ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ ಸೆಂಟರ್ ಉದ್ಯೋಗಿಯ ಕಾಲ್ಚೆಂಡಿನ ಸೆಳೆತ

Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಕೊರೊನಾ ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಲೇ ಇದೆ. ಇದರ ನಡುವೆಯೇ ಜಗತ್ತಿನ ಹಲವೆಡೆ ಫುಟ್‌ಬಾಲ್‌ ಚಟುವಟಿಕೆಗಳು ಗರಿಗೆದರಿವೆ. ಭಾರತದ ಆಟಗಾರರ ಪಾಲಿಗೂ ಸಿಹಿ ಸುದ್ದಿ ಹೊರಬಿದ್ದಿದೆ. ಇದೇ ವರ್ಷದ ಆಗಸ್ಟ್‌ನಿಂದ ದೇಶಿಯ ಫುಟ್‌ಬಾಲ್‌ ಋತು ಆರಂಭಿಸಲು ಫಿಫಾ, ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ (ಎಐಎಫ್‌ಎಫ್‌) ಹಸಿರು ನಿಶಾನೆ ತೋರಿದೆ. ಹೀಗಾಗಿ ಭಾರತದ ಪ್ರಮುಖ ಕ್ಲಬ್‌ಗಳಲ್ಲೂ ಉತ್ಸಾಹದ ಚಿಲುಮೆ ಪುಟಿದೆದ್ದಿದೆ. ಮುಂದಿನ ಋತುವಿನ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ತಂಡವನ್ನು ಬಲಪಡಿಸುವ ಕೆಲಸಕ್ಕೆ ಕ್ಲಬ್‌ಗಳು ಮುಂದಾಗಿವೆ.

ಪ್ರತೀಕ್‌ ಚೌಧರಿ

ಭಾರತದ ಅತ್ಯಂತ ಯಶಸ್ವಿ ಕ್ಲಬ್‌ ಎಂಬ ಹಣೆಪಟ್ಟಿ ಹೊಂದಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದೆ. ಈ ಹಿಂದೆ ತಂಡದಲ್ಲಿದ್ದ ಕೆಲ ಆಟಗಾರರ ಒಪ್ಪಂದ ನವೀಕರಿಸಿರುವ ಕ್ಲಬ್‌, ಹೊಸ ಮುಖಗಳಿಗೂ ಮಣೆ ಹಾಕಿದೆ. ಅವರ ಪೈಕಿ ಪ್ರತೀಕ್‌ ಚೌಧರಿ ಪ್ರಮುಖರು.

ಮುಂಬೈನ 30 ವರ್ಷ ವಯಸ್ಸಿನ ಈ ಆಟಗಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಈಗ ಬಿಎಫ್‌ಸಿ ಸದಸ್ಯರಾಗಿದ್ದೀರಿ. ಎರಡು ವರ್ಷಗಳ ಒಪ್ಪಂದದ ಬಗ್ಗೆ ಹೇಳಿ?

ನನ್ನ ಪಾಲಿಗೆ ಇದು ಹೊಸ ಸವಾಲು ಹಾಗೂ ಅವಕಾಶ. ಬಿಎಫ್‌ಸಿ, ಭಾರತದ ಯಶಸ್ವಿ ಮತ್ತು ಬಲಿಷ್ಠ ಕ್ಲಬ್‌ಗಳಲ್ಲಿ ಒಂದು. ಈ ಕ್ಲಬ್‌ನಲ್ಲಿ ಶ್ರೇಷ್ಠ ಆಟಗಾರರಿದ್ದಾರೆ. ಅವರಿಂದ ಹೊಸ ವಿಷಯಗಳನ್ನು ಕಲಿಯಲು ಉತ್ತಮ ಅವಕಾಶ ಸಿಕ್ಕಿದೆ.

* ಫುಟ್‌ಬಾಲ್‌ ಪಯಣ ಶುರುವಾಗಿದ್ದು ಹೇಗೆ?

ಶಾಲಾ ದಿನಗಳಲ್ಲಿ ಪ್ರತಿನಿತ್ಯ ಸಂಜೆ ಗೆಳೆಯರೊಡನೆಖುಷಿಗಾಗಿ ಫುಟ್‌ಬಾಲ್‌ ಆಡುತ್ತಿದ್ದೆ. ಕ್ರಮೇಣ ಇದರಲ್ಲಿ ಆಸಕ್ತಿ ಹೆಚ್ಚಾಯಿತು. ಮುಂಬೈನಲ್ಲಿ ಸ್ಥಳೀಯ ಕ್ಲಬ್‌ವೊಂದಕ್ಕೆ ಸೇರಿ ನಾಲ್ಕನೇ ಡಿವಿಷನ್‌ ಲೀಗ್‌ಗಳಲ್ಲಿ ಆಡಿದೆ. ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ತಂಡಗಳನ್ನೂ ಪ್ರತಿನಿಧಿಸುವ ಅವಕಾಶ ಲಭಿಸಿತು. 2011ರಲ್ಲಿ ಏರ್‌ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡ ನಂತರ ನನ್ನ ಕ್ರೀಡಾ‌ ಬದುಕಿಗೆ ಹೊಸ ತಿರುವು ಲಭಿಸಿತು. ಐ ಲೀಗ್‌, ಐಎಸ್‌ಎಲ್‌ ಹೀಗೆ ಪ್ರಮುಖ ಲೀಗ್‌ಗಳಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶಗಳೂ ಅರಸಿ ಬಂದವು.

* ಫುಟ್‌ಬಾಲ್‌ ಬಿಟ್ಟು ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸೆ ಇತ್ತೇ?

ಫುಟ್‌ಬಾಲ್‌ನಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ದೃಢವಾಗಿ ನಿಶ್ಚಯಿಸಿದ್ದೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೆ. ಒಂದೊಮ್ಮೆ ಅದು ಸಾಧ್ಯವಾಗದೇ ಹೋದರೆ ಭಾರತೀಯ ಸೇನೆಗೆ ಸೇರಲು ಯೋಚಿಸಿದ್ದೆ.

* ಕಾಲ್ ಸೆಂಟರ್‌ನಲ್ಲಿ ಉದ್ಯೋಗ ಮಾಡುತ್ತಲೇ ಫುಟ್‌ಬಾಲ್‌ ಕಲಿತ ದಿನಗಳ ಬಗ್ಗೆ ಹೇಳಿ?

ಆ ದಿನಗಳು ತುಂಬಾ ಕಠಿಣವಾಗಿದ್ದವು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಮುಂಜಾನೆ ಮನೆಗೆ ಬರುತ್ತಿದ್ದೆ. ಅಲ್ಲಿಂದ ಸೀದಾ ಮೈದಾನದ ಹಾದಿ ಹಿಡಿಯುತ್ತಿದ್ದೆ. ಒಮ್ಮೊಮ್ಮೆ ಕಚೇರಿ ಕೆಲಸ ಮಾಡಿ ತುಂಬಾ ದಣಿವಾಗಿಬಿಡುತ್ತಿತ್ತು. ಅಂತಹ ಸಮಯದಲ್ಲಿ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೆ. ಹಾಗಂತ ಒಮ್ಮೆಯೂ ಅಭ್ಯಾಸ ತಪ್ಪಿಸುತ್ತಿರಲಿಲ್ಲ.ಮಧ್ಯಾಹ್ನದ ಸಮಯವನ್ನು ತಾಲೀಮಿಗೆ ಮೀಸಲಿಡುತ್ತಿದ್ದೆ.

* ಈ ಹಿಂದೆ ಬಿಎಫ್‌ಸಿ ವಿರುದ್ಧ ಹಲವು ಪಂದ್ಯಗಳನ್ನು ಆಡಿದ್ದಿರಿ. ಈಗ ಅದೇ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಏನಂತೀರಿ?

ತಾಂತ್ರಿಕವಾಗಿ ಬಲಿಷ್ಠವಾಗಿರುವ ತಂಡ ಬಿಎಫ್‌ಸಿ. ಆ ತಂಡದ ವಿರುದ್ಧ ಆಡುವುದು ಬಹುದೊಡ್ಡ ಸವಾಲು. ಈಗ ಬಿಎಫ್‌ಸಿಯ ಭಾಗವಾಗಿದ್ದೇನೆ. ಈಗಲೂ ಆ ತಂಡದ ಉತ್ಕೃಷ್ಟತೆಗೆ ಹೊಂದಿಕೊಂಡು ಆಡುವ ಸವಾಲು ನನ್ನ ಎದುರಿಗಿದೆ.

*ಭಾರತ ತಂಡದಲ್ಲಿ ಇನ್ನೂ ಸ್ಥಾನ ಸಿಕ್ಕಿಲ್ಲ. ಅದು ಅಷ್ಟೊಂದು ಕಷ್ಟವೇ?

ರಾಷ್ಟ್ರೀಯ ತಂಡದ ಪರ ಆಡಬೇಕೆಂಬುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಅದು ಬಹುದೊಡ್ಡ ಗೌರವ.

* ಲಾಕ್‌ಡೌನ್‌ ಸಮಯ ಹೇಗೆ ಕಳೆಯುತ್ತಿದ್ದೀರಿ?

ಯಾವಾಗಲೂ ಕ್ರಿಯಾಶೀಲನಾಗಿರಬೇಕೆಂದು ಬಯಸುವ ವ್ಯಕ್ತಿ ನಾನು. ಲಾಕ್‌ಡೌನ್‌ನಿಂದಾಗಿ ಇದೇ ಮೊದಲ ಬಾರಿ ಮನೆಯಲ್ಲಿ ಸುದೀರ್ಘ ಸಮಯ ಇರಬೇಕಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಇರುವುದು ನಿಜಕ್ಕೂ ತುಂಬಾ ಕಷ್ಟ. ಈ ಅವಧಿಯಲ್ಲಿ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡಿದ್ದೇನೆ. ಇದಕ್ಕಾಗಿ ನಿತ್ಯವೂ ಮನೆಯ ತಾರಸಿಯ ಮೇಲೆ ವ್ಯಾಯಾಮ ಮಾಡುತ್ತೇನೆ.

* ಬೆಂಗಳೂರಿನ ಬಗ್ಗೆ ಹೇಳಿ. ಉದ್ಯಾನನಗರಿಯಲ್ಲಿ ನಿಮಗಿಷ್ಟವಾಗುವ ಸ್ಥಳ ಹಾಗೂ ಆಹಾರ ಯಾವುದು?

ಪಂದ್ಯಗಳನ್ನು ಆಡಲು ಇಲ್ಲಿ ಅನೇಕ ಬಾರಿ ಬಂದಿದ್ದೇನೆ. ಇಲ್ಲಿನ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಕಾತರನಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT