ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ | ಲಾರೆನ್‌ ಗೋಲು, ಇಂಗ್ಲೆಂಡ್‌ಗೆ ಜಯ

Published 28 ಜುಲೈ 2023, 15:39 IST
Last Updated 28 ಜುಲೈ 2023, 15:39 IST
ಅಕ್ಷರ ಗಾತ್ರ

ಸಿಡ್ನಿ: ಲಾರೆನ್‌ ಜೇಮ್ಸ್‌ ಅವರ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–0 ರಿಂದ ಡೆನ್ಮಾರ್ಕ್‌ ತಂಡವನ್ನು ಮಣಿಸಿತು.

‘ಡಿ’ ಗುಂಪಿನಲ್ಲಿ ಎರಡು ಗೆಲುವುಗಳೊಂದಿಗೆ ಆರು ಪಾಯಿಂಟ್ಸ್ ಕಲೆಹಾಕಿರುವ ಇಂಗ್ಲೆಂಡ್‌, ನಾಕೌಟ್‌ ಪ್ರವೇಶಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಡೆನ್ಮಾರ್ಕ್‌, ಮೂರು ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಲಾರೆನ್‌ ಅವರು ಆರನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು. ಪ್ರಮುಖ ಮಿಡ್‌ಫೀಲ್ಡರ್‌ ಕೀರಾ ವಾಲ್ಶ್‌ ಗಾಯಗೊಂಡಿರುವುದು ಈ ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಹಿನ್ನಡೆ ಉಂಟುಮಾಡಿದೆ. ಮೊದಲ ಅವಧಿಯ ಆಟದಲ್ಲಿ ಅವರು ಗಾಯಗೊಂಡು ಹೊರನಡೆದರು.

ಡ್ರಾ ಸಾಧಿಸಿದ ಅರ್ಜೆಂಟೀನಾ: ನ್ಯೂಜಿಲೆಂಡ್‌ನ ಡನೇಡಿನ್‌ನಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ, ದಕ್ಷಿಣ ಆಫ್ರಿಕಾ ಜತೆ 2–2 ಗೋಲುಗಳ ಡ್ರಾ ಸಾಧಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಅವಕಾಶವನ್ನು ನಿರಾಕರಿಸಿತು.

ಲಿಂಡಾ ಮೊಟ್ಹಾಲೊ (30) ಮತ್ತು ತೆಂಬಿ ಗಾಟ್ಲನಾ (66) ಅವರ ಗೋಲುಗಳ ನೆರವಿನಿಂದ ದಕ್ಷಿಣ ಆಫ್ರಿಕಾ, ಐತಿಹಾಸಿಕ ಗೆಲುವಿನತ್ತ ಹೆಜ್ಜೆಯಿಟ್ಟಿತ್ತು. ಆದರೆ ಸೋಫಿಯಾ ಬ್ರಾನ್ (74) ಮತ್ತು ರೊಮಿನಾ ನುನೆಜ್ (79) ಅವರು ಅರ್ಜೆಂಟೀನಾ ಪರ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು.

ಚೀನಾ ಆಸೆ ಜೀವಂತ: ಚೀನಾ ತಂಡ 1–0 ಗೋಲಿನಿಂದ ಹೈಟಿ ವಿರುದ್ಧ ಗೆದ್ದು, ನಾಕೌಟ್‌ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ವಾಂಗ್‌ ಶುವಾಂಗ್‌ ಅವರು 74ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಗೆಲುವಿನ ಗೋಲು ತಂದಿತ್ತರು.

ಚೀನಾ ತಂಡದ ಮಿಡ್‌ಫೀಲ್ಡರ್‌ ಜಾಂಗ್ ರುಯಿ 28ನೇ ನಿಮಿಷದಲ್ಲಿ ರೆಡ್‌ ಕಾರ್ಡ್‌ ಪಡೆದರು. ಆ ಬಳಿಕದ ಒಂದು ಗಂಟೆಗೂ ಹೆಚ್ಚು ಕಾಲ 10 ಆಟಗಾರ್ತಿಯರೊಂದಿಗೆ ಆಡಿದರೂ, ಚೀನಾ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT