ಬೆಂಗಳೂರು: ನಗರದ ಬಿಷಪ್ ಕಾಟನ್ ಶಾಲೆ ತಂಡದವರು ಅಂತರ ಶಾಲಾ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ‘ಡಬಲ್’ ಸಾಧನೆ ಮಾಡಿದರು. ಶುಕ್ರವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ತಂಡ ಐಸಿಎಸ್ಇ ಮತ್ತು ಐಎಸ್ಸಿ ವಿಭಾಗಗಳ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು.
ಐಸಿಎಸ್ಇ ವಿಭಾಗದ ಫೈನಲ್ನಲ್ಲಿ ಬಿಷಪ್ ಕಾಟನ್ ತಂಡ ಆತಿಥೇಯ ಕ್ಲೆರನ್ಸ್ ಹೈಸ್ಕೂಲ್ ತಂಡವನ್ನು 30–11ರಿಂದ ಮಣಿಸಿತು. ಜೊನಾಥನ್ ಮತ್ತು ವಿಶಾಲ್ ಕ್ರಮವಾಗಿ 12 ಮತ್ತು ಏಳು ಪಾಯಿಂಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಐಎಸ್ಸಿ ವಿಭಾಗದಲ್ಲೂ ಕ್ಲೆರನ್ಸ್ ತಂಡವನ್ನು ಬಿಷಪ್ ಕಾಟನ್ ಶಾಲೆಯವರು 49–40ರಿಂದ ಮಣಿಸಿದರು. ಬಿಷಪ್ ಕಾಟನ್ ತಂಡಕ್ಕೆ ಜೆ.ಸ್ಯಾಮ್ 35 ಪಾಯಿಂಟ್ ಗಳಿಸಿಕೊಟ್ಟರೆ, ಕ್ಲೆರನ್ಸ್ ಪರ ರಯಾನ್ ಜೇಮ್ಸ್ 21 ಮತ್ತು ಸುರೇಶ್ 17 ಪಾಯಿಂಟ್ ಗಳಿಸಿದರು.
ಆದರೆ ಬಾಲಕಿಯರ ವಿಭಾಗದಲ್ಲಿ ಬಿಷಪ್ ಕಾಟನ್ ತಂಡ ನಿರಾಸೆಗೆ ಒಳಗಾಯಿತು. ಫೈನಲ್ ಪಂದ್ಯದಲ್ಲಿ ಈ ತಂಡ ಕ್ಲನಿ ಕಾನ್ವೆಂಟ್ ವಿರುದ್ಧ 22–35ರಿಂದ ಸೋತಿತು. ವಿಜಯಿ ತಂಡದ ಪರ ಲೇಖನ ಎಂ 16 ಪಾಯಿಂಟ್ ಕಲೆ ಹಾಕಿದರು. ಬಿಷಪ್ ಕಾಟನ್ಗೆ ದಿವ್ಯಾ ಸಿರಾಜ್ 16 ಪಾಯಿಂಟ್ ತಂದಿತ್ತರು.