ಮಂಗಳವಾರ, ಜನವರಿ 28, 2020
29 °C

ಇದು ಮಹಿಳಾ ಫುಟ್‌ಬಾಲ್‌ ಕ್ಲಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇವರೆಲ್ಲ ಬೆಂಗಳೂರಿನ ಪೂರ್ವ ಭಾಗದ ಫುಟ್‌ಬಾಲ್‌ನಲ್ಲಿ ಆಸಕ್ತಿಯಿರುವ ವಿದ್ಯಾರ್ಥಿನಿಯರು. ಇವರಿಗೆ ಈ ಆಟ ಅಚ್ಚುಮೆಚ್ಚು. ಆದರೆ ತಮ್ಮ ಪ್ರತಿಭೆ ಹೊರಗೆಡವಲು ಇವರಿಗೆ ವೇದಿಕೆ ಇರಲಿಲ್ಲ. ಈಗ ಲ್ಯಾವೆಲ್‌ ವಿಮೆನ್ಸ್‌ ಫುಟ್‌ಬಾಲ್‌ ಕ್ಲಬ್‌ ಮೂಲಕ ಒಂದು ತಂಡವಾಗಿ ರೂಪುಗೊಂಡಿದ್ದಾರೆ.

ಈಗ ಈ ತಂಡದಲ್ಲಿ 25 ಮಂದಿ ಆಟಗಾರ್ತಿಯರಿದ್ದಾರೆ. ‘ತಂಡದಲ್ಲಿ ವಿವಿಧ ಹಿನ್ನೆಲೆಯಿಂದ, ಬಡ ಕುಟುಂಬದಿಂದ ಬಂದ ಆಟಗಾರ್ತಿಯರಿದ್ದಾರೆ. ಬಹುತೇಕ ಮಂದಿ ಅಲಸೂರು, ಈಜಿಪುರ, ವಿವೇಕನಗರ ಭಾಗದವರು. ಕ್ಲಬ್‌ ಮೂಲಕ 14 ರಿಂದ 20 ವರ್ಷ ವಯಸ್ಸಿನ ಇವರಿಗೆ ಆಡುವ ಅವಕಾಶ ದೊರೆಯಲಿದೆ’ ಎನ್ನುತ್ತಾರೆ ತಂಡದ ಮ್ಯಾನೇಜರ್‌ ಕವಿತಾ ಟಿ.

ಈ ಕ್ಲಬ್‌ನ ಹೊಸದಾಗಿ ಆರಂಭವಾಗಿದ್ದೇನಲ್ಲ. 2013ರಲ್ಲಿ ಬೆಂಗಳೂರು ಬ್ಯಾಂಗ್‌ ಫುಟ್‌ಬಾಲ್‌ ಕ್ಲಬ್‌ (ಬಿಬಿಎಫ್‌ಸಿ) ಹೆಸರಿನಲ್ಲಿ ಆರಂಭವಾಗಿತ್ತು. ಈಗ ಹೊಸ ರೂಪ ಪಡೆದಿದೆ.

ಜನವರಿ ಅಂತ್ಯದಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಲೀಗ್‌ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದೇವೆ ಎನ್ನುತ್ತಾರೆ ಅವರು. 

ಅಮೆರಿಕದ ವೃತ್ತಿಪರ ಆಟಗಾರ್ತಿ ಕ್ಯಾತ್ಲೀನ್‌ ಲ್ಯಾವೆಲ್‌ ಅವರ ಹೆಸರಿನ ಕೊನೆಯ ಅರ್ಧವನ್ನು ಕ್ಲಬ್‌ಗೆ ಇಡಲಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಕ್ಲಬ್‌ನ ಟೀ ಶರ್ಟ್‌ ಲಾಂಚ್‌ ಕೂಡ ನಡೆದಿದೆ. 

‘ಕ್ಲಬ್‌ ನಡೆಸುವುದು ಕಷ್ಟದ ಕೆಲಸ. ಆಟಗಾರ್ತಿಯರು ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು. ಪೋಷಕರು ಇಂಥ ಆಟಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಾರೆ. ಬೆಂಗಳೂರಿನಲ್ಲಿ ಖಾಸಗಿ ಕ್ಲಬ್‌ಗಳನ್ನು ನಡೆಸುವುದು ಕಷ್ಟ. ಆದರೆ ಉತ್ಸಾಹ ನೋಡಿ ಮುಂದುವರಿಸುತ್ತ ಬಂದಿದ್ದೇವೆ’ ಎನ್ನುತ್ತಾರೆ, ಆರಂಭದಿಂದಲೂ ಕ್ಲಬ್‌ ಮ್ಯಾನೇಜರ್‌ ಆಗಿರುವ ಕವಿತಾ. ಕಳೆದ ವರ್ಷ ಎಂಟು ಮಂದಿ ತಂಡಕ್ಕೆ ಹೊಸದಾಗಿ ಬಂದಿದ್ದಾರೆ.

ಈ ತಂಡಕ್ಕೆ ಸತೀಶ್‌ ಕುಮಾರ್‌ ಮತ್ತು ಪ್ರತಾಪ್‌ ಶ್ರೀಧರ್‌ ಅವರು ತರಬೇತಿ ನೀಡುತ್ತಿದ್ದಾರೆ. ಅಲಸೂರಿನ ಜೋಗುಪಾಳ್ಯ ಮೈದಾನ ಮತ್ತು ಆರ್‌ಬಿಎಎನ್‌ಎಂಎಸ್‌ ಮೈದಾನದಲ್ಲಿ ಅಭ್ಯಾಸ ನಡೆಸುತ್ತಾರೆ. ಕಂಠೀರವ ಕ್ರೀಡಾಂಗಣದಲ್ಲಿ ಓಟ, ವ್ಯಾಯಾಮದಂಥ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದು ಅವರು ಮಾಹಿತಿ ನೀಡುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು