ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್ ಫುಟ್‌ಬಾಲ್‌: ಮೆಸ್ಸಿ ವಿರುದ್ಧ ರೊನಾಲ್ಡೊ ಮೇಲುಗೈ

Last Updated 9 ಡಿಸೆಂಬರ್ 2020, 14:25 IST
ಅಕ್ಷರ ಗಾತ್ರ

ಬಾರ್ಸಿಲೋನಾ: ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಯೊನೆಲ್ ಮೆಸ್ಸಿ ನಡುವಣ ಹಣಾಹಣಿ ಎಂದೇ ಬಿಂಬಿತವಾದ ಪಂದ್ಯದಲ್ಲಿ ಯುವೆಂಟಸ್‌ ಆಟಗಾರ ಮೇಲುಗೈ ಸಾಧಿಸಿದರು. ಚಾಂಪಿಯನ್ಸ್ ಲೀಗ್ ಫುಟ್‌ಬಾಲ್‌ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಯುವೆಂಟಸ್‌ 3–0 ಯಿಂದ ಬಾರ್ಸಿಲೋನಾ ಎದುರು ಗೆದ್ದಿತು. ಲೀಗ್ ಇತಿಹಾಸದಲ್ಲಿ ಏಳು ವರ್ಷಗಳ ಬಳಿಕ ಬಾರ್ಸಿಲೋನಾ ಮೊದಲ ಬಾರಿ ತವರಿನ ಪಂದ್ಯದಲ್ಲಿ ಸೋಲು ಅನುಭವಿಸಿತು.

ರೊನಾಲ್ಡೊ ಅವರು ಪೆನಾಲ್ಟಿ ಅವಕಾಶಗಳಲ್ಲಿ 13ನೇ ಹಾಗೂ 52ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಇನ್ನೊಂದು ಗೋಲು ಮೆಕೆನ್ನಿ (20ನೇ ನಿಮಿಷ) ಮೂಲಕ ಬಂತು.

ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿವೆ.

ರೊನಾಲ್ಡೊ ಅವರು ಬಾರ್ಸಿಲೋನಾ ಡಿಫೆನ್ಸ್ ಆಟಗಾರರ ಲೋಪಗಳ ಲಾಭ ಪಡೆದು ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಮೆಸ್ಸಿ ಐದು ಬಾರಿ ಪ್ರಯತ್ನಿಸಿದರೂ ಯುವೆಂಟಸ್‌ ಗೋಲ್‌ಕೀಪರ್‌ ಗಿಯಾನ್‌ಲೂಗಿ ಬಫೋನ್‌ ಅವರ ತಡೆಯನ್ನು ದಾಟಲಾಗಲಿಲ್ಲ.

ಈ ಗೆಲುವಿನೊಂದಿಗೆ ಲೀಗ್‌ನ ಜಿ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಯುವೆಂಟಸ್‌ ಮೊದಲ ಸ್ಥಾನಕ್ಕೇರಿತು. ಆ ತಂಡದ ಬಳಿ 15 ಪಾಯಿಂಟ್ಸ್ ಇವೆ. ಬಾರ್ಸಿಲೋನಾ ಕೂಡ ಇಷ್ಟೇ ಪಾಯಿಂಟ್ಸ್ ಹೊಂದಿದ್ದರೂ ಗೋಲುಗಳ ಲೆಕ್ಕದಲ್ಲಿ ಹಿಂದಿದ್ದು, ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈಗಾಗಲೇ ನಾಕೌಟ್‌ ಸುತ್ತಿಗೆ ಸ್ಥಾನ ಖಚಿತಪಡಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT