ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಕೋಲ್ಕತ್ತ ಡರ್ಬಿಗೆ 100ರ ಸಂಭ್ರಮ

Last Updated 18 ಫೆಬ್ರುವರಿ 2021, 14:02 IST
ಅಕ್ಷರ ಗಾತ್ರ

ಫತೋರ್ಡ, ಗೋವಾ: ಭಾರತ ಫುಟ್‌ಬಾಲ್‌ನಲ್ಲಿ ಮಹತ್ವದ ಮೈಲುಗಲ್ಲೊಂದಕ್ಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಶುಕ್ರವಾರ ಸಾಕ್ಷಿಯಾಗಲಿದೆ. ಕೋಲ್ಕತ್ತದ ಪ್ರಮುಖ ತಂಡಗಳಾದ ಎಟಿಕೆ ಮೋಹನ್ ಬಾಗನ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ನಡುವಿನ 100ನೇ ಡರ್ಬಿ ಫತೋರ್ಡ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು 1921ರ ಕೂಚ್ ಬೆಹಾರ್ ಕಪ್‌ ಟೂರ್ನಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ಈ ತಂಡಗಳ ಹೆಸರು ಈಗ ಬದಲಾಗಿದ್ದು ಎಟಿಕೆ ಮೋಹನ್ ಬಾಗನ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ಎಂದಾಗಿದೆ. ಐಎಸ್‌ಎಲ್‌ನ ಹಾಲಿ ಚಾಂಪಿಯನ್‌ ಎಟಿಕೆ ಮೋಹನ್ ಬಾಗನ್ ಈ ಬಾರಿಯೂ ಉತ್ತಮ ಸಾಮರ್ಥ್ಯ ತೋರಿದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ.

ಲೀಗ್ ಹಂತದ ಚಾಂಪಿಯನ್‌ ತಂಡಕ್ಕೆ ನೀಡುವ ‘ಲೀಗ್ ವಿನ್ನರ್ಸ್ ಶೀಲ್ಡ್’ ತನ್ನದಾಗಿಸಿಕೊಳ್ಳುವತ್ತ ಎಟಿಕೆಎಂಬಿ ಹೆಜ್ಜೆ ಇರಿಸಿದೆ. ಐಎಸ್‌ಎಲ್‌ಗೆ ಇದೇ ಮೊದಲ ಬಾರಿ ಪ್ರವೇಶಿಸಿರುವ ಈಸ್ಟ್ ಬೆಂಗಾಲ್ ಆರಂಭದಲ್ಲಿ ಕಳಪೆ ಆಟವಾಡಿತ್ತು. ಈಚಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದೆ. ಆದರೂ 10 ತಂಡಗಳಿರುವ ಲೀಗ್‌ನ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಫತೋರ್ಡ ಅಂಗಣದಲ್ಲಿ ನಡೆಯಲಿರುವ ಐತಿಹಾಸಿಕ ಪಂದ್ಯದಲ್ಲಿ ಗೆದ್ದು ಮೂರು ಪಾಯಿಂಟ್‌ ಗಳಿಸಲು ಎರಡೂ ತಂಡಗಳು ಪ್ರಯತ್ನಿಸಲಿವೆ. ರಾಬಿ ಫಾವ್ಲರ್ ಕೋಚ್ ಆಗಿರುವ ಈಸ್ಟ್ ಬೆಂಗಾಲ್ ಗೆದ್ದು ಗೌರವ ಉಳಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದರೆ ಆ್ಯಂಟೋನಿಯೊ ಹಬಾಸ್ ಅವರ ಎಟಿಕೆಎಂಬಿ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸುವ ಗುರಿಯೊಂದಿಗೆ ಆಡಲಿದೆ.

ಏಳನೇ ಆವೃತ್ತಿಯಲ್ಲಿ ಈ ವರೆಗೆ ಎಟಿಕೆಎಂಬಿ ಹೆಚ್ಚು ಗೋಲು ಗಳಿಸಿ ಕಡಿಮೆ ಗೋಲುಗಳನ್ನು ಎದುರಾಳಿ ತಂಡಗಳಿಗೆ ನೀಡಿದೆ. ಅದು 17 ಪಂದ್ಯಗಳಲ್ಲಿ 23 ಗೋಲು ಗಳಿಸಿದ್ದರೆ, ಈಸ್ಟ್ ಬೆಂಗಾಲ್ ಅಷ್ಟೇ ಪಂದ್ಯಗಳಲ್ಲಿ ಗಳಿಸಿರುವುದು 15 ಗೋಲು ಮಾತ್ರ. ಬೆಂಗಾಲ್ ತಂಡಕ್ಕೆ ಈ ಡರ್ಬಿ ಮುಂದಿನ ಆವೃತ್ತಿಯಲ್ಲಿ ಉತ್ತಮ ಆಟವಾಡಲು ಅಭ್ಯಾಸವಾಗಲಿದೆ. ಯಾಕೆಂದರೆ ಐಎಸ್‌ಎಲ್‌ನಲ್ಲಿ ಆ ತಂಡದ ಪ್ಲೇ ಆಫ್ ಕನಸು ಬಹುತೇಕ ಕಮರಿ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT