ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್‌ ಟೂರ್ನಿ: ಕತಾರ್‌ಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ

7

ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್‌ ಟೂರ್ನಿ: ಕತಾರ್‌ಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ

Published:
Updated:

ಅಬುಧಾಬಿ: ನಾಲ್ಕು ಬಾರಿಯ ಚಾಂಪಿಯನ್‌ ಜಪಾನ್‌ ತಂಡವನ್ನು ಮಣಿಸಿದ ಕತಾರ್‌, ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಇಲ್ಲಿನ ಜೈಯದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಕತಾರ್‌ 3–1ರಿಂದ ಗೆದ್ದಿತು. ಕತಾರ್ ಇದೇ ಮೊದಲ ಬಾರಿ ಟೂರ್ನಿಯ ಫೈನಲ್ ಪ್ರವೇಶಿಸಿತ್ತು.

ಬಲಿಷ್ಠ ಜಪಾನ್ ಎದುರು ಕತಾರ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಮೊದಲ ನಿಮಿಷದಲ್ಲೇ ತಂಡಕ್ಕೆ ಫ್ರೀ ಕಿಕ್ ಲಭಿಸಿತು. ಜಪಾನ್ ಪಟ್ಟುಬಿಡಲಿಲ್ಲ. ಹೀಗಾಗಿ ಪಂದ್ಯ ರೋಚಕವಾಯಿತು. ಮೂರನೇ ನಿಮಿಷದಲ್ಲಿ ಜಪಾನ್‌ಗೂ ಫ್ರೀ ಕಿಕ್ ಲಭಿಸಿತು.

12ನೇ ನಿಮಿಷದಲ್ಲಿ ಕತಾರ್‌ನ ಅಲ್ಮೆಜ್ ಅಲಿ ಜಾದೂ ಮಾಡಿದರು. ಎದುರಾಳಿ ತಂಡದ ಆವರಣದಲ್ಲಿ ಗೊಂದಲ ಸೃಷ್ಟಿಸಿ ಅಕ್ರಮ್‌ ಹಸನ್‌ ನೀಡಿದ ಕ್ರಾಸ್‌ನಲ್ಲಿ ಅಲ್ಮೆಜ್‌, ತಲೆಕೆಳಗಾಗಿಸಿ ಚೆಂಡನ್ನು ಬಲಗಾಲಿನಲ್ಲಿ ಒದ್ದರು. ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿದು ಬಲೆಯೊಳಗೆ ಸೇರಿತು.

27ನೇ ನಿಮಿಷದಲ್ಲಿ ಅಬ್ದುಲ್ ಹಜೀಜ್‌, ಕತಾರ್‌ಗೆ ಮತ್ತೊಂದು ಗೋಲು ಗಳಿಸಿಕೊಟ್ಟರು. ಅಕ್ರಮ್ ಹಸನ್ ನೀಡಿದ ಪಾಸ್‌ ಅನ್ನು ನಿಯಂತ್ರಿಸಿದ ಅಬ್ದುಲ್‌ ಚೆಂಡನ್ನು ಎಡಗಾಲಿನಿಂದ ಒದ್ದು ನಿಖರವಾಗಿ ಗುರಿ ಸೇರಿಸಿದರು.

69ನೇ ನಿಮಿಷದಲ್ಲಿ ತಕುಮಿ ಮಿನಮಿನೊ ಗಳಿಸಿದ ಗೋಲಿನ ಮೂಲಕ ಜಪಾನ್ ತಿರುಗೇಟು ನೀಡಲು ಮುಂದಾಯಿತು. ಆದರೆ ಕತಾರ್ ಓಟಕ್ಕೆ ಇದು ಅಡ್ಡಿಯಾಗಲಿಲ್ಲ. ಪಂದ್ಯದ ಮುಕ್ತಾಯಕ್ಕೆ ಏಳು ನಿಮಿಷ ಬಾಕಿ ಇದ್ದಾಗ ಅಕ್ರಮ್‌ ಹಸನ್ ಅಫಿಫ್‌ ಗಳಿಸಿದ ಗೋಲು, ತಂಡದ ಗೆಲುವನ್ನು ಖಚಿತಪಡಿಸಿತು. ರೆಫರಿ ಕೊನೆಯ ಸೀಟಿ ಊದುತ್ತಿದ್ದಂತೆ ತಂಡದ ಆಟಗಾರರು ಸಂತಸದ ಹೊಳೆಯಲ್ಲಿ ಮಿಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !