ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಅಮಲು ತಲೆಗೇರದಿರಲಿ: ಯುವ ಅಥ್ಲೀಟ್‌ಗಳಿಗೆ ಮೇರಿ ಕೋಮ್ ಕಿವಿಮಾತು

Published 2 ಮೇ 2023, 13:01 IST
Last Updated 2 ಮೇ 2023, 13:01 IST
ಅಕ್ಷರ ಗಾತ್ರ

ಬೆಂಗಳೂರು: ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೆ ಒಂದೇ ರೀತಿಯ ಮನಸ್ಥಿತಿ ಮೈಗೂಡಿಸಿಕೊಳ್ಳಬೇಕು ಎಂದು ಯುವ ಅಥ್ಲೀಟ್‌ಗಳಿಗೆ ಖ್ಯಾತನಾಮ ಬಾಕ್ಸರ್ ಮೇರಿ ಕೋಮ್ ಕಿವಿಮಾತು ಹೇಳಿದರು.

ಗೋ ಸ್ಪೋರ್ಟ್ಸ್ ಸಂಸ್ಥೆ ಹಾಗೂ ಇನ್ಫೊಸಿಸ್‌ ಫೌಂಡೇಷನ್ ಮಂಗಳವಾರ ಜಂಟಿಯಾಗಿ ಇಲ್ಲಿ ಆಯೋಜಿಸಿದ್ದ ‘ಗರ್ಲ್ಸ್ ಫಾರ್‌ ಗೋಲ್ಡ್‌’ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.

‘ಒಂದಷ್ಟು ಮಂದಿ ಜೂನಿಯರ್ ಅಥ್ಲೀಟ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಬಳಿಕ ಅಹಂಕಾರ ಬೆಳೆಸಿಕೊಳ್ಳುತ್ತಾರೆ. ಅವರ ಜೀವನಶೈಲಿಯೇ ಬದಲಾಗುತ್ತದೆ. ಯಾರಿಗೂ ಗೌರವ ನೀಡುವುದಿಲ್ಲ. ಅಂತಹ ಮನೋಭಾವ ತಾಳದೆ ನಿರ್ಲಿಪ್ತ ಭಾವದೊಂದಿಗೆ ಯಶಸ್ಸು ಸಾಧಿಸುತ್ತಾ ಮುನ್ನಡೆಯಬೇಕು’ ಎಂದು ಹೇಳಿದರು.

‘ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಎಲ್ಲ ಯಶಸ್ಸನ್ನು ಸಾಧಿಸಿದ್ದೇನೆ. ಆದರೆ ಒಲಿಂಪಿಕ್ಸ್ ಚಿನ್ನ ಒಂದೇ ಬಾಕಿ ಇದೆ. ಯಾವ ಹಂತದಲ್ಲೂ ಹೋರಾಟ ಬಿಟ್ಟುಕೊಡದ ಮನೋಭಾವ, ಕಠಿಣ ಪರಿಶ್ರಮವೇ ಈ ಸಾಧನೆಗೆ ಕಾರಣ’ ಎಂದರು.

ಈ ಸಂದರ್ಭದಲ್ಲಿ ಇನ್ಫೊಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದ ಅಥ್ಲೀಟ್‌ಗಳಿಗೆ ಶುಭ ಹಾರೈಸಿದರು.

ಗೋ ಸ್ಪೊರ್ಟ್ಸ್–ಇನ್ಫೊಸಿಸ್‌ ಒಪ್ಪಂದ: 13ರಿಂದ 19 ವರ್ಷದೊಳಗಿನ ಪ್ರತಿಭಾನ್ವಿತ ಮಹಿಳಾ ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಗೋ ಸ್ಪೋರ್ಟ್ಸ್ ಹಾಗೂ ಇನ್ಫೊಸಿಸ್‌ ಫೌಂಡೇಷನ್‌ ಒಪ್ಪಂದ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಆರಂಭದಲ್ಲಿ ಐದು ಅಕಾಡೆಮಿಗಳನ್ನು ಗುರುತಿಸಿ ಅವುಗಳ ಮೂಲಕ ಅಥ್ಲೀಟ್‌ಗಳಿಗೆ ನೆರವು ನೀಡಲಾಗುತ್ತದೆ.

‘ವಿಶ್ವದರ್ಜೆಯ ತರಬೇತುದಾರರು ಮತ್ತಿತರ ಸೌಲಭ್ಯಗಳನ್ನು ಅಕಾಡೆಮಿಗಳ ಮೂಲಕ ಆಯ್ಕೆ ಮಾಡಲಾದ ಅಥ್ಲೀಟ್‌ಗಳಿಗೆ ನೀಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿಯ ಯೋಜನೆಗೆ ಸದ್ಯ ₹ 30 ಕೋಟಿ ಅನುದಾನ ನೀಡಲಾಗುತ್ತಿದೆ. ಬಳಿಕ ಯೋಜನೆಯನ್ನು ವಿಸ್ತರಿಸಲಾಗುವುದು‘ ಎಂದು ಗೋ ಸ್ಪೋರ್ಟ್ಸ್ ಫೌಂಡೇಷನ್‌ ಕಾರ್ಯನಿರ್ವಹಣಾಧಿಕಾರಿ ದೀಪ್ತಿ ಬೋಪಯ್ಯ ತಿಳಿಸಿದರು.

ಮುಂಬೈನ ಲಕ್ಷ್ಯ ಶೂಟಿಂಗ್‌ ಕ್ಲಬ್‌, ಇಂಫಾಲ್‌ನ ಮೇರಿ ಕೋಮ್‌ ರೀಜನಲ್‌ ಬಾಕ್ಸಿಂಗ್ ಫೌಂಡೇಷನ್‌, ಚೆನ್ನೈನ ಸತೀಶ್‌ ಶಿವಲಿಂಗಂ ವೇಟ್‌ಲಿಫ್ಟಿಂಗ್ ಫೌಂಡೇಷನ್‌,  ರಮಣ್‌ ಟಿಟಿ ಹೈ ಫರ್ಪಾರ್ಮನ್ಸ್ ಸೆಂಟರ್ ಮತ್ತು ಬೆಂಗಳೂರಿನ ಯಾದವ್‌ ಪ್ರೊ ಬ್ಯಾಡ್ಮಿಂಟನ್‌ ಅಕಾಡೆಮಿಗಳನ್ನು ಮೊದಲ ಹಂತದ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ.

ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವೇಟ್‌ಲಿಫ್ಟರ್‌ ಸತೀಶ್ ಶಿವಲಿಂಗಂ, ಟೇಬಲ್ ಟೆನಿಸ್‌ ಮಾಜಿ ಆಟಗಾರ್ತಿ ಬಿ. ಭುವನೇಶ್ವರಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT