ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಅಶ್ಮಿತಾ ಚಾಲಿಹಾ

Published 2 ಫೆಬ್ರುವರಿ 2024, 14:07 IST
Last Updated 2 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ಬ್ಯಾಂಕಾಕ್‌ : ಅಮೋಘ ಆಟವಾಡಿದ ಭಾರತದ ಅಶ್ಮಿತಾ ಚಾಲಿಹಾ ಶುಕ್ರವಾರ ಮೂರು ಗೇಮ್‌ಗಳ ಆಟದಲ್ಲಿ ಇಂಡೊನೇಷ್ಯಾದ ಇಸ್ಟರ್ ನುರುಮಿ ವಾರ್ಡೊಯೊ ಅವರನ್ನು ಸೋಲಿಸಿ, ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ತಲುಪಿದರು.

ಮಿಥುನ್ ಮಂಜುನಾಥ್ ಪುರುಷರ ಸಿಂಗಲ್ಸ್‌ನಲ್ಲಿ ಸೋಲನುಭವಿಸಿದ್ದು, ಅಸ್ಸಾಮಿನ ಅಶ್ಮಿತಾ ಇದೀಗ ಕಣದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಕೂಡ ಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು.

ಅರ್ಹತಾ ಸುತ್ತನ್ನು ದಾಟಿ ಪ್ರಧಾನ ‘ಡ್ರಾ’ದಲ್ಲಿ ಆಡುತ್ತಿರುವ, ವಿಶ್ವದ 61ನೇ ಕ್ರಮಾಂಕದ ಅಶ್ಮಿತಾ ಎಂಟರ ಘಟ್ಟದ ಪಂದ್ಯದಲ್ಲಿ 21–14, 19–21, 21–13 ರಿಂದ 44ನೇ ಕ್ರಮಾಂಕದ ನುರುಮಿ ವಾರ್ಡೊಯೊ ಅವರನ್ನು ಸೋಲಿಸಿದರು. ಪಂದ್ಯ 57 ನಿಮಿಷಗಳ ಕಾಲ ನಡೆಯಿತು.

ವಿಶ್ವ ಕ್ರಮಾಂಕದಲ್ಲಿ 61ನೇ ಸ್ಥಾನದಲ್ಲಿರುವ ಅಶ್ಮಿತಾ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಸುಪಾನಿದಾ ಕಟೆಥಾಂಗ್ ಅವರನ್ನು ಎದುರಿಸಲಿದ್ದಾರೆ. ಸುಪಾನಿದಾ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ವೆನ್‌ ಚಿ ಹ್ಸು ಅವರನ್ನು 21–17, 21–11 ರಿಂದ ನೇರ ಆಟಗಳಿಂದ ಸೋಲಿಸಿದರು.

ಡಬಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಫ್ಯಾಬ್ರಿಯಾನಾ ದ್ವಿಪುಜಿ ಕುಸುಮಾ– ಅಮೇಲಿಯಾ ಪೃಥ್ವಿ 21–12, 17–21, 23–21 ರಿಂದ ಆರನೇ ಶ್ರೇಯಾಂಕದ ಟ್ರಿಸಾ ಮತ್ತು ಗಾಯತ್ರಿ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 63ನೇ ಕ್ರಮಾಂಕದ ಮಿಥುನ್ ಮಂಜುನಾಥ್ 19–21, 15–21ರಲ್ಲಿ ನೆದರ್ಲೆಂಡ್ಸ್‌ನ ಮಾರ್ಕ್ ಕಲ್ಜಿಯು ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT