವುದು ತಂಡದ ಪರಮ ಗುರಿ ಆಗಲಿದೆ. ಗೋಲು ಹೊಡೆಯುವ ಸಮರ್ಥ ಆಟಗಾರರ ಕಡೆಗೆ ಹೆಚ್ಚಿನ ಗಮನ ನೀಡಲಾಗುವುದು. ಕಠಿಣ ಶ್ರಮ ಹಾಕುವ ಭಾರತದ ಆಟಗಾರರ ಜೊತೆ ತಂಡದಲ್ಲಿ ಕೆಲಸ ನಿರ್ವಹಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಕೊಯ್ಲೆ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು