ಬುಧವಾರ, ಏಪ್ರಿಲ್ 14, 2021
24 °C
ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌: ಮುಬೈ ಸಿಟಿ ಎಫ್‌ಸಿಗೆ ಎಟಿಕೆಎಂಬಿ ಸವಾಲು

ಐಎಸ್‌ಎಲ್‌: ಗೋವಾ–ಎಚ್‌ಎಫ್‌ಸಿ ಸೆಣಸು; ಪ್ಲೇ ಆಫ್ ಸ್ಥಾನ ಯಾರಿಗೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ, ಗೋವಾ: ಹೈದರಾಬಾದ್ ಎಫ್‌ಸಿ ಮತ್ತು ಆತಿಥೇಯ ಎಫ್‌ಸಿ ಗೋವಾ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಅತ್ಯಂತ ರೋಚಕ ಎನ್ನಬಹುದಾದ ಪಂದ್ಯದಲ್ಲಿ ಭಾನುವಾರ ಸೆಣಸಲಿವೆ. ಪ್ಲೇ ಆಫ್ ಹಂತದಲ್ಲಿ ಉಳಿದಿರುವ ಏಕೈಕ ಸ್ಥಾನಕ್ಕಾಗಿ ಈ ಎರಡು ತಂಡಗಳು ಹೋರಾಡಲಿದ್ದು ಹೈದರಾಬಾದ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 

ದಿನದ ಮತ್ತೊಂದು ಪಂದ್ಯದಲ್ಲಿ ಟೂರ್ನಿಯ ದೈತ್ಯ ತಂಡಗಳೆಂದೇ ಕರೆಯಲಾಗುವ ಎಟಿಕೆ ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಎಫ್‌ಸಿ ಮುಖಾಮುಖಿಯಾಗಲಿದ್ದು ಲೀಗ್‌ ಚಾಂಪಿಯನ್‌ಷಿಪ್‌ ಮೇಲೆ ಕಣ್ಣಿಟ್ಟು ಎರಡೂ ತಂಡಗಳು ಕಣಕ್ಕೆ ಇಳಿಯಲಿವೆ.

ಗೋವಾ ಮತ್ತು ಹೈದರಾಬಾದ್‌ ನಡುವಿನ ಪಂದ್ಯವನ್ನು ‘ಮಿನಿ ಫೈನಲ್‌’ ಎಂದೇ ಪರಿಗಣಿಸಲಾಗಿದೆ. ಎಟಿಕೆ, ಮುಂಬೈ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಈಗಾಗಲೇ ಪ್ಲೇ ಆಫ್‌ ಹಂತದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ. ಗೋವಾ 30 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆ ತಂಡವನ್ನು ಕೆಳಕ್ಕೆ ತಳ್ಳಿ ನಾಲ್ಕನೇ ಸ್ಥಾನದಲ್ಲಿ ರಾರಾಜಿಸಲು ಹೈದರಾಬಾದ್‌ಗೆ ಗೆಲುವು ಅನಿವಾರ್ಯ. ಡ್ರಾ ಸಾಧಿಸಿದರೂ ಗೋವಾ ನಾಲ್ಕರ ಘಟ್ಟದಲ್ಲಿ ಕಾಣಿಸಿಕೊಳ್ಳಲಿದೆ. 

‘ಪ್ರತಿಯೊಂದು ಪಂದ್ಯದಲ್ಲೂ ಒತ್ತಡ ಇದ್ದೇ ಇರುತ್ತದೆ. ಎಲ್ಲ ಪಂದ್ಯಗಳಲ್ಲೂ ಮೂರು ಪಾಯಿಂಟ್‌ಗಾಗಿ ತಂಡ ಪ್ರಯತ್ನಿಸಿದೆ. ಕೆಲವೊಮ್ಮೆ ಅದಕ್ಕೆ ಫಲ ಸಿಕ್ಕಿದೆ. ಆದ್ದರಿಂದ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಒಂದು ಪಾಯಿಂಟ್‌ಗಾಗಿ ನಮ್ಮ ತಂಡ ಆಡುವುದಿಲ್ಲ. ಬದಲಾಗಿ ಗೆಲುವೇ ನಮ್ಮ ಗುರಿ’ ಎಂದು ಗೋವಾದ ಕೋಚ್‌ ಜುವಾನ್ ಫೆರಾಂಡೊ ಹೇಳಿದ್ದಾರೆ.

ಲೀಗ್‌ನ ಅಪಾಯಕಾರಿ ತಂಡಗಳಲ್ಲಿ ಒಂದು ಎಫ್‌ಸಿ ಗೋವಾ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಈ ತಂಡ ಯಾವ ಪ್ರತಿಕೂಲ ಸನ್ನಿವೇಶದಲ್ಲೂ ಗೋಲು ಗಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ರಕ್ಷಣಾ ವಿಭಾಗ ಇನ್ನೂ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. 31 ಗೋಲು ಗಳಿಸಿರುವ ತಂಡ 23 ಗೋಲುಗಳನ್ನು ಬಿಟ್ಟುಕೊಟ್ಟಿದೆ.

ಗೋವಾ ಈ ವರೆಗೆ 16 ಪಂದ್ಯಗಳಲ್ಲಿ ಸೋಲು ಕಾಣದೆ ಮುನ್ನುಗ್ಗಿದೆ. ಕೆಲವು ಪಂದ್ಯಗಳಲ್ಲಿ ಕೊನೆಯ ಕ್ಷಣದಲ್ಲಿ ಎದುರಾಳಿಗಳಿಗೆ ತಿರುಗೇಟು ನೀಡಿ ಅಮೂಲ್ಯ ಪಾಯಿಂಟ್‌ಗಳನ್ನು ಗಳಿಸಿದೆ.

ಗೋವಾ ವಿರುದ್ಧ ಹೈದರಾಬಾದ್‌ ಜಯ ಹೊರತು ಬೇರೇನನ್ನೂ ನಿರೀಕ್ಷಿಸುವಂತಿಲ್ಲ. ಶುಕ್ರವಾರದ ಪಂದ್ಯದಲ್ಲಿ ನಾರ್ತ್ ಈಸ್ಟ್ ಯನೈಟೆಡ್ ಎಫ್‌ಸಿ ಸೋತಿದ್ದರೆ ಹೈದರಾಬಾದ್‌ ಮೇಲೆ ಹೆಚ್ಚು ಒತ್ತಡ ಇರುತ್ತಿರಲಿಲ್ಲ. ಆದರೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ಭರ್ಜರಿ ಜಯ ಗಳಿಸಿ ನಾರ್ತ್ ಈಸ್ಟ್ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತ್ತು.

‘ತಂಡದ ಆಟಗಾರರೆಲ್ಲರೂ ಗೆಲುವಿನ ಉತ್ಸಾಹದಲ್ಲಿದ್ದಾರೆ. ಆರಂಭದಿಂದಲೇ ಉತ್ತಮ ಸಾಮರ್ಥ್ಯ ತೋರುತ್ತ ಬಂದಿದ್ದರಿಂದ ಗೋವಾ ಎದುರು ಜಯ ಗಳಿಸುವ ನಿರೀಕ್ಷೆ ಇದೆ. ಈ ಪಂದ್ಯ ನಮ್ಮ ಪಾಲಿಗೆ ಫೈನಲ್ ಇದ್ದಂತೆ. ಆದ್ದರಿಂದ ಸಮರ್ಥ ಆಟ ಆಡಲು ತಂಡ ಸಜ್ಜಾಗಿದೆ’ ಎಂದು ಕೋಚ್‌ ಮಾರ್ಕ್ವೆಜ್‌ ಅಭಿಪ್ರಾಯಪಟ್ಟರು.

ಲೀಗ್ ಚಾಂಪಿಯನ್‌ಷಿಪ್‌ ಮೇಲೆ ಕಣ್ಣು

ಬ್ಯಾಂಬೊಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಿನದ ಎರಡನೇ ಮತ್ತು ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಸೆಣಸಲಿದ್ದು ‌ಗೆದ್ದರೆ ಮುಂಬೈಗೆ ಲೀಗ್ ಹಂತದ ಚಾಂಪಿಯನ್ ಪಟ್ಟ ಸಿಗಲಿದೆ. ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಆಡುವ ಅವಕಾಶವನ್ನೂ ಪಡೆದುಕೊಳ್ಳಲಿದೆ. 

ಲೀಗ್‌ನಲ್ಲಿ ಹೆಚ್ಚು ಸ್ಥಿರ ಪ್ರದರ್ಶನ ನೀಡಿರುವ ತಂಡಗಳು ಮುಂಬೈ ಮತ್ತು ಎಟಿಕೆಎಂಬಿ. ಮೊದಲ ಲೆಗ್‌ನಲ್ಲಿ ಅಮೋಘ ಆಟವಾಡಿ ಸತತವಾಗಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದ ಮುಂಬೈ ಎರಡನೇ ಲೆಗ್‌ನಲ್ಲಿ ಸ್ವಲ್ಪ ಎಡವಿದ್ದರಿಂದ ಎಟಿಕೆ ಮುನ್ನುಗ್ಗಿತ್ತು. ಆ ತಂಡದ ಬಳಿ ಈಗ 40 ಪಾಯಿಂಟ್‌ಗಳಿದ್ದು ಮುಂಬೈ 37 ಪಾಯಿಂಟ್‌ ಗಳಿಸಿದೆ. ಮೊದಲ ಲೆಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಮುಂಬೈ ಜಯ ಗಳಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು