ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿಗೆ ಸಾಟಿಯಾಗುವುದೇ ಬ್ಲಾಸ್ಟರ್ಸ್‌?

ಸುನಿಲ್ ಚೆಟ್ರಿ ಬಳಗಕ್ಕೆ ಬಲ ತುಂಬಲಿರುವ ಮಿಕು
Last Updated 5 ಫೆಬ್ರುವರಿ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಬುಧವಾರ ಎದುರಿಸಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಬಿಎಫ್‌ಸಿ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಲು ಪ್ರಯತ್ನಿಸಲಿದೆ. ಕೇರಳ ಬ್ಲಾಸ್ಟರ್ಸ್ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಶ್ರಮಿಸಲಿದೆ.

13 ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತಿರುವ ಬಿಎಫ್‌ಸಿ 30 ಪಾಯಿಂಟ್ ಗಳಿಸಿದ್ದು ಪ್ಲೇ ಆಫ್ ಹಂತಕ್ಕೆ ಲಗ್ಗೆ ಇರಿಸಿದೆ. 14 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವ ಬ್ಲಾಸ್ಟರ್ಸ್‌ ಬಳಿ 10 ಪಾಯಿಂಟ್‌ಗಳಿದ್ದು ಈಗಾಗಲೇ ಪ್ಲೇ ಆಫ್‌ ಸ್ಪರ್ಧೆಯಿಂದ ಹೊರಬಿದ್ದಿದೆ.

ಮೊದಲ ಐದು ಪಂದ್ಯಗಳ ನಂತರ ಗಾಯಗೊಂಡು ತಾಯ್ನಾಡಿಗೆ ಮರಳಿದ್ದ ಫಾರ್ವರ್ಡ್ ಆಟಗಾರ ಮಿಕು ಮರಳಿರುವುದು ಬಿಎಫ್‌ಸಿಯ ಬಲವನ್ನು ಹೆಚ್ಚಿಸಿದೆ. ಕೆಲವೇ ದಿನಗಳ ಹಿಂದೆ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಲೂಸಿಮಾ ವಿಲ್ಲಾ ಬುಧವಾರ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅವರು ತಂಡದ ಆಕ್ರಮಣಕಾರಿ ಆಟಕ್ಕೆ ಇನ್ನಷ್ಟು ಶಕ್ತಿ ತುಂಬುವ ಸಾಧ್ಯತೆ ಇದೆ.

ಕಳೆದ ಕೆಲವು ಪಂದ್ಯಗಳಲ್ಲಿ ಗೋಲು ಗಳಿಸಲು ಸಾಧ್ಯವಾಗದೆ ನಿರಾಸೆಗೆ ಒಳಗಾಗಿರುವ ನಾಯಕ ಸುನಿಲ್ ಚೆಟ್ರಿ ಈ ಪಂದ್ಯದಲ್ಲಿ ಮಿಂಚುವರೇ ಎಂಬುದು ಕುತೂಹಲ ಕೆರಳಿಸಿರುವ ಪ್ರಶ್ನೆಯಾಗಿದೆ. ವೈಫಲ್ಯ ಕಾಣುತ್ತಿರುವ ಡಿಫೆಂಡರ್ ರಿನೊ ಆ್ಯಂಟೊ ಬದಲಿಗೆ ಹರ್ಮನ್‌ಜ್ಯೋತ್ ಖಾಬ್ರಾ ಅವರನ್ನು ಕ್ವದ್ರತ್ ಕಣಕ್ಕೆ ಇಳಿಸುವ ಭರವಸೆ ಇದೆ.

ಕೋಚ್ ಬದಲಾದರೂ ಫಲಿತಾಂಶ ಬದಲಾಗಲಿಲ್ಲ:ಸತತ ಸೋಲಿನಿಂದ ಕಂಗೆಟ್ಟ ಬ್ಲಾಸ್ಟರ್ಸ್ ತಂಡದ ಆಡಳಿತ ಕೋಚ್‌ ಡೇವಿಡ್ ಜೇಮ್ಸ್ ಅವರನ್ನು ವಜಾಗೊಳಿಸಿದ ಪೋರ್ಚುಗಲ್‌ನ ನಿಲೊ ವಿಂಗಾಡ ಅವರನ್ನು ಜನವರಿಯಲ್ಲಿ ನೇಮಕ ಮಾಡಿಕೊಂಡಿತ್ತು. ಆದರೆ ತಂಡದ ಫಲಿತಾಂಶದಲ್ಲಿ ಯಾವುದೇ ಬದಲಾವಣೆಗಳು ಆಗಲಿಲ್ಲ. ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಬ್ಲಾಸ್ಟರ್ಸ್ ನಿರಂತರ ವೈಫಲ್ಯ ಕಾಣುತ್ತಿದೆ. ಈ ಆವೃತ್ತಿಯಲ್ಲಿ ಒಟ್ಟು 139 ಅವಕಾಶಗಳು ತಂಡಕ್ಕೆ ಲಭಿಸಿದ್ದು 13ರಲ್ಲಿ ಮಾತ್ರ ಫಲ ಕಂಡಿದೆ.

ರಕ್ಷಣಾ ವಿಭಾಗದಲ್ಲೂ ತಂಡ ನಿರೀಕ್ಷಿತ ಸಾಮರ್ಥ್ಯ ತೋರುತ್ತಿಲ್ಲ. ಅನಾಸ್ ಎಡತೋಡಿಕ ಅವರ ಫಿಟ್‌ನೆಸ್‌ ಸಮಸ್ಯೆ ತಂಡದಲ್ಲಿ ಆತಂಕ ಮೂಡಿಸಿದ್ದು ಸಂದೇಶ್ ಜಿಂಗಾನ ಹೆಗಲ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಡೆಲ್ಲಿ ಡೈನಾಮೊಸ್ ತಂಡದ ಎದುರಿನ ಪಂದ್ಯದ ಸಂದರ್ಭದಲ್ಲಿ ರೆಡ್ ಕಾರ್ಡ್‌ ‘ಶಿಕ್ಷೆ’ಗೆ ಗುರಿಯಾಗಿದ್ದ ಲಾಲ್ರುವತಾರ ಅವರ ಸೇವೆಯೂ ತಂಡಕ್ಕೆ ಲಭ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT