ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಸೆಮಿಯಲ್ಲಿ ಇಂದು ಜಪಾನ್‌ ವಿರುದ್ಧ ಸೆಣಸು– ಫೈನಲ್‌ನತ್ತ ಭಾರತ ಚಿತ್ತ

Published 10 ಆಗಸ್ಟ್ 2023, 14:27 IST
Last Updated 10 ಆಗಸ್ಟ್ 2023, 23:19 IST
ಅಕ್ಷರ ಗಾತ್ರ

ಚೆನ್ನೈ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ.

ಪೂರ್ಣ 60 ನಿಮಿಷಗಳ ಆಟದುದ್ದಕ್ಕೂ ಆಕ್ರಮಣಕಾರಿ ಮನೋಭಾವ ಮತ್ತು ವೇಗವನ್ನು ಕಾಯ್ದುಕೊಳ್ಳುವ ಜತೆಯಲ್ಲೇ ಗೋಲು ಗಳಿಸಲು ಲಭಿಸುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುರಿಯನ್ನು ಆತಿಥೇಯ ತಂಡ ಇಟ್ಟುಕೊಂಡಿದೆ.

ರೌಂಡ್‌–ರಾಬಿನ್‌ ಲೀಗ್‌ ಹಂತದಲ್ಲಿ ಅಜೇಯ ಓಟದ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಭಾರತ ತಂಡ ಶುಕ್ರವಾರದ ಪಂದ್ಯದಲ್ಲಿ ಗೆಲ್ಲುವ ‘ಫೇವರಿಟ್‌’ ಎಂಬುದರಲ್ಲಿ ಅನುಮಾನವಿಲ್ಲ.

ಆದರೂ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ ಜಪಾನ್‌ ಬಗ್ಗೆ ಅಲ್ಪ ಎಚ್ಚರದಿಂದ ಇರಬೇಕಾಗುತ್ತದೆ. ಏಕೆಂದರೆ ಭಾರತಕ್ಕೆ ಈ ಟೂರ್ನಿಯಲ್ಲಿ ಸೋಲಿಸಲು ಆಗದಿರುವ ತಂಡ ಜಪಾನ್‌ ಮಾತ್ರ. ಲೀಗ್‌ ಹಂತದಲ್ಲಿ ಉಭಯ ತಂಡಗಳು ಎದುರಾಗಿದ್ದಾಗ 1–1 ಡ್ರಾ ಆಗಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಇವೆರಡು ತಂಡಗಳ ನಡುವೆ ಭಾರಿ ಅಂತರವಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದ್ದರೆ, ಜಪಾನ್‌ ತಂಡ 19ನೇ ರ್‍ಯಾಂಕ್‌ ಹೊಂದಿದೆ. ಆದರೆ 2021ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯ ಲೀಗ್‌ ಹಂತದಲ್ಲಿ ಜಪಾನ್‌ ತಂಡವನ್ನು 6–0 ರಿಂದ ಮಣಿಸಿದ್ದರೂ, ಸೆಮಿಫೈನಲ್‌ನಲ್ಲಿ 3–5 ರಿಂದ ಸೋತಿದ್ದನ್ನು ಆತಿಥೇಯರು ಮರೆಯಬಾರದು.

ಭಾರತ ತಂಡ ಈ ಟೂರ್ನಿಯಲ್ಲಿ ಒಟ್ಟು 20 ಗೋಲುಗಳನ್ನು ಗಳಿಸಿದೆಯಾದರೂ, ಜಪಾನ್‌ ವಿರುದ್ಧದ ಲೀಗ್ ಪಂದ್ಯದಲ್ಲಿ ಗೋಲು ಗಳಿಸುವ ಸಾಕಷ್ಟು ಅವಕಾಶಗಳನ್ನು ಹಾಳುಮಾಡಿಕೊಂಡಿತ್ತು. ಅದೇ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕಿದೆ. ಆ ಪಂದ್ಯದಲ್ಲಿ ಭಾರತಕ್ಕೆ 15 ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದ್ದರೂ, ಒಂದನ್ನು ಮಾತ್ರ ಗೋಲಾಗಿ ಪರಿವರ್ತಿಸಿತ್ತು.

ಪಂದ್ಯದ ಎಲ್ಲ ನಾಲ್ಕು ಕ್ವಾರ್ಟರ್‌ಗಳಲ್ಲೂ ಆಟಗಾರರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ. ಪಾಕಿಸ್ತಾನ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತದ ಆಟಗಾರರು ಆರಂಭದಿಂದ ಕೊನೆಯವರೆಗೂ ಒಂದೇ ಲಯ ಕಾಪಾಡಿಕೊಂಡಿದ್ದರು.

ಜಪಾನ್‌ ತಂಡ ಲೀಗ್‌ ಹಂತದಲ್ಲಿ ಒಂದು ಪಂದ್ಯವನ್ನು ಮಾತ್ರ (ಚೀನಾ ವಿರುದ್ಧ) ಗೆದ್ದುಕೊಂಡಿತ್ತು. ಒಂದರಲ್ಲಿ ಸೋತಿದ್ದರೆ, ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.

ಶುಕ್ರವಾರ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಮಲೇಷ್ಯಾ ಮತ್ತು ಕೊರಿಯಾ ತಂಡಗಳು ಎದುರಾಗಲಿವೆ. ಐದು ಮತ್ತು ಆರನೇ ಸ್ಥಾನ ನಿರ್ಣಯಿಸಲು ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ– ಚೀನಾ ಸೆಣಸಾಟ ನಡೆಸಲಿವೆ.

ಇಂದಿನ ಪಂದ್ಯಗಳು:

5/6ನೇ ಸ್ಥಾನ: ಪಾಕಿಸ್ತಾನ– ಚೀನಾ (ಮಧ್ಯಾಹ್ನ 3.30)

ಸೆಮಿಫೈನಲ್‌:

ಮಲೇಷ್ಯಾ– ಕೊರಿಯಾ (ಸಂಜೆ 6)

ಭಾರತ– ಜಪಾನ್‌ (ರಾತ್ರಿ 8.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT