ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೇನ್‌–ಪೋರ್ಚುಗಲ್‌ ಮುಖಾಮುಖಿ: ರೊನಾಲ್ಡೊ–ರಾಮೋಸ್‌ ಜಿದ್ದಾಜಿದ್ದಿ

Last Updated 15 ಜೂನ್ 2018, 7:19 IST
ಅಕ್ಷರ ಗಾತ್ರ

ಸೋಚಿ (ಎಎಫ್‌ಪಿ/ರಾಯಿಟರ್ಸ್‌): ಚೊಚ್ಚಲ ಪ್ರಶಸ್ತಿಯ ಕನವರಿಕೆಯಲ್ಲಿರುವ ಪೋರ್ಚುಗಲ್‌ ಮತ್ತು ಎರಡನೇ ಟ್ರೋಫಿಯ ಮೇಲೆ ಕಣ್ಣು ನೆಟ್ಟಿರುವ ಸ್ಪೇನ್‌ ತಂಡಗಳು 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ.

‘ಬಿ’ ಗುಂಪಿನ ಈ ಪಂದ್ಯ ಈ ಬಾರಿಯ ವಿಶ್ವಕಪ್‌ನ ಮೊದಲ ಮಹತ್ವದ ಹಣಾಹಣಿಯಾಗಿದೆ. ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ನಲ್ಲಿ ಜೊತೆಯಾಗಿ ಆಡುವ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಸ್ಪೇನ್‌ನ ಸರ್ಜಿಯೊ ರಾಮೋಸ್‌ ಅವರ ಮುಖಾಮುಖಿಗೆ ಈ ಪಂದ್ಯ ಸಾಕ್ಷಿಯಾಗಲಿದೆ.

ಫುಟ್‌ಬಾಲ್‌ ಜಗತ್ತಿನ ಬಲಿಷ್ಠ ತಂಡಗಳ ನಡುವಣ ಹೋರಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದಾರೆ.

33ರ ಹರೆಯದ ರೊನಾಲ್ಡೊ ಎಲ್ಲರ ಆಕರ್ಷಣೆಯಾಗಿದ್ದಾರೆ. ಅವರು ಫ್ರೀ ಕಿಕ್, ಸೈಕಲ್‌ ಕಿಕ್‌ ಮತ್ತು ಹೆಡರ್‌ ಮೂಲಕ ಚೆಂಡನ್ನು ಗುರಿ ಮುಟ್ಟಿಸುವುದನ್ನು ನೋಡಿ ಆನಂದಿಸಲು ಫುಟ್‌ಬಾಲ್‌ ಪ್ರಿಯರು ಉತ್ಸುಕರಾಗಿದ್ದಾರೆ. ರೊನಾಲ್ಡೊ ಪಾಲಿಗೆ ಇದು ಕೊನೆಯ ವಿಶ್ವಕಪ್‌ ಎಂದೇ ಹೇಳಲಾಗುತ್ತಿದೆ. ಅವರು ಈ ಟೂರ್ನಿಯಲ್ಲಿ ನಾಲ್ಕನೇ ಬಾರಿ ಆಡುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು (13) ಪಂದ್ಯಗಳಲ್ಲಿ ಕಣಕ್ಕಿಳಿದ ಪೋರ್ಚುಗಲ್‌ನ ಆಟಗಾರ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ.

ಫುಟ್‌ಬಾಲ್‌ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಪೋರ್ಚುಗಲ್‌ ತಂಡ ಸ್ಪೇನ್‌ ಎದುರು ಸಿಹಿಗಿಂತಲೂ ಕಹಿಯನ್ನೇ ಹೆಚ್ಚಾಗಿ ಅನುಭವಿಸಿದೆ.

2016ರಲ್ಲಿ ಯುರೋ ಕಪ್‌ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪೋರ್ಚುಗಲ್‌, ಈ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು ಮಣಿಸಿ ಹಿಂದಿನ ನಿರಾಸೆ ಮರೆಯುವ ತವಕದಲ್ಲಿದೆ.

ರೊನಾಲ್ಡೊ, ಬರ್ನಾರ್ಡೊ ಸಿಲ್ವ, ಗೊನ್ಸಾಲೊ ಗುಯೆಡೆಸ್‌ ಮತ್ತು ಗೆಲ್‌ಸನ್‌ ಮಾರ್ಟಿನ್ಸ್‌ ಈ ತಂಡದ ಶಕ್ತಿಯಾಗಿದ್ದಾರೆ.

ಫರ್ನಾಂಡೊ ಸ್ಯಾಂಟೋಸ್‌ ಗರಡಿಯಲ್ಲಿ ಪಳಗಿರುವ ಈ ತಂಡಕ್ಕೆ ಪೆಪೆ, ಬ್ರೂನೊ ಫರ್ನಾಂಡೀಸ್‌, ಆ್ಯಂಡ್ರೆ ಸಿಲ್ವ, ಜಾವೊ ಮರಿಯೊ ಅವರ ಬಲವೂ ಇದೆ.

ವಿಶ್ವಾಸದಲ್ಲಿ ಸ್ಪೇನ್‌: ಸ್ಪೇನ್‌ ತಂಡ ಕೂಡ ಗೆಲುವಿನ ವಿಶ್ವಾಸ ಹೊಂದಿದೆ. ಈ ತಂಡ ವಿಶ್ವಕಪ್‌ನಲ್ಲಿ ‍ಪೋರ್ಚುಗಲ್ ಎದುರು 16–6ರ ಗೆಲುವಿನ ದಾಖಲೆ ಹೊಂದಿದೆ.

ಸ್ಪೇನ್‌ ಫುಟ್‌ಬಾಲ್‌ ಮಂಡಳಿ ಬುಧವಾರ ಕೋಚ್‌ ಜೂಲನ್‌ ಲೊಪೆಟೆಗಿ ಅವರನ್ನು ವಜಾ ಮಾಡಿ, ಅವರ ಬದಲು ಫರ್ನಾಂಡೊ ಹೇರೊ ಅವರನ್ನು ನೇಮಿಸಿತ್ತು. ಇದರಿಂದ ತಂಡಕ್ಕೆ ಅಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಪ್ರಮುಖ ಆಟಗಾರ ಡ್ಯಾನಿ ಕ್ಯಾರ್‌ವಾಜಲ್‌ ಈ ಹೋರಾಟದಲ್ಲಿ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ. ಗಾಯಗೊಂಡಿರುವ ಅವರ ಇನ್ನೂ ಚೇತರಿಸಿಕೊಂಡಿಲ್ಲ.

ಹೀಗಾಗಿ ಆ್ಯಂಡ್ರೆಸ್‌ ಐನೆಸ್ಟಾ, ಸರ್ಜಿಯೊ ರಾಮೋಸ್‌, ಸರ್ಜಿಯೊ ಬುಸಾಕ್ವೆಟ್ಸ್‌, ತಿಯಾಗೊ ಅಲಕ್ಯಾಂಟರಾ ಮತ್ತು ಡೀಗೊ ಕೋಸ್ಟಾ ಅವರ ಮೇಲೆ ಜವಾಬ್ದಾರಿ ಹೆಚ್ಚಿದ್ದು ಇದನ್ನು ಅವರು ಸಮರ್ಥವಾಗಿ ನಿಭಾಯಿಸಬೇಕಿದೆ.

**

ರೊನಾಲ್ಡೊಗೆ 32 ಕೋಟಿ ಹಿಂಬಾಲಕರು!

ಬೆಂಗಳೂರು: ಈ ಬಾರಿಯ ವಿಶ್ವಕಪ್‌ನಲ್ಲಿ ತಾರಾ ಆಟಗಾರ ಎಂದೇ ಹೆಗ್ಗಳಿಕೆ ಗಳಿಸಿಕೊಂಡಿರುವ ಪೋರ್ಚುಗಲ್‌ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯ ಆಟಗಾರರಿದ್ದಾರೆ. ಅವರು ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಬ್ರೆಜಿಲ್‌ನ ನೇಮರ್‌ ಹಾಗೂ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT