ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ವಿಶ್ವಕಪ್ ಅರ್ಹತಾ ಟೂರ್ನಿಗೆ ಉತ್ತರ ಕೊರಿಯಾ ಇಲ್ಲ

Last Updated 16 ಮೇ 2021, 15:29 IST
ಅಕ್ಷರ ಗಾತ್ರ

ಸೋಲ್: ಉತ್ತರ ಕೊರಿಯಾ ತಂಡ 2022ರ ವಿಶ್ವಕಪ್ ಫುಟ್‌ಬಾಲ್‌ನ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದೆ ಎಂದು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಭಾನುವಾರ ತಿಳಿಸಿದೆ.

ಟೂರ್ನಿಯಿಂದ ಹಿಂದೆ ಸರಿಯಲು ಕಾರಣವೇನು ಎಂದು ಉತ್ತರ ಕೊರಿಯಾ ಫುಟ್‌ಬಾಲ್ ಸಂಸ್ಥೆ ತಿಳಿಸಲಿಲ್ಲ. ಕೋವಿಡ್‌ನಿಂದಾಗಿ ಉಂಟಾಗಿರುವ ವಿಷಮ ಸ್ಥಿತಿಯೇ ಇದಕ್ಕೆ ಕಾರಣ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.

ಅರ್ಹತಾ ಟೂರ್ನಿ 2022ರ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿದೆ. ಕೋವಿಡ್‌ನಿಂದಾಗಿ 2019ರಿಂದ ಏಷ್ಯಾಮಟ್ಟದಲ್ಲಿ ಯಾವುದೇ ಅರ್ಹತಾ ಟೂರ್ನಿ ನಡೆಯಲಿಲ್ಲ. ಪ್ರಯಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಪಂದ್ಯಗಳನ್ನು ಆಯಾ ವಲಯದಲ್ಲೇ ನಡೆಸಲು ಎಎಫ್‌ಸಿ ನಿರ್ಧರಿಸಿದೆ. ಈ ವೇಳಾಪಟ್ಟಿಯ ಪ್ರಕಾರ ತುರ್ಕಮೆನಿಸ್ಥಾನ, ಲೆಬನಾನ್‌,ಶ್ರೀಲಂಕಾ ಮತ್ತು ಉತ್ತರ ಕೊರಿಯಾದ ‘ಎಚ್‌’ ಗುಂಪಿನ ಪಂದ್ಯಗಳು ದಕ್ಷಿಣ ಕೊರಿಯಾದ ಗೊಯಾಂಗ್‌ನಲ್ಲಿ ಜೂನ್‌ 3ರಿಂದ 15ರ ವರೆಗೆ ನಡೆಯಲಿವೆ.

ಮೂರು ಪಂದ್ಯಗಳು ಬಾಕಿ ಇರುವಂತೆ ಉತ್ತರ ಕೊರಿಯಾ ತಂಡ ಗುಂಪು ಹಂತದ ಪಾಯಿಂಟ್ಸ್ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ. ಲೆಬನಾನ್ ಮತ್ತು ದಕ್ಷಿಣ ಕೊರಿಯಾಗಿಂತ ಎಂಟು, ತುರ್ಕಮೆನಿಸ್ಥಾನಕ್ಕಿಂತ ಒಂದು ಪಾಯಿಂಟ್‌ನಿಂದ ತಂಡ ಹಿಂದೆ ಉಳಿದಿದೆ. ಗುಂಪು ಹಂತದ ಚಾಂಪಿಯನ್ ಮತ್ತು ಅತ್ಯುತ್ತಮ ನಾಲ್ಕು ರನ್ನರ್ ಅಪ್ ತಂಡಗಳಿಗಷ್ಟೇ ಮೂರನೇ ಸುತ್ತಿನ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಈ ಟೂರ್ನಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

ಅರ್ಹತಾ ಟೂರ್ನಿಯಿಂದ ಹಿಂದೆ ಸರಿದ ಕಾರಣ 2023ರಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಆಡುವ ಅವಕಾಶವನ್ನೂ ಉತ್ತರ ಕೊರಿಯಾ ಕಳೆದುಕೊಳ್ಳಲಿದೆ. ವಿಶ್ವಕಪ್ ಮತ್ತು ಏಷ್ಯಾಕಪ್‌ ಟೂರ್ನಿಗೆ ಅರ್ಹತಾ ಪಂದ್ಯಗಳು ಜೊತೆಯಾಗಿಯೇ ನಡೆಯುತ್ತವೆ.

ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಉತ್ತರ ಕೊರಿಯಾ ಒಲಿಂಪಿಕ್ ಸಮಿತಿ ಕಳೆದ ತಿಂಗಳಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT