ಕರಾಟೆ ಕಲಿ ರಾಹುಲ್ ಸಂಗಮೇಶ

ಶನಿವಾರ, ಏಪ್ರಿಲ್ 20, 2019
29 °C

ಕರಾಟೆ ಕಲಿ ರಾಹುಲ್ ಸಂಗಮೇಶ

Published:
Updated:

ಇಂಡಿ: ಕರಾಟೆ ಈಚೆಗೆ ಗ್ರಾಮೀಣ ಭಾಗದಲ್ಲೂ ಸದ್ದು ಮಾಡುತ್ತಿದೆ. ಆಸಕ್ತ ಕರಾಟೆ ಕಲಿಗಳಿಗೆ ಸೂಕ್ತ ತರಬೇತಿ, ಪ್ರೋತ್ಸಾಹ ಸಿಗುತ್ತಿದೆ.

ಕೆಲ ವರ್ಷಗಳ ಹಿಂದೆ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದಲೇ ಕರಾಟೆ ತರಬೇತಿ ಕೊಡಲಾಗುತ್ತಿತ್ತು. ಇದೀಗ ಈ ಯೋಜನೆ ಸ್ಥಗಿತಗೊಂಡಿದೆ. ಇದು ಕರಾಟೆ ಕ್ರೀಡಾ ವಲಯದಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದಂತಾಗಿದೆ.

ತನಗೆ ಸಿಕ್ಕ ಸೀಮಿತ ಅವಕಾಶದಲ್ಲೇ ಇಂಡಿ ಪಟ್ಟಣದ ರಾಹುಲ್ ಸಂಗಮೇಶ ಕರಾಟೆಯಲ್ಲಿ ಪ್ರವೀಣನಾಗಿದ್ದಾನೆ. ತನ್ನೂರು, ಓದುತ್ತಿರುವ ಶಾಲೆಗೆ ಕೀರ್ತಿ ತಂದಿದ್ದಾನೆ. ಕರಾಟೆ ಕ್ರೀಡಾ ಕಲೆಯಲ್ಲಿ ನಿಷ್ಣಾತನಾಗಿದ್ದಾನೆ.

‘ಕರಾಟೆ ನನಗೆ ಕರಗತವಾಗಿದೆ. ಅಶೋಕ ತುಕಾರಾಮ ಮಾನೆ, ಅಕ್ಷಯ ಮಾನೆ ಗುರುಗಳು ಕರಾಟೆ ಪಟ್ಟುಗಳನ್ನು ಕಲಿಸಿದ್ದಾರೆ. ಮೂರು ವರ್ಷದ ಹಿಂದೆ, ಇವರಿಬ್ಬರ ಗೋಜುರಾಯ ಕರಾಟೆ ಶಾಲೆಗೆ ಸೇರಿದೆ. ಇಬ್ಬರು ಗುರುಗಳ ಪ್ರೇರಣೆ, ಮಾರ್ಗದರ್ಶನದಿಂದ ಕರಾಟೆ ಕ್ರೀಡೆಯಲ್ಲಿ ವಿವಿಧ ಸಾಧನೆ ಮಾಡಿದ್ದೇನೆ. ನನ್ನ ಈ ಸಾಧನೆಯ ಹಿಂದೆ ತಂದೆ–ತಾಯಿ, ಪೋಷಕರು, ಕರಾಟೆ ಗುರುಗಳ ಪ್ರೋತ್ಸಾಹ, ಪರಿಶ್ರಮವಿದೆ’ ಎನ್ನುತ್ತಾನೆ ಕರಾಟೆ ಕ್ರೀಡಾ ಕಲಿ ರಾಹುಲ್‌ ಸಂಗಮೇಶ.

ಶಾಲೆಯಿಂದ ಸೂಕ್ತ ಸಹಕಾರ ಸಿಕ್ಕರೆ ಮತ್ತಷ್ಟು ಸಾಧನೆಗೈದು, ಊರ ಕೀರ್ತಿಯನ್ನು ಎಲ್ಲೆಡೆ ಪಸರಿಸುವ ಉಮೇದು ರಾಹುಲನದ್ದು.

2018ರ ಡಿಸೆಂಬರ್ 22, 23ರಂದು ವಿಜಯಪುರದಲ್ಲಿ ನಡೆದ 17 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ರಾಹುಲ, ತಾಲ್ಲೂಕಿಗೆ ಮತ್ತು ತಾನು ಓದುವ ಸಾಯಿ ಪಬ್ಲಿಕ್ ಸ್ಕೂಲ್‌ಗೆ ಕೀರ್ತಿ ತಂದಿದ್ದಾನೆ.

2018ರಲ್ಲೇ ಗದಗ ಪಟ್ಟಣದಲ್ಲಿ ಆಯೋಜಿಸಿದ್ದ ಶಾಲಾ ಬಾಲಕರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿಯೂ ದ್ವಿತೀಯ ಸ್ಥಾನ ಪಡೆದಿರುವುದು ಈತನ ಹೆಗ್ಗಳಿಕೆ.

2018ರ ಜೂನ್‌ 19, 20ರಂದು ರೋಣ ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಓಪನ್ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಲ್ಲದೇ, ವಿಜಯಪುರ ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಕರಾಟೆ ಸ್ಪರ್ಧೆಯಲ್ಲಿಯೂ ಕೂಡ ಪ್ರಥಮ ಸ್ಥಾನ ಪಡೆದಿದ್ದಾನೆ. ಇಂಡಿ ತಾಲ್ಲೂಕು ಮಟ್ಟದಲ್ಲಿ ಸತತ ಮೂರು ವರ್ಷ ಪ್ರಥಮ ಸ್ಥಾನ ಪಡೆದು ಕರಾಟೆಯಲ್ಲಿ ಪಾರಮ್ಯ ಮೆರೆದಿದ್ದಾನೆ.

2016ರಲ್ಲಿ ಇಂಡಿ ಪಟ್ಟಣದ ಗೋಜುರಾಯ ಕರಾಟೆ ಸ್ಕೂಲ್‌ಗೆ ಸೇರಿದ ರಾಹುಲ್, ಮೂರು ವರ್ಷಗಳಲ್ಲಿ ಗಣನೀಯ ಸಾಧನೆಗೈದಿದ್ದಾನೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !