ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌: ಪದಕಗಳತ್ತ ಭಾರತ ತಂಡಗಳ ಕಣ್ಣು

Published : 10 ಸೆಪ್ಟೆಂಬರ್ 2024, 14:26 IST
Last Updated : 10 ಸೆಪ್ಟೆಂಬರ್ 2024, 14:26 IST
ಫಾಲೋ ಮಾಡಿ
Comments

ಬುಡಾಪೆಸ್ಟ್‌: ದ್ರೋಣವಲ್ಲಿ ಹಾರಿಕಾ ಮತ್ತು ಆರ್‌.ವೈಶಾಲಿ ಒಳಗೊಂಡಿರುವ ಅಗ್ರ ಶ್ರೇಯಾಂಕದ ಭಾರತ ಮಹಿಳಾ ತಂಡ, ಬುಧವಾರ ಇಲ್ಲಿ ಆರಂಭವಾಗುವ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಪ್ರಶಸ್ತಿಗೆ ನೆಚ್ಚಿನ ತಂಡವಾಗಿದೆ. ಮಹಿಳಾ ವಿಭಾಗದ ಕಣ ದುರ್ಬಲವಾಗಿರುವೂ ಭಾರತದ ಅವಕಾಶ ಹೆಚ್ಚಿಸಿದೆ.

ಎರಡು ವರ್ಷಕ್ಕೊಮ್ಮೆ ಚೆಸ್ ಒಲಿಂಪಿಯಾಡ್ ನಡೆಯುತ್ತದೆ. ಓಪನ್‌ ವಿಭಾಗದಲ್ಲಿ ಡಿ.ಗುಕೇಶ್ ನೇತೃತ್ವದ ತಂಡವೂ ಪದಕಕ್ಕೆ ಪ್ರಬಲ ಪೈಪೋಟಿ ನಡೆಸಲಿದೆ.

ಕೋನೇರು ಹಂಪಿ ಗೈರಿನ ಹೊರತಾಗಿಯೂ ಭಾರತ ವನಿತೆಯರ ತಂಡ ಪ್ರಬಲವಾಗಿದೆ. ರ‍್ಯಾಂಕಿಂಗ್‌ನಲ್ಲಿ ವೈಶಾಲಿ ಸುಧಾರಣೆ ಕಂಡಿದ್ದಾರೆ.

ಹಂಪಿ ಬದಲು ಹಾರಿಕಾ ಅವರು ಟಾಪ್‌ ಬೋರ್ಡ್‌ನಲ್ಲಿ ಆಡಲಿದ್ದಾರೆ.  ದಿವ್ಯಾ ದೇಶಮುಖ್ ಮತ್ತು ವಂತಿಕಾ ಅಗರವಾಲ್ ತಂಡದಲ್ಲಿರುವ ಇತರ ಆಟಗಾರ್ತಿಯರು. ತಾನಿಯಾ ಸಚ್‌ದೇವ್ ಮೀಸಲು ಆಟಗಾರ್ತಿಯಾಗಿದ್ದು, ಅವಕಾಶ ಪಡೆಯುವ ಸಾಧ್ಯತೆಯಿದೆ.

ಚೀನಾ ಈ ಬಾರಿ ದುರ್ಬಲ ತಂಡವನ್ನು ಕಣಕ್ಕಿಳಿಸಿದೆ. ಸೆಪ್ಟೆಂಬರ್‌ ಕ್ರಮಾಂಕಪಟ್ಟಿಯ ಅಗ್ರ ನಾಲ್ವರು ಆಟಗಾರ್ತಿಯರು (ಹೌ ಇಫಾನ್, ಜು ವೆನ್‌ಜುನ್‌, ಝೊಂಗ್ವಿ ತಾನ್‌, ಟಿಂಗ್ಜಿ ಲೀ) ಈ ದೇಶದವರೇ ಆಗಿದ್ದರೂ, ಅವರಲ್ಲಿ ಒಬ್ಬರೂ ತಂಡದಲ್ಲಿಲ್ಲ. ಉಕ್ರೇನ್‌ ಜೊತೆ ಯುದ್ಧದ ಕಾರಣಕ್ಕೆ ನಿರ್ಬಂಧವಿರುವ ಕಾರಣ ರಷ್ಯಾ ತಂಡ ಭಾಗವಹಿಸುತ್ತಿಲ್ಲ. ಉಕ್ರೇನ್ ಸಹ ಉತ್ತಮ ತಂಡ ಕಳುಹಿಸಿಲ್ಲ. ಭಾರತ ತಂಡ ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿದೆ.

ಜಾರ್ಜಿಯಾ ಎರಡನೇ ಶ್ರೇಯಾಂಕದ ಪಡೆದಿದ್ದರೆ, ಪೊಲೆಂಡ್‌ ಮೂರನೇ ಶ್ರೇಯಾಂಕ ಗಳಿಸಿದೆ.

ಅಮೆರಿಕ ಫೇವರಿಟ್‌

ಓಪನ್ ವಿಭಾಗದಲ್ಲಿ ಅಮೆರಿಕಕ್ಕೆ ಅಗ್ರ ಶ್ರೇಯಾಂಕದ ನೀಡಲಾಗಿದೆ. ತಂಡದಲ್ಲಿರುವ ಅರ್ಧಕ್ಕಿಂತ ಹೆಚ್ಚು ಮಂದಿ ಇತ್ತೀಚಿನ ವರ್ಷಗಳಲ್ಲಿ ಆ ತಂಡಕ್ಕೆ ವಲಸೆ ಬಂದವರು.

ಫ್ಯಾಬಿಯಾನೊ ಕರುವಾನ ಮೊದಲ ಬೋರ್ಡ್‌ನಲ್ಲಿ ಆಡಲಿದ್ದಾರೆ.  ಆದರೆ ತಂಡಕ್ಕೆ ಹಿಕಾರು ನಕಾಮುರ ಗೈರು ಎದ್ದುಕಂಡರೂ, ವೆಸ್ಲಿ ಸೊ, ಲೀನಿಯರ್ ಪೆರೆಝ್ ಡೊಮಿಂಗೆಝ್, ಲೆವೊನ್ ಅರೋನಿಯ್ ಮತ್ತು ರಾಬ್ಸನ್‌ ರೇ ಅವರಿಂದ ತಂಡ ಸಾಕಷ್ಟು ಬಲಿಷ್ಠವಾಗಿಯೇ ಇದೆ. ಹೀಗಾಗಿ ಈ ತಂಡವನ್ನು ಸೋಲಿಸುವುದು ಇತರ ತಂಡಗಳಿಗೆ ಸವಾಲಾಗಲಿದೆ.

ಭಾರತ ತಂಡವು ವಿದಿತ್ ಗುಜರಾತಿ, ಆರ್‌.ಪ್ರಜ್ಞಾನಂದ, ಡಿ.ಗುಕೇಶ್, ಅರ್ಜುನ್ ಇರಿಗೇಶಿ ಮತ್ತು ಪಿ.ಹರಿಕೃಷ್ಣ ಅವರನ್ನು ಒಳಗೊಂಡಿದೆ. ತಂಡವು ಕಳೆದ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದು, ಈ ಬಾರಿ ಸುಧಾರಿತ ಪ್ರದರ್ಶನದ ಗುರಿ ಹೊಂದಿದೆ. ತಂಡಕ್ಕೆ ಈ ಬಾರಿ ಎರಡನೆ ಶ್ರೇಯಾಂಕ ನೀಡಲಾಗಿದೆ.

ಅರ್ಜುನ್ ಇರಿಗೇಶಿ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಗುಕೇಶ್, ಪ್ರಜ್ಞಾನಂದ ಅವರಂತೆ  ಉತ್ತಮ ‘ಬ್ರೇಕ್‌’ಗೆ ಕಾಯುತ್ತಿದ್ದಾರೆ. ವಿದಿತ್ ಮತ್ತು ಹರಿಕೃಷ್ಣ ತಂಡದ ಅನುಭವಿಗಳಾಗಿದ್ದಾರೆ. ವಿಶ್ವನಾಥನ್ ಆನಂದ್ ಸತತ ಎರಡನೇ ಬಾರಿಯೂ ಒಲಿಂಪಿಯಾಡ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಚೀನಾ ತಂಡ ಓಪನ್ ವಿಭಾಗದಲ್ಲಿ ಪೂರ್ಣಪ್ರಮಾಣದ ತಂಡವನ್ನು ಕಣಕ್ಕಿಳಿಸಿದೆ. ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅಗ್ರ ಬೋರ್ಡ್‌ನಲ್ಲಿ ಆಡಲಿದ್ದಾರೆ. ಚೀನಾಕ್ಕೆ ಮೂರನೇ ಶ್ರೇಯಾಂಕ ನೀಡಲಾಗಿದೆ.

ಟೂರ್ನಿಯು ಓಪನ್ ಮತ್ತು ಮಹಿಳಾ ವಿಭಾಗಗಳಲ್ಲಿ 11 ಸುತ್ತುಗಳನ್ನು ಒಳಗೊಡಿದೆ. ತಂಡವು ಪ್ರತಿ ಗೆಲುವಿಗಾಗಿ ಎರ್ಡು ಪಾಯಿಂಟ್‌ ಗಳಿಸಲಿದೆ. 191 ತಂಡಗಳು ಓಪನ್ ವಿಭಾಗದಲ್ಲಿ, 180 ತಂಡಗಳು ಮಹಿಳಾ ವಿಭಾಗದಲ್ಪಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT