ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರುಣ ಅಂತ್ಯಕಂಡ ಸಾರ್ವಕಾಲಿಕ ಶ್ರೇಷ್ಠ ಮ್ಯಾರಥಾನ್ ಓಟಗಾರ ಕಿಪ್ಟಮ್

Published 13 ಫೆಬ್ರುವರಿ 2024, 12:27 IST
Last Updated 13 ಫೆಬ್ರುವರಿ 2024, 12:27 IST
ಅಕ್ಷರ ಗಾತ್ರ

ಅಲ್ಪಾವಧಿಯಲ್ಲೇ ಜಗದ ಗಮನ ಸೆಳೆದು ಸಾರ್ವಕಾಲಿಕ ಶ್ರೇಷ್ಠ ಮ್ಯಾರಥಾನ್ ಓಟಗಾರನಾಗುವ ಹಾದಿಯಲ್ಲಿದ್ದ ಕೆನ್ಯಾದ ಕೆಲ್ವಿನ್ ಕಿಪ್ಟಮ್  ಇತ್ತೀಚೆಗೆ ಕಾರು ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಈ ಓಟದಲ್ಲಿ ಹಿರಿದಾದ ಸಾಧನೆಯ ಕನಸು ಕಂಡಿದ್ದ 24ರ ಹರೆಯದ ಕಿಪ್ಟಮ್ (1999-2024) ಅವರ ಅಕಾಲಿಕ ಸಾವಿಗೆ ಅಥ್ಲೆಟಿಕ್ ಜಗತ್ತು ಮರುಗಿದೆ. ಅವರ ಸಾವು ಅಥ್ಲೆಟಿಕ್ಸ್‌ಗೆ ಬಲುದೊಡ್ಡ ನಷ್ಟ.

ದಕ್ಷಿಣ ಆಫ್ರಿಕಾ ಖಂಡದ ಕೆನ್ಯಾ, ಇಥಿಯೋಪಿಯಾ, ಯುಗಾಂಡಾ, ತಾಂಜಾನಿಯಾ ಮೊದಲಾದ ದೇಶಗಳು ದೂರ ಅಂತರದ ಓಟದಲ್ಲಿ ವಿಶ್ವಕ್ಕೆ ಪ್ರಸಿದ್ಧ ಓಟಗಾರರನ್ನು ನೀಡಿವೆ. ಅದರಲ್ಲೂ ಕೆನ್ಯಾದ ಕೊಡುಗೆ ಅಪಾರ. ಕೆನ್ಯಾದ ಇಲ್ಯುಡ್ ಕಿಪ್ಚೊಗೆ ವಿಶ್ವದ ಅಗ್ರಮಾನ್ಯ ಮ್ಯಾರಥಾನ್ ಓಟಗಾರನಾಗಿ ಕೆಲವು ವರ್ಷಗಳಿಂದ ಆಧಿಪತ್ಯ ಸ್ಥಾಪಿಸಿದ್ದರು. 34 ವರ್ಷದ ಕಿಪ್ಚೋಗೆ ಅವರ ದಾಖಲೆಯನ್ನು ತಮ್ಮ ಮೂರನೇ ರೇಸ್‌ನಲ್ಲೇ ಮುರಿದವರು ಕಿಪ್ಟಮ್. ಮುಂದಿನ ಪ್ಯಾರಿಸ್‌ ಒಲಿಂಪಿಕ್ಸ್ ಸೇರಿ ಹಲವು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಇವರಿಬ್ಬರ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆಗಳಿದ್ದವು. ಏಪ್ರಿಲ್‌ನಲ್ಲಿ ನಡೆಯಲಿರುವ ರೋಟರ್‌ಡ್ಯಾಮ್ ಮ್ಯಾರಥಾನ್‌ಗೆ ಸಿದ್ಧತೆ ನಡೆಸುತ್ತಿದ್ದ ಕಿಪ್ಟಮ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಬಯಕೆಯನ್ನೂ ಕೆಲದಿನಗಳ ಹಿಂದೆ ಬಹಿರಂಗಪಡಿಸಿದ್ದರು.

ಅವರು ಅಲ್ಡೊರೆಟ್‌ಗೆ ಕಾರು ಚಲಾಯಿಸುತ್ತಿದ್ದ ವೇಳೆ ಕಪ್ತಾಗಟ್ ಎಂಬಲ್ಲಿ ವಾಹನ ರಸ್ತೆಯಿಂದ ಜಾರಿ ಅಳಪ್ರದೇಶದಲ್ಲಿದ್ದ ಮರಕ್ಕೆ ಅಪ್ಪಳಿಸಿದೆ. ಅವರ ಜೊತೆ ಅವರ ಕೋಚ್‌ ಆಗಿದ್ದ ರುವಾಂಡದ ಹಕಿಝಿಮಾನ (36) ಅವರೂ ಸ್ಥಳದಲ್ಲೇ ಮೃತಪಟ್ಟರು. ಕ್ರೀಡಾಪಟುಗಳಿಂದ, ಕ್ರೀಡಾ ಆಡಳಿತಗಾರರಿಂದ ಶೋಕ ಸಂದೇಶಗಳ ಮಹಾಪೂರವೇ ಹರಿದುಬಂತು. ‘ಕಿಪ್ಟಮ್‌ಗೆ ಇನ್ನೂ 24. ಅವರು ನಮ್ಮ ಭವಿಷ್ಯವಾಗಿದ್ದರು’ ಎಂದು ಅಧ್ಯಕ್ಷ ವಿಲಿಯಮ್ ರೂಟೊ ಶೋಕಿಸಿದರು.

ಎಲೈಟ್‌ (ಸೀನಿಯರ್‌) ವಿಭಾಗದಲ್ಲಿ ವಿಶ್ವಪ್ರಸಿದ್ಧಿಗೆ ಬರಲು ಕಿಪ್ಟಮ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ತಮ್ಮ ಮೊದಲ ರೇಸ್‌ನಲ್ಲೇ– ಸ್ಪೇನ್‌ನ ವಲೆನ್ಸಿಯಾ ಮ್ಯಾರಥಾನ್‌ನಲ್ಲಿ (2022, ಡಿಸೆಂಬರ್‌)– ಅತ್ಯಂತ ವೇಗವಾಗಿ ಓಡಿದ ಹಿರಿಮೆ ಅವರದು. 2 ಗಂಟೆ 01 ನಿಮಿಷ 53 ಸೆಕೆಂಡುಗಳಲ್ಲಿ ಅವರು ಗುರಿಮುಟ್ಟಿ ಮುಂದಿನ ದಿನಗಳಲ್ಲಿ ತಾರೆಯಾಗಿ ಮೂಡಿಬರುವ ಸಂದೇಶ ರವಾನಿಸಿದ್ದರು. ಈ ಓಟದ ಮೊದಲ ಅರ್ಧಭಾಗವನ್ನು 1ಗಂ.01ನಿ.42 ಸೆ.ಗಳಲ್ಲಿ ಪೂರೈಸಿದರೆ, ಎರಡನೇ ಅರ್ಧವನ್ನು 1:00:11 ರಲ್ಲಿ ಕ್ರಮಿಸಿದ್ದು ಅವರು ಕಾಪಾಡಿಕೊಂಡಿದ್ದ ಓಟದ ಲಯಕ್ಕೆ ಕನ್ನಡಿಯಾಗಿತ್ತು.

ಮರು ವರ್ಷವೇ– ಅಂದರೆ 2023ರಲ್ಲಿ ವಿಶ್ವದ ಪ್ರತಿಷ್ಠಿತ ಮ್ಯಾರಥಾನ್ ಸ್ಪರ್ಧೆಗಳೆನಿಸಿದ ಲಂಡನ್ ಮತ್ತು ಷಿಕಾಗೊದಲ್ಲಿ ಅವರು ದಾಖಲೆಯೊಡನೆ ವಿಜಯಿಯಾದರು. ಏಪ್ರಿಲ್‌ನಲ್ಲಿ ಅವರು ಲಂಡನ್ ಮ್ಯಾರಥಾನ್ ಓಟವನ್ನು 2 ಗಂ:1ನಿ:25 ಸೆ.ಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದ್ದರು. ಪ್ರತಿಷ್ಠಿತ ಷಿಕಾಗೊ ಮ್ಯಾರಥಾನ್‌ ಓಟವನ್ನು 2 ಗಂಟೆ 35 ಸೆಕೆಂಡುಗಳಲ್ಲಿ ಪೂರೈಸಿದ ಕಿಪ್ಟಮ್, ಸ್ವದೇಶದ ಇನ್ನೊಬ್ಬ ಘಟಾನುಘಟಿ ಡೇನಿಯಲ್ ಕಿಪ್ಚೋಗೆ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು 34 ಸೆಕೆಂಡುಗಳ ಅಂತರದಿಂದ ಮುರಿದಿದ್ದು, ವಿಶ್ವ ಅವರಲ್ಲಿದ್ದ ಅಸಾಧಾರಣ ಪ್ರತಿಭೆ ಗಮನಿಸುವಂತೆ ಮಾಡಿತು. ಅವರು ಮ್ಯಾರಥಾನ್ ಸೂಪರ್ ಸ್ಟಾರ್ ಆಗುವುದು ಖಚಿತವಾಗಿತ್ತು. ಕಳೆದ ವಾರವಷ್ಟೇ ಅವರು ತೆಗೆದುಕೊಂಡ ಕಾಲವನ್ನು ‘ವಿಶ್ವ ಅಥ್ಲೆಟಿಕ್ಸ್‌’ ಅಧಿಕೃತವಾಗಿ ವಿಶ್ವ ದಾಖಲೆ ಎಂದು ಮಾನ್ಯ ಮಾಡಿತ್ತು.

ಅದರೆ ಕಿಪ್ಟಮ್ ಅವರ ಯಶಸ್ಸಿನ ಹಿಂದೆ ಅಪಾರ ಪರಿಶ್ರಮ, ಬದ್ಧತೆ ಎಲ್ಲವೂ ಮೇಳೈಸಿದ್ದವು. ಎತ್ತರದ ಪ್ರದೇಶವಾಗಿರುವ ಕೆನ್ಯಾದ ರಿಫ್ಟ್‌ ವ್ಯಾಲಿ, ದೇಶ– ವಿದೇಶಗಳ ಮ್ಯಾರಥಾನ್ ಓಟಗಾರರಿಗೆ ತರಬೇತಿಯ ಅಚ್ಚುಮೆಚ್ಚಿನ ಸ್ಥಳ. ಪ್ರಮುಖ ರೇಸ್‌ಗಳಿಗೆ ಮೊದಲು ಇಲ್ಲಿಯೇ ತರಬೇತಿ ಪಡೆಯುತ್ತಾರೆ.  ಇಂಥ ಪರಿಸರದ ಹಳ್ಳಿಯಲ್ಲಿ ಕಿಪ್ಟಮ್ ಜನಿಸಿದ್ದರು. ದೀರ್ಘಕಾಲದಿಂದ ಮ್ಯಾರಥಾನ್ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ  ಡೇನಿಯಲ್ ಕಿಪ್ಚೋಗೆ, ಮಹಿಳಾ ವಿಭಾಗದ ಮ್ಯಾರಥಾನ್ ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಬ್ರಿಗಿಡ್ ಕೊಸ್ಗೆಯಿ ಮೊದಲಾದವರೂ ಈ ರಿಫ್ಟ್‌ ವ್ಯಾಲಿಯಲ್ಲಿ ಜನಿಸಿದವರು.

13 ವರ್ಷವಿರುವಾಗ ಅವರು ಕೋಚ್‌ ಹಕಿಝಿಮಾನ ನಡೆಸಿದ್ದ ಓಟಗಾರರ ಶೋಧ ಶಿಬಿರದಲ್ಲಿ ಕಣ್ಣಿಗೆ ಬಿದ್ದಿದ್ದರು. ಆಗ ತಮ್ಮಷ್ಟಕ್ಕೇ ಬರಿಗಾಲಲ್ಲಿ ಓಡಿ ಅಭ್ಯಾಸ ಮಾಡುತ್ತಿದ್ದರು. ಕುರಿಗಾಹಿಯೂ ಆಗಿದ್ದರು. 2013 ರಲ್ಲಿ ಅಲ್ಡೊರೆಟ್‌ನಲ್ಲಿ ಅವರು ಮೊದಲ ಬಾರಿ ಹಾಫ್‌ ಮ್ಯಾರಥಾನ್ (21.0975 ಕಿ.ಮೀ.) ಸ್ಪರ್ಧೆಯಲ್ಲಿ ಭಾಗಿಯಾದಾಗ 10ನೇ ಸ್ಥಾನ ಪಡೆದಿದ್ದರು. ಐದು ವರ್ಷಗಳ ನಂತರ ಅದೇ ಓಟದಲ್ಲಿ ಅವರು ಅಗ್ರಸ್ಥಾನ ಪಡೆದರು.

ಕೋವಿಡ್ ಪಿಡುಗು ಎಲ್ಲೆಡೆ ವ್ಯಾಪಿಸಿದ್ದ ಸಂದರ್ಭದಲ್ಲಿ ಹಕಿಝಿಮಾನ ಮತ್ತು ಕಿಪ್ಟಮ್ ಅತಿ ಕಠಿಣ ತರಬೇತಿಯಲ್ಲಿ ತೊಡಗಿದ್ದರು. ‘ಕಿಪ್ಟಮ್ ಜೊತೆ ಒಂದು ವರ್ಷ ತರಬೇತಿ ನಡೆದಿತ್ತು. ನಾನೂ ಅವರೊಂದಿಗೆ ಓಡುತ್ತಿದ್ದೆ. ಕಾಡುಗಳಲ್ಲೂ ಓಡಿದ್ದು ಇದೆ. 2021ರಲ್ಲಿ ಮ್ಯಾರಥಾನ್ ತರಬೇತಿ ಪೂರ್ಣಪ್ರಮಾಣದಲ್ಲಿ ಆರಂಭವಾಯಿತು’ ಎಂದು ಕಳೆದ ವರ್ಷ ಷಿಕಾಗೊ ಮ್ಯಾರಥಾನ್‌ ನಂತರ ಅವರು ಕಿಪ್ಟನ್ ಪಟ್ಟ ಶ್ರಮವನ್ನು  ನೆನಪಿಸಿದ್ದರು.

ಅವರು ಮೊದಲ ಬಾರಿ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಓಡಿದ್ದು 2018 ರಲ್ಲಿ. ಬಡ ಕುಟುಂಬದ ಅವರಿಗೆ ಶೂ ಕೊಳ್ಳಲೂ ಹಣ ಇರಲಿಲ್ಲ. ಬೇರೆಯವರಿಂದ ಪಡೆದ ಶೂ ಧರಿಸಿ ಓಡಿದ್ದರು.

ತರಬೇತಿ ವೇಳೆ ಬದ್ಧತೆ, ಅವರ ಪರಿಶ್ರಮ ಗಮನಿಸಿ ಕೋಚ್‌ಗೆ ಚಿಂತೆಯಾಗಿದ್ದೂ ಇದೆ. ಈ ವಯಸ್ಸಿನಲ್ಲೇ ದೇಹವನ್ನು ಇಷ್ಟೊಂದು ದಂಡಿಸಿದರೆ ‘ಯಾವಾಗ ಬೇಕಾದರೂ ಗಾಯದ ಸಮಸ್ಯೆ ಕಾಡಬಹುದು’ ಎಂಬ ಆತಂಕ ಸಹಜವಾಗಿಯೇ ಮೂಡಿತ್ತು. ಲಂಡನ್ ಮ್ಯಾರಥಾನ್‌ಗೆ ಸಿದ್ಧತೆ ನಡೆಸಿದ್ದಾಗ ಅವರು ವಾರಕ್ಕೆ 300 ಕಿ.ಮೀ. ಓಡಿದ್ದೂ ಇದೆ. ಅದೂ ಸತತ ಮೂರು ವಾರ. ವಾರಕ್ಕೆ ಒಂದೂ ದಿನ ವಿಶ್ರಾಂತಿ ಪಡೆಯುತ್ತಿರಲಿಲ್ಲ. ‘ಅವರಲ್ಲಿ ಬಳಲಿಕೆ ಅಥವಾ ನೋವಿನ ಲಕ್ಷಣ ಕಾಣದಿದ್ದರೆ ನಾವು ತರಬೇತಿಯಲ್ಲಿ ಮುಂದುವರಿಯುತ್ತಿದ್ದೆವು. ಓಟ, ಊಟ, ನಿದ್ದೆ ಅಷ್ಟೇ ಅವರ ದಿನಚರಿಯಾಗಿತ್ತು. ಅವರೊಬ್ಬ ಉತ್ತಮ ಸಂವಹನಕಾರ. ಹೇಳಿದ್ದನ್ನು ಬೇಗನೇ ಗ್ರಹಿಸುತ್ತಿದ್ದರು’ ಎಂದು ಹೇಳುತ್ತಾರೆ.

ಅಪಘಾತಗಳಲ್ಲಿ ಖ್ಯಾತನಾಮ ಓಟಗಾರರ ಸಾವು ಅಥವಾ ದಾರುಣ ಅಂತ್ಯ ಕೆನ್ಯಾದಲ್ಲಿ ಹೊಸದೇನಲ್ಲ. ಆಫ್ರಿಕಾ ರಾಷ್ಟ್ರಗಳ ಕ್ರೀಡಾಕೂಟದ  ಬೆಳ್ಳಿ ವಿಜೇತ ಡೇವಿಡ್ ಲೇಲಿ 2010ರಲ್ಲಿ ಕಾರು ಅಪಘಾತದಲ್ಲಿ ಸತ್ತಿದ್ದರು. ಮ್ಯಾರಥಾನ್ ಓಟಗಾರ ಫ್ರಾನ್ಸಿಸ್‌ ಕಿಪ್ಲಾಗಟ್‌ 2018ರಲ್ಲಿ  ಅಪಘಾತದಲ್ಲಿ ಮಡಿದಿದ್ದರು. 2015 ವಿಶ್ವ ಚಾಂಪಿಯನ್‌ಷಿಪ್‌ನ 400 ಮೀ. ಹರ್ಡಲ್ಸ್‌ ಓಟದಲ್ಲಿ ಸ್ವರ್ಣ ಗೆದ್ದಿದ್ದ ನಿಕೋಲಸ್ ಬೆಟ್‌ ಕೂಡ 2018ರಲ್ಲೇ ಕಾರು ಅಪಘಾತದಲ್ಲಿ ಅಸುನೀಗಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್‌ ಮ್ಯಾರಥಾನ್ ಚಿನ್ನ ಗೆದ್ದಿದ್ದ ಸಾಮ್ಯುಯೆಲ್ ವಾಂಜಿರು ಅವರು 2011ರಲ್ಲಿ ಮನೆಯ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಮಹಿಳಾ ಗುಡ್ಡಗಾಡು ಓಟದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಆಗ್ನೆಸ್‌ ತಿರೋಪ್ ಅವರನ್ನು 2021ರಲ್ಲಿ ಅವರ ಮನೆಯಲ್ಲೇ ಇರಿದು ಕೊಂದಿದ್ದು ಆಘಾತ ಮೂಡಿಸಿತ್ತು. ಅವರ ಪತಿ ಆರೋಪಿಯಾಗಿದ್ದರು. ಕೆನ್ಯಾ ಸಂಜಾತ ಯುಗಾಂಡ ಓಟಗಾರ ಬೆಂಜಮಿನ್ ಕಿಪ್ಲಾಗಟ್ ಅವರು ಕೆನ್ಯಾದ ರಿಫ್ಟ್‌ ವ್ಯಾಲಿಯಲ್ಲಿ ಕಾರಿನಲ್ಲಿ ಕೊಲೆಯಾಗಿದ್ದರು. ಅವರು 3000 ಮೀ. ಸ್ಟೀಪಲ್‌ಚೇಸ್‌ ಓಟದಲ್ಲಿ ಯುಗಾಂಡವನ್ನು ಒಲಿಂಪಿಕ್ಸ್‌ ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ್ದರು. ಈಗ ಈ ಸಾಲಿಗೆ ಪ್ರತಿಭಾವಂತ ಕಿಪ್ಟಮ್ ಸೇರಿದ್ದಾರೆ.

ಕೆಲ್ವಿನ್ ಕಿಪ್ಟಮ್‌
ಎಎಫ್‌ಪಿ ಚಿತ್ರ
ಕೆಲ್ವಿನ್ ಕಿಪ್ಟಮ್‌ ಎಎಫ್‌ಪಿ ಚಿತ್ರ
2023ರ ಲಂಡನ್ ಮ್ಯಾರಥಾನ್ ಗೆದ್ದ ಖುಷಿಯಲ್ಲಿ ಕಿಪ್ಟಮ್.
ಎಎಫ್‌ಪಿ ಚಿತ್ರ
2023ರ ಲಂಡನ್ ಮ್ಯಾರಥಾನ್ ಗೆದ್ದ ಖುಷಿಯಲ್ಲಿ ಕಿಪ್ಟಮ್. ಎಎಫ್‌ಪಿ ಚಿತ್ರ
ಕೆಲ್ವಿನ್ ಕಿಪ್ಟಮ್‌.... ಷಿಕಾಗೊ ಮ್ಯಾರಥಾನ್‌ನಲ್ಲಿ ದಾಖಲೆಯ ಸಂಭ್ರಮದಲ್ಲಿ
ರಾಯಿಟರ್ಸ್ ಚಿತ್ರ
ಕೆಲ್ವಿನ್ ಕಿಪ್ಟಮ್‌.... ಷಿಕಾಗೊ ಮ್ಯಾರಥಾನ್‌ನಲ್ಲಿ ದಾಖಲೆಯ ಸಂಭ್ರಮದಲ್ಲಿ ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT