ಬುಧವಾರ, ನವೆಂಬರ್ 13, 2019
17 °C

ಅದೃಷ್ಟ ಅರಸುತ್ತ ಸ್ಲೊವೇನಿಯಾದತ್ತ ಯುವ ಫುಟ್‌ಬಾಲ್ ಆಟಗಾರ

Published:
Updated:

ಬೆಂಗಳೂರು ಫುಟ್ ಬಾಲ್ ಕ್ಲಬ್ ನ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ ಮಣಿಪುರದ ಹುಡುಗ ಶ್ರೀದರ್ಥ್ ನೊಂಗ್ ಮೆಕಾಪಮ್ ಈಗ ಸ್ಲೊವೇನಿಯಾದಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ಧಾರೆ. ಉದಾಂತ ಸಿಂಗ್ ಅವರಿಗೂ ಇದೇ ರೀತಿ ಅವಕಾಶ ಲಭಿಸಿದ ನಂತರ ಭಾರತ ತಂಡದಲ್ಲಿ ಮಿಂಚಿದ್ದರು. ಶ್ರೀದರ್ಥ್ ಕೂಡ ರಾಷ್ಟ್ರೀಯ ತಂಡದ ಆಸ್ತಿಯಾಗಬಲ್ಲರೇ ಎಂಬುದು ಸದ್ಯದ ಕುತೂಹಲ

ನಾಲ್ಕು ವರ್ಷಗಳ ಹಿಂದಿನ ಮಾತು. ದೇಶಿ ಫುಟ್‌ಬಾಲ್‌ನಲ್ಲಿ ಮಿಂಚುತ್ತಿದ್ದ ಮಣಿಪುರದ ಯುವ ಆಟಗಾರ ಉದಾಂತ ಸಿಂಗ್ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಅಕಾಡೆಮಿಯ ಆಡಳಿತದವರ ಕಣ್ಣಿಗೆ ಬಿದ್ದರು. ಬೆಂಗಳೂರಿಗೆ ಕರೆಸಿಕೊಂಡು ತರಬೇತಿ ನೀಡಿದರು. ಎಎಫ್‌ಸಿ ಕಪ್ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ ಅವರನ್ನು 2015ರ ಐಎಸ್‌ಎಲ್ ಟೂರ್ನಿಗೆ ಆಯ್ಕೆ ಮಾಡದೆ ಇಂಗ್ಲೆಂಡ್‌ಗೆ ಕಳುಹಿಸಲಾಯಿತು. ಅಲ್ಲಿನ ಆಕ್ಸ್‌ಫರ್ಡ್ ಯುನೈಟೆಡ್ ಕ್ಲಬ್‌ನಲ್ಲಿ ತರಬೇತಿ ಪಡೆದು ಬಂದ ನಂತರ ಉದಾಂತ ವೃತ್ತಿ ಬದುಕು ಹೊಸ ದಿಕ್ಕಿನಲ್ಲಿ ಸಾಗಿತು. ರಾಷ್ಟ್ರೀಯ ತಂಡಕ್ಕೂ ಬಿಎಫ್‌ಸಿಗೂ ಆಸ್ತಿಯಾದರು.

ಇದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ, ಮಣಿಪುರದ ಮತ್ತೊಬ್ಬ ಯುವ ಆಟಗಾರ ಶ್ರೀದರ್ಥ್ ನೊಂಗ್‌ಮೆಕಾಪಮ್. ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ಅವರು ಈಗ ಅದೃಷ್ಟದ ಬೆನ್ನೇರಿ ಸ್ಲೊವೇನಿಯಾಗೆ ತೆರಳಿದ್ದಾರೆ. ಅಲ್ಲಿನ ’ಎನ್‌ಡಿ ಲಿರಿಯಾ 1911‘ ಕ್ಲಬ್‌ನಲ್ಲಿ ಅಲ್ಪಾವಧಿಯ ತರಬೇತಿ ಪಡೆಯುತ್ತಿರುವ ಶ್ರೀದರ್ಥ್ ಶಿಬಿರದಲ್ಲಿ ಸಾಮರ್ಥ್ಯ ಸಾಬೀತು ಮಾಡಿದರೆ ಆ ಕ್ಲಬ್‌ನ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಭಾರತದ ರಾಷ್ಟ್ರೀಯ ಫುಟ್‌ಬಾಲ್‌ನ ಸಂಪತ್ತಾಗಿಯೂ ಬೆಳೆಯುವ ಭರವಸೆ ಮೂಡಿಸಿದ್ದಾರೆ.

ಮಣಿಪುರದಿಂದ ಗೋವಾ; ಅಲ್ಲಿಂದ ಉದ್ಯಾನ ನಗರಿ

ಹುಟ್ಟೂರು ಪುಕಾವೊದಲ್ಲಿ ಶಾಲಾ ದಿನಗಳಲ್ಲೇ ಕಾಲ್ಚೆಂಡಿನಾಟಕ್ಕೆ ಮಾರುಹೋಗಿದ್ದ ಶ್ರೀದರ್ಥ್ ಬೆಳಕಿಗೆ ಬಂದದ್ದು ಸುಬ್ರತೊ ಕಪ್ ಟೂರ್ನಿಯಲ್ಲಿ. ಈ ಟೂರ್ನಿಯಲ್ಲಿ ಚರುಕಿನ ಆಟವಾಡಿದ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ಗಮನ ಸೆಳೆದರು. ಇದು ಗೋವಾದಲ್ಲಿ ‘ಎಐಎಫ್‌ಎಫ್ ಎಲೀಟ್ ಅಕಾಡೆಮಿ’ ಸೇರಲು ನೆರವಾಯಿತು. ಬಿಬಿಯಾನೊ ಫೆರ್ನಾಂಡಸ್ ಬಳಿ ಫುಟ್‌ಬಾಲ್‌ನ ತಂತ್ರಗಳಿಗೆ ಸಾಣೆ ಹಿಡಿದು 15 ಮತ್ತು 16 ವರ್ಷದೊಳಗಿನವರ ಭಾರತ ತಂಡದಲ್ಲಿ ಮಿನುಗಿದರು.

15 ವರ್ಷದೊಳಗಿನವರ ಸ್ಯಾಫ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಅವರುಮುಂದಿನ ವರ್ಷ ನಡೆಯಲಿರುವ 16 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ನ ಫೈನಲ್ ಸುತ್ತು ಪ್ರವೇಶಿಸಲು  ಭಾರತ ತಂಡಕ್ಕೆ ನೆರವಾದರು.

ಗೋವಾದಲ್ಲಿದ್ದಾಗ ಅನೀಶ್‌ ಮಜುಂದಾರ್ ಮೂಲಕ ಶ್ರೀದರ್ಥ್ ಬಗ್ಗೆ ತಿಳಿದ ಬಿಎಫ್‌ಸಿ ಅಕಾಡೆಮಿಯ ಕೋಚ್ ನೌಶಾದ್ ಮೂಸಾ, ಅಕಾಡೆಮಿಗೆ ಕರೆಸಿಕೊಂಡರು. ಇಲ್ಲಿ ತರಬೇತಿ ಪಡೆಯುತ್ತಿರುವಾಗಲೇ ಸ್ಲೊವೇನಿಯಾಗೆ ತೆರಳುವ ಅವಕಾಶವೂ ಒದಗಿ ಬಂತು. ಮೂರು ವಾರ ಅಲ್ಲಿ ಇರುವ ಶ್ರೀದರ್ಥ್ ವಾಪಸ್ ಬಂದು ಎಎಫ್‌ಸಿ ಚಾಂಪಿಯನ್‌ಷಿಪ್‌ನ ಫೈನಲ್ ಹಂತದ ಪಂದ್ಯಗಳಿಗಾಗಿ ಅಭ್ಯಾಸ ಮಾಡಲಿದ್ದಾರೆ.

ಫುಟ್‌ಬಾಲ್ ನಾಡು; ಕ್ರೀಡಾಪಟುಗಳ ಬೀಡು

ಮಣಿಪುರ ಅನೇಕ ಕ್ರೀಡಾಪಟುಗಳನ್ನು, ವಿಶೇಷವಾಗಿ ಫುಟ್‌ಬಾಲ್ ಆಟಗಾರರನ್ನು ಕಾಣಿಕೆ ನೀಡಿದ ರಾಜ್ಯ. ಶ್ರೀದರ್ಥ್ ಮನೆಯಲ್ಲೂ ಕ್ರೀಡಾ ವಾತಾವರಣವಿತ್ತು. ತಂದೆ ಪ್ರಮುಖ ಕ್ಲಬ್‌ಗಳಾದ ಮೋಹನ್ ಬಾಗನ್, ಚರ್ಚಿಲ್ ಬ್ರದರ್ಸ್, ಡೆಂಪೊ ಎಸ್‌ಸಿ ಮುಂತಾದ ತಂಡಗಳಲ್ಲಿ ಆಡಿದವರು. ಯೂತ್ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಆಡಿದ್ದ ಅವರು ನಿವೃತ್ತರಾದ ನಂತರ ಮಣಿಪುರದಲ್ಲೇ ‘ಯುನೈಟೆಡ್ ಫುಕಾವೊ ಸ್ಪೋರ್ಟ್ಸ್ ಅಸೋಸಿಯೇಷನ್’ ಎಂಬ ಕ್ಲಬ್ ಆರಂಭಿಸಿದರು. ತಂದೆಯ ಕ್ಲಬ್‌ನಲ್ಲೇ ಕಾಲ್ಚೆಂಡು ಆಟದ ಬಾಲಪಾಠವನ್ನು ಕಲಿತ ಶ್ರೀದರ್ತ್‌ಗೆ ಮೊದಲ ಕೋಚ್ ತಂದೆಯೇ.

ಇದನ್ನೂ ಓದಿ: ಫುಟ್ ಬಾಲ್ ಜ್ವರದ ಕಾವು

ಮಾವ ಸುರೇಶ್ ಮೇತಿ ಕೂಡ ಫುಟ್‌ಬಾಲ್ ಆಟಗಾರ. ಆರ್ಮಿ ರೆಡ್ ತಂಡವನ್ನು ಮುನ್ನಡೆಸಿದವರು. ಸಹೋದರ ರೊನಾಲ್ಜಿತ್ ಸಿಂಗ್ ಯುನೈಟೆಡ್ ಫುಕಾವೊ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡದ ಪ್ರಮುಖ ಆಟಗಾರ. ಇಂಥ ವಾತಾವರಣ ಶ್ರೀದರ್ಥ್ ಪ್ರತಿಭೆಯನ್ನು ಬೆಳೆಸಿತು, ಬದುಕಿಗೆ ಹೊಸ ದಿಸೆ ತೋರಿಸಿತು. 

ಗೋಲು ಗಳಿಸಲು ಹಾತೊರೆಯುವ ಮನ

ಮೂರು ವಾರಗಳ ನಂತರ ಶ್ರೀದರ್ಥ್ ವಾಪಸಾಗುತ್ತಾರೆ. ನಂತರ ಎಎಫ್‌ಸಿ ಕಪ್‌ಗಾಗಿ ಅಭ್ಯಾಸದಲ್ಲಿ ತೊಡಗುತ್ತಾರೆ. ಅಷ್ಟರಲ್ಲಿ ಸ್ಲೊವೇನಿಯಾದ ತಂಡಕ್ಕೆ ಆಯ್ಕೆಯಾಗಿದ್ದಾರೆಯೇ ಇಲ್ಲವೋ ಎಂಬುದು ತಿಳಿಯುತ್ತದೆ. ಅಲ್ಲಿ ಆಡಲು ಆಯ್ಕೆಯಾದರೆ ಸಂತೋಷದಿಂದಲೇ ಕಳುಹಿಸಿಕೊಡಲಾಗುವುದು. ಎಲ್ಲ ಬಗೆಯ ನೆರವೂ ನೀಡಲಾಗುವುದು. ನಾನು ಕಂಡಂತೆ ಶ್ರೀದರ್ಥ್ ಅತ್ಯುತ್ತಮ ಸ್ಟ್ರೈಕರ್. ಗೋಲು ಗಳಿಸಲು ಸದಾ ಹಾತೊರೆಯುವ ಆಟಗಾರ. ವಯಸ್ಸನ್ನು ಮೀರಿದ ಪ್ರತಿಭೆ ಅವರಲ್ಲಿದ್ದು ಭಾರತದ ಫುಟ್‌ಬಾಲ್ ಕ್ಷೇತ್ರದ ಭರವಸೆಯಾಗಿ ಮೂಡಿದ್ದಾರೆ ಎನ್ನುತ್ತಾರೆ ಬಿಎಫ್ ಸಿ ಅಕಾಡೆಮಿ ಕೋಚ್  ನೌಶಾದ್ ಮೂಸಾ.

ಯುವ ಪ್ರತಿಭೆಗಳನ್ನು ಬೆಳೆಸಲು ನೆರವು ನೀಡಲಾಗುತ್ತಿದೆ

ಯುವ ಪ್ರತಿಭೆಗಳನ್ನು ಹುಡುಕಿ ಅವರಲ್ಲಿರುವ ಸಾಮರ್ಥ್ಯ ಹೊರಗೆಡವಲು ವೇದಿಕೆ ಕಲ್ಪಿಸುವ ಕಾರ್ಯವನ್ನು ಜೆಎಸ್ ಡಬ್ಲ್ಯು ಬಿಎಫ್ ಸಿ ಅಕಾಡೆಮಿ ಮಾಡುತ್ತಿದೆ.  ಯುವ ಆಟಗಾರರನ್ನು ಪೋಷಿಸಲು ಮತ್ತು ಬೆಳೆಸಲು ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಇದರಿಂದ ಭಾರತ ತಂಡಕ್ಕೆ ಉತ್ತಮ ಆಟಗಾರರನ್ನು ಕಾಣಿಕೆಯಾಗಿ ನೀಡಲು ಸಾಧ್ಯವಾದರೆ ನಮ್ಮ ಕೆಲಸ ಸಾರ್ಥಕವಾದಂತೆಯೇ ಎನ್ನುತ್ತಾರೆ ಜೆಎಸ್ ಡಬ್ಲ್ಯು ಸಿಇಒ ಮಂದಾರ್ ತಮ್ಹಾನೆ.


ಮಂದಾರ್ ತಮ್ಹಾನೆ

ಪ್ರತಿಕ್ರಿಯಿಸಿ (+)