ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಪ್ರತಿಭೆಗೆ ‘ವಿಜಯ’ದ ಭರವಸೆ...

Last Updated 8 ಜುಲೈ 2018, 20:10 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆ ಗೌಡೇನಹಳ್ಳಿಯ ಪ್ರತಿಭೆ ಜಿ.ಕೆ.ವಿಜಯಕುಮಾರಿ ಈಗ ದೇಶದ ಪ್ರಮುಖ ಮಧ್ಯಮ ದೂರ ಓಟಗಾರ್ತಿಯರ ಪೈಕಿ ಒಬ್ಬರು. ರಾಷ್ಟ್ರೀಯ–ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಿಂಚಿರುವ ಅವರು ಫೆಡರೇಷನ್‌ ಕಪ್‌ನಲ್ಲಿ ಅಮೋಘ ಸಾಧನೆ ಮಾಡಿ ಗಮನ ಸೆಳೆದಿದ್ದರು.

ಆದರೆ ಕಾಮನ್‌ವೆಲ್ತ್ ಕೂಟದ ಭಾರತ ರಿಲೇ ತಂಡದಲ್ಲಿ ಅವರ ಹೆಸರು ಇಲ್ಲದೇ ಇದ್ದದ್ದು ಅಚ್ಚರಿ ಮೂಡಿಸಿತ್ತು. ಆ ಆಘಾತದಿಂದ ಚೇತರಿಸಿಕೊಂಡಿರುವ ಅವರು ಈಗ ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದ್ದಾರೆ. ಜೂನ್‌ ಕೊನೆಯ ವಾರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ 4x400 ಮೀಟರ್ಸ್ ರಿಲೇಯಲ್ಲಿ ರಾಜ್ಯಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ಅವರು ಇದೇ ವಿಭಾಗದಲ್ಲಿ ಏಷ್ಯನ್‌ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ತರಬೇತಿ ಶಿಬಿರಕ್ಕಾಗಿ ಜೆಕೊಸ್ಲೊವಾಕಿಯಾಗೆ ತೆರಳಲು ಸಜ್ಜಾಗುತ್ತಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.

* ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದ್ದೀರಿ.ಏನು ನಿರೀಕ್ಷೆ ಇದೆ?
ಚಿನ್ನದ ಪದಕ ಗೆಲ್ಲಬೇಕು ಎಂಬುದೊಂದೇಗುರಿ ಮತ್ತು ಆಸೆ.

*ಪ್ರಬಲ ಸ್ಪರ್ಧೆ ಇರುವ ಏಷ್ಯನ್‌ ಕೂಟಕ್ಕೆ ಅಭ್ಯಾಸ ಹೇಗೆ ನಡೆಯುತ್ತಿದೆ?
ಸ್ಥಳೀಯವಾಗಿ ಅಭ್ಯಾಸ ಚೆನ್ನಾಗಿ ನಡೆದಿದೆ. ಜೆಕೊಸ್ಲೊವಾಕಿಯಾದಲ್ಲಿ ಒಟ್ಟಾಗಿ ಅಭ್ಯಾಸ ಮಾಡಲು ಭಾರತ ಅಥ್ಲೆಟಿಕ್ ಫೆಡರೇಷನ್ ವ್ಯವಸ್ಥೆ ಮಾಡಿದೆ. ಅಲ್ಲಿ ಜೊತೆಗೂಡಿ ನಮ್ಮ ಸಾಮರ್ಥ್ಯಕ್ಕೆ ಸಾಣೆ ಹಿಡಿಯಲಿದ್ದೇವೆ. ಎಲ್ಲರೂ ಫಿಟ್‌ ಆಗಿದ್ದೇವೆ. ಇನ್ನು ಜಕಾರ್ತದ ಟ್ರ್ಯಾಕ್‌ನಲ್ಲಿ ಓಡುವುದೊಂದೇ ಬಾಕಿ ಇದೆ.

*ರಿಲೇಯಲ್ಲಿ ನಿಮ್ಮ ಜೊತೆ ಓಡುವವರ ಕುರಿತು ಭರವಸೆ ಇದೆಯೇ?
ನನ್ನ ಸಹ ಓಟಗಾರ್ತಿಯರಾದ ಪೂವಮ್ಮ, ಸರಿತಾ ಬೆನ್ ಗಾಯಕವಾಡ್‌ ಮತ್ತು ಸೋನಿಯಾ ವೈಶ್ಯ ಅವರು ಅತ್ಯುತ್ತಮ ಅಥ್ಲೀಟ್‌ಗಳು. ಅವರ ಮೇಲೆ ನನಗೆ ತುಂಬ ಭರವಸೆ ಇದೆ. ಆದ್ದರಿಂದ ಪದಕ ಗೆಲ್ಲುವುದು ಕಷ್ಟಕರವಾಗದು.

*ರಿಲೇಯಲ್ಲಿ ಪದಕ ಗೆಲ್ಲಲು ಬೇಕಾದ ಮುಖ್ಯ ಅಂಶ ಯಾವುದು?
ರಿಲೇಯಂಥ ಸ್ಪರ್ಧೆಯಲ್ಲಿ ಪರಸ್ಪರ ಭರವಸೆ ಮತ್ತು ವಿಶ್ವಾಸ ಮುಖ್ಯ. ಅದು ಇಲ್ಲದಿದ್ದರೆ ಓಡಲು ಮತ್ತು ಪದಕ ಗೆಲ್ಲಲು ಆಗದು.

*ಭಾರತದ ಮಧ್ಯಮ ದೂರ ಓಟಗಾರ್ತಿಯರ ಪೈಕಿ ಹಿಮಾ ದಾಸ್‌ ಮತ್ತು ಟಿಂಟು ಲೂಕಾ ಈಗ ಉತ್ತುಂಗದಲ್ಲಿದ್ದಾರೆ. ನಿಮ್ಮಂತೆಯೇ ಅವರು ಕೂಡ ದೇಶದ ಅಥ್ಲೆಟಿಕ್ಸ್‌ನ ಮಿನುಗು ತಾರೆಗಳು. ಅವರ ಬಗ್ಗೆ ಏನು ಹೇಳುತ್ತೀರಿ?
ಅವರಿಬ್ಬರೂ ಒಳ್ಳೆಯ ಅಥ್ಲೀಟ್‌ಗಳು. ನಮಗೆ ಈಗ ಭಾರತಕ್ಕೆ ಪದಕ ತಂದುಕೊಡುವವರು ಬೇಕು. ನಾನಾಗಲಿ, ಅವರಾಗಲಿ, ಮತ್ತೆ ಇನ್ಯಾರೇ ಆಗಲಿ, ಗೆದ್ದರೆ ಅದು ಅಭಿಮಾನದ ವಿಷಯ.

*ಆರಂಭದಿಂದಲೂ 400 ಮತ್ತು 800 ಮೀಟರ್ಸ್ ಓಡುತ್ತಿದ್ದೀರಿ. ಸ್ಪ್ರಿಂಟ್ ಮಾಡಬೇಕು ಎಂದು ಯಾವತ್ತಾದರೂ ಅನಿಸಿದ್ದಿದೆಯಾ?
ಶಾಲಾ ದಿನಗಳಲ್ಲಿ 200 ಮತ್ತು 400 ಮೀಟರ್ಸ್ ಓಡುತ್ತಿದ್ದೆ. ನಂತರ ಕೋಚ್‌ ಸಲಹೆಯಂತೆ 400 ಮತ್ತು 800 ಮೀಟರ್ಸ್ ಅಭ್ಯಾಸ ಮಾಡಲು ಆರಂಭಿಸಿದೆ. ಅಂದು ಕೋಚ್‌ ನೀಡಿದ ಸಲಹೆ ಸೂಕ್ತವಾಗಿತ್ತು ಎಂದು ಈಗ ಮನವರಿಕೆ ಆಗಿದೆ. 200 ಮೀಟರ್ಸ್‌ಗಿಂತ 400 ಮತ್ತು 800 ಮೀಟರ್ಸ್‌ನಲ್ಲಿ ನನಗೆ ಹೆಚ್ಚು ಸಾಧನೆ ಮಾಡಲು ಆಗುತ್ತಿದೆ.

*ಟ್ರ್ಯಾಕ್‌ನಲ್ಲಿ ಸ್ಪ್ರಿಂಟ್ ಎಂಬುದು ತುಂಬ ಆಕರ್ಷಣೆಯ ಸ್ಪರ್ಧೆ. ನೀವು ಮಧ್ಯಮ ದೂರ ಓಟದ ಸ್ಪರ್ಧೆಯನ್ನು ಹೇಗೆ ವಿಶ್ಲೇಷಣೆ ಮಾಡುತ್ತೀರಿ?
400 ಮತ್ತು 800 ಮೀಟರ್ಸ್‌ ಕೂಡ ಗಮನ ಸೆಳೆಯುವ ಸ್ಪರ್ಧೆಯೇ. ಇದರಲ್ಲೂ ಸಾಕಷ್ಟು ಅವಕಾಶಗಳು ಇವೆ. ಈ ಸ್ಪರ್ಧೆಗಳಲ್ಲಿ ಇಷ್ಟೊಂದು ವೈವಿಧ್ಯತೆ ಇದೆ ಎಂಬುದು ನನಗೆ ಮೊದಲು ಗೊತ್ತೇ ಇರಲಿಲ್ಲ. ವೈಯಕ್ತಿಕವಾಗಿ ಓಡಲು ಮತ್ತು ರಿಲೇಯಲ್ಲಿ ಪಾಲ್ಗೊಳ್ಳಲು ಇದು ಉತ್ತಮ ವೇದಿಕೆ.

*ರಿಲೇಯಲ್ಲಿ ಈಗ ಮಿಶ್ರ ಓಟ ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಇದರ ಬಗ್ಗೆ ಏನು ಹೇಳುತ್ತೀರಿ? ಇದು ಯಶಸ್ಸು ಕಾಣುವುದೇ?
ಇದು ಅತ್ಯಂತ ಆಕರ್ಷಣೆಯ ಸ್ಪರ್ಧೆಯಾಗಲಿದೆ. ಪುರುಷ ಮತ್ತು ಮಹಿಳೆಯರು ಒಟ್ಟಿಗೆ ಓಡುವುದರಿಂದ ಟ್ರ್ಯಾಕ್‌ನಲ್ಲಿ ಮಿಂಚಿನ ಸಂಚಾರ ಆಗಲಿದೆ. ಪ್ರೇಕ್ಷಕರಿಗೂ ರೋಮಾಂಚಕ ಅನುಭವ ಸಿಗಲಿದೆ.

ಕೋಚ್‌ ಲಕ್ಷ್ಮೀಶ ಅವರು ವಿಜಯಕುಮಾರಿ ಅವರಿಗೆ ತರಬೇತಿ ನೀಡುತ್ತಿರುವುದು
ಕೋಚ್‌ ಲಕ್ಷ್ಮೀಶ ಅವರು ವಿಜಯಕುಮಾರಿ ಅವರಿಗೆ ತರಬೇತಿ ನೀಡುತ್ತಿರುವುದು

*ಮತ್ತೆ ಎಂದಾದರೂ ಮದುವೆ ಬಗ್ಗೆ ಯೋಚನೆ ಮಾಡಿದ್ದೀರಾ?
(ನಗು...) ಇಲ್ಲ. ಮದುವೆ ಕುರಿತು ನಾನಂತೂ ಯೋಚನೆ ಮಾಡುತ್ತಿಲ್ಲ. ಅದೆಲ್ಲ ಅಪ್ಪ–ಅಮ್ಮನಿಗೆ ಬಿಟ್ಟ ವಿಷಯ.

*ಈ ಬಾರಿಯ ರಾಷ್ಟ್ರೀಯ ಕೂಟದಲ್ಲಿ ರಾಜ್ಯದ ಸಾಧನೆ ತೃಪ್ತಿಕರ ಆಗಿರಲಿಲ್ಲ. ಈ ಕುರಿತು ನಿಮ್ಮ ಅನಿಸಿಕೆ ಏನು?
ಅಥ್ಲೆಟಿಕ್ಸ್‌ನಲ್ಲಿ ನಮ್ಮ ರಾಜ್ಯ ಸಾಕಷ್ಟು ಬಲಶಾಲಿಯಾಗಿದೆ. ಎಲ್ಲರೂ ಸಾಧನೆ ಮಾಡುತ್ತಿದ್ದಾರೆ. ಇಲ್ಲಿ ಉತ್ತಮ ಸೌಲಭ್ಯಗಳು ಇರುವುದರಿಂದ ಸಾಧನೆಗೆ ತೊಂದರೆ ಇಲ್ಲ.

*400 ಮೀಟರ್ಸ್‌ನಲ್ಲಿ ನಿಮ್ಮ ಶ್ರೇಷ್ಠ ಸಾಧನೆ 53.03 ಸೆಕೆಂಡು; 800 ಮೀಟರ್ಸ್‌ನಲ್ಲಿ 2 ನಿಮಿಷ 7.37 ಸೆಕೆಂಡು. ಇದನ್ನು ಇನ್ನಷ್ಟು ಉತ್ತಮಪಡಿಸುವ ಗುರಿ ಇದೆಯಾ? ನಿಮ್ಮ ಕನಸಿನ ‘ಕಾಲ’ ಯಾವುದು?
ರಿಲೇಯಲ್ಲಿ ಸ್ಪರ್ಧೆಯಿಂದ ಸ್ಪರ್ಧೆಗೆ ಸಾಧನೆ ಉತ್ತಮವಾಗುತ್ತಿದೆ. ವೈಯಕ್ತಿಕ ವಿಭಾಗದಲ್ಲಿ ಗುರಿಯತ್ತ ಸಾಗುತ್ತಿದ್ದೇನೆ. 400 ಮೀಟರ್ಸ್‌ ಓಟದಲ್ಲಿ 51 ಸೆಕೆಂಡು, 800 ಮೀಟರ್ಸ್ ಓಟದಲ್ಲಿ 2 ನಿಮಿಷ, 1.57 ಸೆಕೆಂಡುಗಳ ಸಾಧನೆ ಮಾಡಬೇಕೆಂಬ ಗುರಿ ಇದೆ.

*ಭಾರತದ ಟ್ರ್ಯಾಕ್‌ಗಳಿಗೂ ವಿದೇಶದ ಟ್ರ್ಯಾಕ್‌ಗಳಿಗೂ ಏನಾದರೂ ವ್ಯತ್ಯಾಸವಿದೆಯೇ?
ಇಲ್ಲ. ಗುಣಮಟ್ಟದ ಟ್ರ್ಯಾಕ್‌ಗಳೆಲ್ಲ ಒಂದೇ. ಆದರೆ ವಿದೇಶದಲ್ಲಿ ಅಭ್ಯಾಸ ಮಾಡುವ ವಿಧಾನ ನೋಡುವುದರಿಂದ, ಅಲ್ಲಿನವರ ಒಡನಾಟದಿಂದ ಅನುಭವ ಸಂಪತ್ತು ಹೆಚ್ಚುತ್ತದೆ.

*ಗುಂಪು ಕ್ರೀಡೆಗಳಿಗೆ ಈಗ ಬೇಡಿಕೆ ಹೆಚ್ಚು. ವೈಯಕ್ತಿಕ ಆಟ, ಅದರಲ್ಲೂ ಅಥ್ಲೆಟಿಕ್ಸ್ ಕಡೆಗೆ ಜನರ ಒಲವು ಕಡಿಮೆ. ಈ ಬಗ್ಗೆ ಎಂದಾದರೂ ಬೇಸರಪಟ್ಟುಕೊಂಡದ್ದಿದೆಯಾ?
ಇಲ್ಲ. ವೈಯಕ್ತಿಕ ಕ್ರೀಡೆಗಳಲ್ಲೂ ಗಮನಸೆಳೆಯುವ ಸಾಧನೆ ಮಾಡಬಹುದಾಗಿದೆ. ನಮ್ಮನ್ನು ನಾವೇ ತಿದ್ದಿಕೊಂಡು ಮುಂದೆ ಸಾಗಲು ಇದರಲ್ಲಿ ತುಂಬ ಅವಕಾಶಗಳಿವೆ.

*ಕ್ರೀಡಾ ಜೀವನದ ಮಹತ್ತರ ಗುರಿ ಯಾವುದು?
ಏಷ್ಯಾ ಕೂಟದಲ್ಲಿ, ಕಾಮನ್‌ವೆಲ್ತ್‌ನಲ್ಲಿ ಮತ್ತು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುವುದು ದೊಡ್ಡ ಆಸೆ. ಈ ಸಾಧನೆ ಆಗುವವರೆಗೂ ಛಲದಿಂದ ಮುನ್ನುಗ್ಗುತ್ತೇನೆ; ಅಂಗಣ ಬಿಡುವುದಿಲ್ಲ.

*ಕೋಚ್‌ ಮತ್ತು ಕುಟುಂಬದವರ ಬಗ್ಗೆ ಏನನ್ನುತ್ತೀರಿ?
ನನ್ನ ಕ್ರೀಡಾ ಜೀವನದಲ್ಲಿ ಆಗಿರುವಸಾಧನೆಗಳಿಗೆ ಕೋಚ್‌ಗಳು ಮತ್ತು ಕುಟುಂಬದವರೇ ಕಾರಣ. ಉತ್ತಮ ಕೋಚ್‌ಗಳಲ್ಲಿ ಒಬ್ಬರೆಂದು ಹೇಳಬಹುದಾದ ಲಕ್ಷ್ಮೀಶ ಅವರು ನನಗೆ ತರಬೇತಿ ನೀಡುತ್ತಿದ್ದಾರೆ. ಕುಟುಂಬಕ್ಕಿಂತ ಅಥ್ಲೀಟ್‌ಗಳ ಬಗ್ಗೆ ಕಾಳಜಿ
ವಹಿಸುವ ಅವರಿಂದ ನಿತ್ಯವೂಹೊಸತನವನ್ನು ಕಲಿಯುತ್ತಿದ್ದೇನೆ. ಮನೆಮಂದಿಗೆ ಆರಂಭದಲ್ಲಿ ಕ್ರೀಡೆಯ ಬಗ್ಗೆ ತಿಳಿದಿರಲಿಲ್ಲ. ಈಗ ಅವರಿಗೆ ಅಥ್ಲೆಟಿಕ್ಸ್ ಬಗ್ಗೆ ಮತ್ತು ನನ್ನ ಬಗ್ಗೆ ಅಭಿಮಾನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT