ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭೆಯ ನಾಡಿನಲ್ಲಿ ಕುರಾಶ್‌ ಖ್ಯಾತಿ...

Last Updated 9 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳಗಾವಿ ಜಿಲ್ಲೆಯ ಮಲಪ್ರಭಾ ಜಾಧವ ಅವರು ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದು ಇದೇ ಕ್ರೀಡೆಯಲ್ಲಿ. ಇದೆಂಥ ಆಟ ಎಂದು ಹಲವರು ಹುಬ್ಬೇರಿ ಸಿದ್ದರು.

ಇದೊಂದು ಸಮರ ಕಲೆ. ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಸೇರ್ಪಡೆಯಾಗಿತ್ತು. ಅದರಲ್ಲಿ ದೆಹಲಿಯ ಪಿಂಕಿ ಬಲ್ಹಾರ ಮತ್ತು ಕನ್ನಡತಿ ಮಲಪ್ರಭಾ ಪದಕ ಗೆದ್ದಾಗ ಈ ಆಟವು ಬಹಳಷ್ಟು ಜನರ ಕುತೂಹಲ ಕೆರಳಿಸಿತ್ತು.

ಕಬಡ್ಡಿ ಮತ್ತು ಕುಸ್ತಿಯಲ್ಲಿ ಪ್ರಸಿದ್ಧವಾಗಿರುವ ಬೆಳಗಾವಿಯಲ್ಲಿ ಕುರಾಶ್‌ ಮತ್ತು ಮಲಪ್ರಭಾ ಅವರಿಬ್ಬರ ಬೆಳವಣಿಗೆಯ ಕಥೆ ರೋಚಕವಾಗಿದೆ.

ಬೆಳಗಾವಿಯಿಂದ20ಕಿ.ಮೀ ದೂರದಲ್ಲಿರುವ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ತುರಮುರಿ ಎನ್ನುವ ಪುಟ್ಟ ಹಳ್ಳಿ ಮಲಪ್ರಭಾ ಅವರ ಹುಟ್ಟೂರು.ಸಣ್ಣ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಯಲ್ಲಪ್ಪ ಹಾಗೂ ಶೋಭಾ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ.ಮಲಪ್ರಭಾ ಕೊನೆಯ ಮಗಳು.

ಮಲಪ್ರಭಾ ಚಿಕ್ಕಂದಿನಲ್ಲಿಯೇ ಜೂಡೊದತ್ತ ಆಕರ್ಷಿತರಾಗಿದ್ದರು.ಅವರಲ್ಲಿರುವ ಕ್ರೀಡಾಪ್ರತಿಭೆಯನ್ನು ಗುರುತಿಸಿದ ಕೋಚ್‌ ತ್ರಿವೇಣಿ ಸಿಂಗ್‌ ಬೆನ್ನೆಲುಬಾಗಿ ನಿಂತರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ತರಬೇತುದಾರರಾಗಿರುವ ತ್ರಿವೇಣಿ ಅವರು ಕೂಡ ಅಂತರರಾಷ್ಟ್ರೀಯ ಮಟ್ಟದ ಜುಡೊ ಪಟುವಾಗಿದ್ದರು. ಏಕಲವ್ಯ ಪುರಸ್ಕಾರ ಗಳಿಸಿದ್ದಾರೆ. ಆವರು ದ್ರೋಣಾಚಾರ್ಯ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

ಮಲಪ್ರಭಾ ಅವರಿಗೆ ಆರಂಭದಲ್ಲಿ ಜುಡೊ ತರಬೇತಿ ನೀಡಿದ್ದರು. ನಂತರ 2009ರಿಂದ ಕುರಾಶ್‌ ಹೇಳಿಕೊಡಲು ಆರಂಭಿಸಿದರು.ಒಂಬತ್ತು ವರ್ಷಗಳ ಪರಿಶ್ರಮದ ಫಲವಾಗಿ ಇವತ್ತು ಮಲಪ್ರಭಾ ಏಷ್ಯನ್‌ ಕ್ರೀಡಾಕೂಟದಲ್ಲಿ ರಾಷ್ಟ್ರದ ಗೌರವ ಹೆಚ್ಚಿಸಿದ್ದಾರೆ.

ಸಿಂಗ್ ದಂಪತಿಯ ಶ್ರಮ

ತ್ರಿವೇಣಿ ಸಿಂಗ್‌ ಅವರು ಬೆಂಗಳೂರಿನವರು. ಅಂತರರಾಷ್ಟ್ರೀಯ ಜುಡೊಪಟುವಾಗಿದ್ದರು. ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪದಕಗಳಿಗೆ ಕೊರಳೊಡ್ಡಿದವರು. 2000ನೇ ಇಸವಿಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಜುಡೊ ಕೋಚ್‌ ಆಗಿ ಸೇರ್ಪಡೆಗೊಂಡರು.ನಂತರ ಅವರನ್ನುಬೆಳಗಾವಿಗೆ ವರ್ಗ ಮಾಡಲಾಯಿತು.ಅವರು ಇಲ್ಲಿಗೆ ಬಂದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಜುಡೊ ಕ್ರೀಡೆ ಹೆಚ್ಚು ಪ್ರಚಲಿತವಾಗಿರಲಿಲ್ಲ. ಬೆಳಗಾವಿಯ ಸುತ್ತಮುತ್ತ ಹಳ್ಳಿಗಳಿಗೆ ಸೈಕಲ್‌ನಲ್ಲಿ ಸುತ್ತಿದರು. ಕ್ರೀಡೆಯಲ್ಲಿ ಆಸಕ್ತಿ ಇರುವವರನ್ನು ಗುರುತಿಸಿದರು. ಇಲಾಖೆಯ ಕ್ರೀಡಾ ಹಾಸ್ಟೆಲ್‌ಗೆ ಸೇರಿಸಿದರು. ತರಬೇತಿ ನೀಡಲು ಆರಂಭಿಸಿದರು.

ಇವರಿಗೆ ಪತಿ ಜಿತೇಂದ್ರ ಸಿಂಗ್‌ ಕೂಡ ಜೊತೆ ನೀಡಿದರು.ಅವರು ಕೂಡ ಇದೇ ಇಲಾಖೆಯಲ್ಲಿ ಜುಡೊ ಕೋಚ್‌ ಆಗಿದ್ದರು.ದಂಪತಿ ಸೇರಿಕೊಂಡು ಜುಡೊಪಟುಗಳಿಗೆ ತರಬೇತಿ ನೀಡಿದರು.ಅಕ್ಕಪಕ್ಕದ ಅಂಬೇವಾಡಿ,ಹಿಂಡಲಗಾ,ಹಿಂಡಾಲ್‌,ಬೆಳಗಾವಿಯ ಕ್ಯಾಂಪ್‌ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ಯಾಂಪ್‌ಗಳನ್ನು ಮಾಡಿ, ಪಟುಗಳನ್ನು ಸಿದ್ಧಗೊಳಿಸಿದರು.ಇದುವರೆಗೆ35ಅಂತರರಾಷ್ಟ್ರೀಯ ಜುಡೊಕಾಗಳನ್ನು ಸಿದ್ಧಗೊಳಿಸಿದರು. ಇವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗಳಿಸಿದ್ದಾರೆ.

ಜುಡೋದಿಂದ ಕುರಾಶ್‌ಗೆ

ಜೂಡೊ ಹಾಗೂ ಕುರಾಶ್‌ದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಜೂಡೊದಲ್ಲಿ ನಾಲ್ಕು ವಿಧಗಳಿವೆ.ಚೋಕ್‌,ಲಾಕ್‌,ಹೋಲ್ಡ್‌ ಹಾಗೂ ಥ್ರೋಸ್‌.ಆದರೆ ಕುರಾಶ್‌ದಲ್ಲಿ ಸ್ಟ್ಯಾಂಡಿಂಗ್‌ ಟೆಕ್ನಿಕ್‌ ಮಾತ್ರ ಇರುತ್ತದೆ.ಇದು ಜುಡೋ ತರಬೇತುದಾರರಾದ ತ್ರಿವೇಣಿ ಸಿಂಗ್‌ ಅವರನ್ನು ಸೆಳೆಯಿತು.ಇಂಡಿಯನ್‌ ಕುರಾಶ್‌ ಅಸೋಸಿಯೇಷನ್‌ ಅಧ್ಯಕ್ಷ ಜಗದೀಶ್‌ ಟೈಟ್ಲರ್‌ ಹಾಗೂ ಕಾರ್ಯದರ್ಶಿ ರವಿ ಕಪೂರ್‌ ಅವರ ಒತ್ತಾಸೆಯ ಮೇರೆಗೆ2009ರಿಂದ ಕುರಾಶ್‌ಗೂ ತರಬೇತಿ ನೀಡಲು ಆರಂಭಿಸಿದರು.

ನಿರ್ಧಾರ ಬದಲಿಸಿದ ಕ್ರೀಡಾಕೂಟ

‘2007ರಲ್ಲಿತುರ್ಕಮೇನಿಸ್ತಾನದಲ್ಲಿ ನಡೆದ ಮಾರ್ಷಲ್‌ ಆರ್ಟ್ಸ್‌ ಕ್ರೀಡಾಕೂಟದಲ್ಲಿ ಮಲಪ್ರಭಾ ಕುರಾಶ್‌ ಆಟದಲ್ಲಿ ಉತ್ತಮವಾಗಿ ಆಡಿದ್ದರು. ಬೆಳ್ಳಿ ಪದಕ ಜಯಿಸಿದ್ದರು.ಇದು ನನ್ನ ಚಿಂತನೆಯ ದಿಕ್ಕನ್ನೇ ಬದಲಿಸಿತು. ಜುಡೋ ಆಟ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಅಷ್ಟೇ ತೀವ್ರ ಪೈಪೋಟಿ ಕೂಡ ಇದೆ.ಇದಕ್ಕೆ ಹೋಲಿಸಿದರೆ ಕುರಾಶ್‌ನಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ.ಮಲಪ್ರಭಾ ಅವರನ್ನು ಇದೇ ಕ್ರೀಡೆಯಲ್ಲಿ ಮುಂದುವರಿಸಲು ತೀರ್ಮಾನಿಸಿದೆ.ಅದರ ಫಲವಾಗಿ ಇಂದು ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಬಂದಿದೆ.ಇನ್ನು ನಮ್ಮ ಮುಂದಿನ ಗುರಿ2020ರ ಒಲಿಪಿಂಕ್ಸ್‌’ ಎನ್ನುತ್ತಾರೆ ತ್ರಿವೇಣಿ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT