ಬುಧವಾರ, ಏಪ್ರಿಲ್ 8, 2020
19 °C

ಕುಸ್ತಿಯಲ್ಲಿ ಮಹಿಳಾ ಶಕ್ತಿ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಕಳೆದ ದಶಕದ ಆರಂಭದ ಕಾಲ. ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ಪ್ರೇಮಾ ಹುಚ್ಚಣ್ಣವರ ಅವರು ಏಷ್ಯನ್ ಚಾಂಪಿಯನ್‌ಷಿಪ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಂತೆ ಕರ್ನಾಟಕದ ಮಹಿಳಾ ಕುಸ್ತಿಯಲ್ಲಿ ಸಂಚಲನವಾಯಿತು. ಅಲ್ಲಿಂದ ಆರಂಭವಾದ ಅವರ ಅಭಿಯಾನ ಇನ್ನೂ ಮುಂದುವರಿಯುತ್ತಲೇ ಇದೆ.

ಪ್ರೇಮಾ ಪದಕಗಳನ್ನು ಗೆಲ್ಲುತ್ತಿರುವಾಗಲೇ ಅತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಮತಾ ಕೇಳೋಜಿ, ಲೀನಾ ಸಿದ್ಧಿ ಮತ್ತು ಶಾಲಿನಿ ಸಿದ್ಧಿ ಅವರ ಅಭ್ಯಾಸವೂ ಜೋರಾಗಿ ನಡೆಯಿತು. ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜಿನಲ್ಲಿ ಆತ್ಮಶ್ರೀ–ಅನುಶ್ರೀ ಸಹೋದರಿಯರು ವಿಶಿಷ್ಟ ಪಟ್ಟುಗಳನ್ನು ಹಾಕಿ ಎದುರಾಳಿಗಳನ್ನು ಮಣಿಸಿ ಗಮನ ಸೆಳೆಯತೊಡಗಿದರು.

ಇನ್ನೊಂದೆಡೆ ಬೆಳಗಾವಿಯಲ್ಲೂ ಬಾಲಕಿಯರು ಮತ್ತು ಮಹಿಳಾ ಕುಸ್ತಿಪಟುಗಳು ಜೂನಿಯರ್, ಸೀನಿಯರ್ ವಿಭಾಗಗಳ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುತ್ತ ಕರ್ನಾಟಕಕ್ಕೆ ಹೆಸರು ತಂದುಕೊಟ್ಟರು. ಸೋನಿಯಾ ಜಾಧವ, ಶ್ವೇತಾ, ಐಶ್ವರ್ಯಾ ದಳವಿ ಮುಂತಾದವರು ಮ್ಯಾಟ್‌ನಲ್ಲಿ ಮಿಂಚಿದರು. ಪ್ರೇಮಾ, ಮಮತಾ ಮತ್ತು ಐಶ್ವರ್ಯಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದ ಕುಸ್ತಿಪಟುಗಳ ಸಾಲಿಗೆ ಸೇರಿದರು.

ಕರ್ನಾಟಕದ ಮಹಿಳಾ ಕುಸ್ತಿಯಲ್ಲಿ ಈ ಎಲ್ಲ ಸಾಧನೆಗಳಿಗೆ ಕಾರಣ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಕುಸ್ತಿ ತರಬೇತಿಗಳು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಬಾಗಲಗೋಟೆ, ಗದಗ, ಹಳಿಯಾಳ, ದಾವಣಗೆರೆಯಲ್ಲಿ ಶಾಲಾ ಹಂತದ ಕುಸ್ತಿ ಕ್ರೀಡಾನಿಲಯಗಳನ್ನು ಹೊಂದಿದೆ. ಬೆಳಗಾವಿಯಲ್ಲಿ ಪಿಯುಸಿ ಮತ್ತು ಪದವಿ ಹಂತದಲ್ಲಿ ಮಹಿಳೆಯರಿಗೆ ತರಬೇತಿ ನೀಡುವ ರಾಜ್ಯದ ಏಕೈಕ ಕುಸ್ತಿ ಕ್ರೀಡಾ ನಿಲಯವಿದೆ. ಆಳ್ವಾಸ್‌ನಂಥ ಖಾಸಗಿ ಕಾಲೇಜುಗಳಲ್ಲೂ ಕುಸ್ತಿ ತರಬೇತಿ ಸಕ್ರಿಯವಾಗಿದೆ. ಈ ಭಾಗಗಳನ್ನು ಮಹಿಳಾ ಕುಸ್ತಿಯ ಶಕ್ತಿಕೇಂದ್ರ ಎಂದೇ ಪರಿಗಣಿಸಲಾಗಿದೆ.

‘ರಾಜ್ಯದಲ್ಲಿ ಮಹಿಳಾ ಕುಸ್ತಿ ಉತ್ತಮ ಸ್ಥಿತಿಯಲ್ಲಿದೆ. ಕೆಲವು ದೇಹತೂಕದ ಕುಸ್ತಿಪಟುಗಳು ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದು ಮುಂದಿನ ಕೆಲವೇ ವರ್ಷಗಳಲ್ಲಿ ಪ್ರಬಲ ಶಕ್ತಿಗಳಾಗಿ ಬೆಳೆಯಲಿದ್ದಾರೆ. ಉತ್ತರ ಭಾರತದ ಕುಸ್ತಿಪಟುಗಳಿಗೆ ಸರಿಸಮನಾಗಿ ಪಟ್ಟುಗಳನ್ನು ಹಾಕುವ ಸಾಮರ್ಥ್ಯ ಮೂಡಿಬರಲಿದೆ’ ಎನ್ನುತ್ತಾರೆ ಬೆಳಗಾವಿ ಕ್ರೀಡಾನಿಲಯದ ತರಬೇತುದಾರ ನಾಗರಾಜ್.

‘ಮಹಿಳಾ ಕುಸ್ತಿಯನ್ನು ತಳಮಟ್ಟದಿಂದಲೇ ಬೆಳೆಸಲು ರಾಜ್ಯದಲ್ಲಿ ಸಾಕಷ್ಟು ಕ್ರೀಡಾನಿಲಯಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ತಕ್ಕ ಫಲವೂ ಸಿಗುತ್ತಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮುವ ನಿರೀಕ್ಷೆ ಇದೆ’ ಎಂಬುದು ಹಳಿಯಾಳ ಕ್ರೀಡಾನಿಲಯದ ತುಕಾರಾಂ ಅವರ ಆಶಯ.

ಕ್ರೀಡಾನಿಲಯ ವಿಸ್ತರಣೆಗೆ ಬೇಡಿಕೆ

ಎಸ್ಎಸ್‌ಎಲ್‌ಸಿ ನಂತರ ಕ್ರೀಡಾನಿಲಯದಲ್ಲಿದ್ದು ಕುಸ್ತಿ ಅಭ್ಯಾಸ ಮಾಡಬೇಕಾದರೆ ಬೆಳಗಾವಿಗೆ ಹೋಗಬೇಕಾದ ಅನಿವಾರ್ಯ. ಅದು ಬಿಟ್ಟರೆ ಒಂದು ಕಡೆ ಕಾಲೇಜು, ಒಂದು ಕಡೆ ಕುಸ್ತಿ ಅಭ್ಯಾಸ ಮಾಡಬೇಕು. ಆದ್ದರಿಂದ ಇನ್ನಷ್ಟು ಜಿಲ್ಲೆಗಳಿಗೆ ಕಾಲೇಜು ಹಂತದ ಕ್ರೀಡಾನಿಲಯಗಳನ್ನು ವಿಸ್ತರಿಸುವ ಬೇಡಿಕೆ ಇದೆ. ಮಮತಾ ಕೇಳೋಜಿ ಅವರಂಥವರು ಕಷ್ಟಪಟ್ಟು ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಕ್ರೀಡಾನಿಲಯಗಳಿದ್ದರೆ ಅವರ ಕುಸ್ತಿ ಕಲಿಕೆಯೂ, ಪಠ್ಯ ಅಭ್ಯಾಸವೂ ಸುಗಮವಾಗಿ ನಡೆಯಲಿದೆ. ಪ್ರತಿಭಾ ಪಲಾಯನ ಅಥವಾ ಪ್ರತಿಭೆ ಮುರುಟಿ ಹೋಗುವ ಅಪಾಯವನ್ನು ತಡೆಯಬಹುದು ಎಂಬ ಅಭಿಪ್ರಾಯವಿದೆ.

‘10ನೇ ತರಗತಿಯವರೆಗೆ ಹಳಿಯಾಳದ ಡಿವೈಇಎಸ್‌ನಲ್ಲಿ ಕುಸ್ತಿ ಕಲಿತೆ. ಈಗ ಪದವಿ ಓದುತ್ತಿದ್ದೇನೆ. ಮುಂಜಾನೆ ಐದು ಗಂಟೆಗೆ ತಂದೆಯ ಜೊತೆ ಹಳಿಯಾಳಕ್ಕೆ ಹೋಗಿ ಕುಸ್ತಿ ಅಭ್ಯಾಸ ಮಾಡಿ ವಾಪಸ್ ಬಂದು ಸಿದ್ಧವಾಗಿ ಕಾಲೇಜಿಗೆ ಹೋಗಬೇಕಾಗುತ್ತದೆ. ಕ್ರೀಡಾ ನಿಲಯ ಇದ್ದಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು’ ಎಂದು ಮಮತಾ ಹೇಳಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು