ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಾಯುಷಿ ತಾಯಿ ಸೆಲೆಸ್ಟಿಗೆ ಪುತ್ರ ಪೆಲೆ ನಿಧನದ ಕುರಿತು ಗೊತ್ತೇ ಇಲ್ಲ!

Last Updated 1 ಜನವರಿ 2023, 21:30 IST
ಅಕ್ಷರ ಗಾತ್ರ

ಸ್ಯಾಂಟೋಸ್, ಬ್ರೆಜಿಲ್: ದಿಗ್ಗಜ ಫುಟ್‌ಬಾಲ್ ಆಟಗಾರ ಪೆಲೆ ಅವರು ನಿಧನರಾಗಿ ನಾಲ್ಕು ದಿನಗಳು ಕಳೆದಿವೆ. ಮಂಗಳವಾರ ಬ್ರೆಜಿಲ್‌ ದೇಶದ ಸ್ಯಾಂಟೋಸ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಆದರೆ ಇದುವರೆಗೂ ಅವರ ತಾಯಿ, ಶತಾಯುಷಿ ಸೆಲೆಸ್ಟಿ ಅರಾಂಟೆಸ್ ಅವರಿಗೆ ಇನ್ನೂ ಪುತ್ರನ ನಿಧನದ ಕುರಿತು ತಿಳಿದಿಲ್ಲ ಎಂದು ಪೆಲೆ ಅವರ ತಂಗಿ ಮರಿಯಾ ಲೂಸಿಯಾ ಡು ನಸಿಮೆಂಟೊ ಹೇಳಿದ್ದಾರೆ.

100 ವರ್ಷದ ಸೆಲೆಸ್ಟಿಯವರನ್ನು ಮರಿಯಾ ಅವರೇ ಬಹುಕಾಲದಿಂದ ಆರೈಕೆ ಮಾಡುತ್ತಿದ್ದಾರೆ. ಸೆಲೆಸ್ಟಿಯವರಿಗೆ ವಯೋಸಹಜವಾದ ಕಾಯಿಲೆ ಹಾಗೂ ಸ್ಮರಣಶಕ್ತಿ ಕುಂದಿದೆ. ಆದ್ದರಿಂದ ಅವರಿಗೆ ಪೆಲೆ ಸಾವಿನ ಕುರಿತು ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ಡೇಲಿ ಮೇಲ್ ವರದಿ ಮಾಡಿದೆ.

82 ವರ್ಷದ ಪೆಲೆ ಕ್ಯಾನ್ಸರ್‌ ಕಾಯಿಲೆಯಿಂದ ಈಚೆಗೆ ನಿಧನರಾದರು.

‘ನನಗೆ ಡಬಲ್ ನಷ್ಟ(ಎಎಫ್‌ಪಿ ವರದಿ)

‘ಪೆಲೆ ನಿಧನದಿಂದ ನನಗೆ ಡಬಲ್ ನಷ್ಟವಾಗಿದೆ. ಒಬ್ಬ ಸ್ನೇಹಿತ ಮತ್ತು ಒಬ್ಬ ಬಹುಕಾಲದ ಗ್ರಾಹಕನನ್ನು ಕಳೆದುಕೊಂಡಿದ್ದೇನೆ’ ಎಂದು ಸುಮಾರು 66 ವರ್ಷಗಳಿಂದ ಪೆಲೆ ಅವರ ಕೇಶವಿನ್ಯಾಸ ಮಾಡುತ್ತಿದ್ದ ಬ್ರೆಜಿಲ್‌ನ ಕ್ಷೌರಿಕ ಜಾವೊ ಅರೌಜೊ (ದಿದಿ) ದುಃಖ ವ್ಯಕ್ತಪಡಿಸಿದ್ದಾರೆ.

‘ಬ್ರೆಜಿಲ್‌ನ ಬಹಳ ಹೆಗ್ಗುರುತಾಗಿದ್ದ ಪೆಲೆಯನ್ನು ಕಳೆದುಕೊಂಡಿದ್ದೇವೆ. ಇಡೀ ವಿಶ್ವಕ್ಕೆ ಇದು ನಷ್ಟ. ನನಗಂತೂ ಅತ್ಯಂತ ಗಣ್ಯ ಗ್ರಾಹಕ ಮತ್ತು ಸಹೃದಯೀ ಗೆಳೆಯನ್ನು ಅಗಲಿದ ನೋವು ಕಾಡುತ್ತಿದೆ’ ಎಂದು 84 ವರ್ಷದ ದಿದಿ ಹೇಳಿದ್ದಾರೆ.

ಪೆಲೆ ತಮ್ಮ 16ನೇ ವಯಸ್ಸಿನಲ್ಲಿ ಸ್ಯಾಂಟೋಸ್‌ ಕ್ಲಬ್‌ಗೆ ಆಡಲು ಆರಂಭಿಸಿದ ಸಮಯದಿಂದಲೂ ದಿದಿ ಬಳಿಯೇ ಕ್ಷೌರ ಮಾಡಿಸುತ್ತಿದ್ದರು. ಅವರು ವಿಶ್ವ ಫುಟ್‌ಬಾಲ್‌ನಲ್ಲಿ ಬಹು ಎತ್ತರಕ್ಕೆ ಬೆಳೆದರೂ ತಮ್ಮ ಕೇಶವಿನ್ಯಾಸಕ್ಕೆ ಮಾತ್ರ ದಿದಿ ಬಳಿಯೇ ತೆರಳುತ್ತಿದ್ದರು.

ದಿದಿ ತಮ್ಮ ಅಂಗಡಿಯ ತುಂಬ ಪೆಲೆಯವರ ವಿವಿಧ ಚಿತ್ರಗಳು ಪ್ರದರ್ಶಿಸಿದ್ದಾರೆ. ಆ ಸ್ಥಳ ಒಂದು ರೀತಿಯಲ್ಲಿ ಪೆಲೆ ನೆನಪಿನ ಮ್ಯೂಸಿಯನಂತೆ ಗೋಚರಿಸುತ್ತಿದೆ. ಪೆಲೆಯ ಅಭಿಮಾನಿಗಳು ಅಂಗಡಿಗೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

‘ಪೆಲೆ ಇಲ್ಲಿಗೆ ಬಂದಾಗ ಕಿಂಗ್ ಆಗಿರಲಿಲ್ಲ. ಆದರೆ ನಂತರ ಅರಸನಾಗಿ ಬೆಳೆದು, ಅರಸನಾಗಿಯೇ ನಿಧನರಾದರು’ ಎಂದು ದಿದಿ ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT