ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಫೈನಲ್‌ ಹಣಾಹಣಿ ಇಂದು: ಪುಣೇರಿಗೆ ಹರಿಯಾಣ ಸವಾಲು

ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿ ಇತ್ತಂಡಗಳು
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಹೈದರಾಬಾದ್‌: ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ಫೈನಲ್‌ ಸೆಣಸಾಟಕ್ಕೆ ಹೈದರಾಬಾದ್‌ ಗಚ್ಚಿಬೌಲಿ ಕ್ರೀಡಾ ಸಂಕೀರ್ಣದಲ್ಲಿ ವೇದಿಕೆ ಸಿದ್ಧವಾಗಿದೆ. ಸತತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿರುವ ಪುಣೇರಿ ಪಲ್ಟನ್‌ ಮತ್ತು ಮೊದಲ ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವ ಹರಿಯಾಣ ಸ್ಟೀಲರ್ಸ್‌  ಕಿರೀಟಕ್ಕಾಗಿ ಶುಕ್ರವಾರ ಪೈಪೋಟಿ ನಡೆಸಲಿವೆ.

ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ, ಅಸ್ಲಂ ಇನಾಮದಾರ ಸಾರಥ್ಯದ ತಂಡವು ಸೆಮಿಫೈನಲ್‌ಗೆ ನೇರಪ್ರವೇಶ ಮಾಡಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ 37–21 ರಿಂದ ಸುಲಭವಾಗಿ ಪಟ್ನಾ ಪೈರೇಟ್ಸ್‌ ತಂಡವನ್ನು ಹಿಮ್ಮೆಟ್ಟಿಸಿರುವ ಪಲ್ಟನ್‌ ತಂಡವು ಅಧಿಕಾರಯುತವಾಗಿ ಫೈನಲ್‌ ಪ್ರವೇಶಿಸಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿರುವ ಪುಣೇರಿ, ಈ ಬಾರಿ ಚೊಚ್ಚಲ ಕಿರೀಟ ಧರಿಸಲು ಒಂದು ಹೆಜ್ಜೆ ದೂರದಲ್ಲಿದೆ.

ಉತ್ತಮ ಲಯದಲ್ಲಿರುವ ಇರಾನ್‌ನ ಆಲ್‌ರೌಂಡ್‌ ಆಟಗಾರ ಮೊಹಮ್ಮದ್ ರೇಜಾ ಶಾಡ್ಲೂಯಿ, ರೇಡರ್‌ಗಳಾದ ಮೋಹಿತ್ ಗೋಯತ್ ಮತ್ತು ಪಂಕಜ್ ಮೊಹಿತೆ ಅವರು ಪುಣೇರಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರ ಅಮೋಘ ಆಟದ ಬಲದಿಂದಾಗಿ ತಂಡವು ನೇರ ಸೆಮಿಫೈನಲ್‌ ಅರ್ಹತೆ ಪಡೆದಿತ್ತು. ಫೈನಲ್‌ ಪಂದ್ಯದಲ್ಲೂ ಈ ಆಟಗಾರರು ಮಿಂಚುವ ವಿಶ್ವಾಸದಲ್ಲಿದ್ದಾರೆ.

‘ಈ ಬಾರಿ ನಮ್ಮ ತಂಡವು ಸಮತೋಲನದಿಂದ ಕೂಡಿದೆ. ಹೀಗಾಗಿ, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ದಾಳಿ ಮತ್ತು ರಕ್ಷಣೆಯಲ್ಲಿ ನಮ್ಮ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದರಿಂದ ಇಷ್ಟು ಮುಂದೆ ಬರಲು ಸಾಧ್ಯವಾಗಿದೆ. ಹರಿಯಾಣ ಸ್ಟೀಲರ್ಸ್‌ ಪ್ರಬಲ ತಂಡವಾಗಿದ್ದು, ಉತ್ತಮ ಪೈಪೋಟಿ ನಿರೀಕ್ಷೆಯಿದೆ. ಈ ಬಾರಿ ಟ್ರೋಫಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದು ಪಲ್ಟನ್‌ನ ನಾಯಕ ಅಸ್ಲಾಂ ಪ್ರತಿಕ್ರಿಯಿಸಿದ್ದಾರೆ.

ಲೀಗ್‌ ಹಂತದ ಪಂದ್ಯಗಳಲ್ಲಿ ಸ್ಪೂರ್ತಿಯುತ ಪ್ರದರ್ಶನ ನೀಡಿ, ಪಾಯಿಂಟ್‌ ಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದ ಹರಿಯಾಣ ಸ್ಟೀಲರ್ಸ್‌ ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಪ್ಲೇ ಆಫ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು 42–25ರಿಂದ ಸಲಭವಾಗಿ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ್ದ ಜೈದೀಪ್‌ ದಹಿಯಾ ನಾಯಕತ್ವದ ಹರಿಯಾಣ ತಂಡವು ಅಲ್ಲಿ ಹಾಲಿ ಚಾಂಪಿಯನ್‌ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು 31–27ರಿಂದ ಮಣಿಸಿ ಫೈನಲ್‌ ಪ್ರವೇಶಿಸಿದೆ.

‘ಫೈನಲ್‌ ಎದುರಾಳಿ ಪುಣೇರಿ ಬಲಿಷ್ಠವಾದ ತಂಡ. ಲೀಗ್‌ ಹಂತದ ಪಂದ್ಯಗಳಲ್ಲಿ ನಾವು ಅವರನ್ನು ಸೋಲಿಸಿದ್ದೇವೆ, ಅವರು ನಮ್ಮನ್ನು ಸೋಲಿಸಿದ್ದಾರೆ. ಫೈನಲ್‌ನಲ್ಲಿ ಮತ್ತೆ ನಾವು ಮುಖಾಮುಖಿಯಾಗುತ್ತಿದ್ದು, ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತದೆ. ಮೊದಲ ಬಾರಿ ಟ್ರೋಫಿ ಜಯಿಸಲು ನಮ್ಮ ತಂಡ ಸಾಂಘಿಕ ಹೋರಾಟ ನಡೆಸಲಿದೆ’ ಎಂದು ಜೈದೀಪ್ ಹೇಳಿದ್ದಾರೆ.

ಇಂದಿನ ಫೈನಲ್‌ ಪಂದ್ಯ

ಪುಣೇರಿ ಪಲ್ಟನ್‌– ಹರಿಯಾಣ ಸ್ಟೀಲರ್ಸ್‌ (ರಾತ್ರಿ 8)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌

(ಮಾಹಿತಿ: ಪ್ರೊ ಕಬಡ್ಡಿ ವೆಬ್‌ಸೈಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT