ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಕ್ವಾಲಿಫೈಯರ್‌ಗೆ ಟಿಕೆಟ್ ಪಡೆದ ಮೇರಿ: ನಿಖತ್‌ ಜರೀನ್‌ಗೆ ನಿರಾಶೆ

ರಿಂಗ್‌ನಲ್ಲಿ ಮೇರಿ–ನಿಖತ್ ಹರಾಕಿರಿ
Last Updated 28 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಬಾಕ್ಸಿಂಗ್‌ ಕ್ವಾಲಿಫೈಯರ್‌ನಲ್ಲಿ ಭಾಗವಹಿಸುವ ತಂಡದ ಆಯ್ಕೆಗಾಗಿ ಇಲ್ಲಿ ಶನಿವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ ಫೈನಲ್ ಬೌಟ್‌ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ದೃಶ್ಯಾವಳಿಗಳಿಗೆ ವೇದಿಕೆಯಾಯಿತು.

ತೀವ್ರ ಕುತೂಹಲ ಕೆರಳಿಸಿದ್ದ ಈ ಬೌಟ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್, ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಅವರು ಉದಯೋನ್ಮುಖ ಪ್ರತಿಭೆ ನಿಖತ್ ಜರೀನ್ ಅವರನ್ನು ಮಣಿಸಿದರು. ಮೇರಿ ಅನುಭವದ ಮುಂದೆ ನಿಖತ್ ಆಟ ನಡೆಯಲಿಲ್ಲ. ಮಣಿಪುರದ 36 ವರ್ಷದ ಮೇರಿ 9–1 ಅಂತರದಿಂದ ಗೆದ್ದರು.

ಮೇರಿ ಕೋಮ್ ಎದುರಿಗೆ ತಮ್ಮ ಬೌಟ್ ಆಯೋಜಿಸಿ, ಗೆದ್ದವರು ಕ್ವಾಲಿಫೈಯರ್ಸಗೆ ಹೋಗುವಂತಾಗಲಿ ಎಂದು 23 ವರ್ಷದ ನಿಖತ್ ಕೆಲವು ದಿನಗಳ ಹಿಂದೆ ಸವಾಲೆಸಿದಿದ್ದರು. ಎಲ್ಲ ವಿಭಾಗಗಳಿಗೂ ಏರ್ಪಡಿಸಿದ್ದ ಆಯ್ಕೆ ಟ್ರಯಲ್ಸ್‌ ಫೈನಲ್‌ನಲ್ಲಿ ಮೇರಿ ಮತ್ತು ನಿಖತ್ ಎದುರಾಳಿಯಾದರು. ಪರಿಣಾಮಕಾರಿ ಪಂಚ್‌ಗಳನ್ನು ಪ್ರಯೋಗಿಸಿದ ಮೇರಿ ಮುಂದೆ ನಿಖತ್ ಸಪ್ಪೆಯಾದರು. ರಿಂಗ್‌ನಲ್ಲಿ ಹಣಾಹಣಿ ನಡೆದಾಗಲೂ ಇವರಿಬ್ಬರ ನಡುವೆ ಒರಟು ಮಾತುಗಳ ವಿನಿಮಯವಾದವು. ಬೌಟ್ ಮುಗಿದ ನಂತರದ ಪ್ರಹಸನಗಳು ಹೆಚ್ಚು ಗಮನ ಸೆಳೆದವು. ಸೆಣಸಾಟ ಮುಗಿದ ನಂತರ ನಿಖತ್ ಅವರನ್ನು ಆಲಂಗಿಸಿಕೊಳ್ಳಲು ಮೇರಿ ಕೋಮ್ ನಿರಾಕರಿಸಿ ಹಿಂದೆ ಸರಿದರು. ಆಗ ನಿಖತ್ ತವರು ತೆಲಂಗಾಣ ಬಾಕ್ಸಿಂಗ್ ಸಂಸ್ಥೆಯ ಕೆಲವು ಪದಾಧಿಕಾರಿಗಳು ಇದನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇರಿ, ‘ನನಗೆ ಕೋಪ ಬಂದಿತ್ತು. ಅದರಲ್ಲಿ ಸಂದೇಹವೇ ಇಲ್ಲ. ಸಾಧನೆ ಮಾಡಿದ ನಂತರವಷ್ಟೇ ಮಾತನಾಡಬೇಕು. ಅದಕ್ಕೂ ಮೊದಲು ಅಲ್ಲ. ರಿಂಗ್‌ನಲ್ಲಿ ಯಾರು ಏನು ಮಾಡುತ್ತಾರೆ ಎಂಬುದನ್ನು ಎಲ್ಲರೂ ನೋಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ವಿವಾದವನ್ನು ನಾನು ಶುರು ಮಾಡಿಲ್ಲ. ಟ್ರಯಲ್‌ಗೆ ಬರಬೇಡ ಎಂದು ನಾನು ಯಾರಿಗೂ ಹೇಳಿಲ್ಲ. ಇದರಲ್ಲಿ ನನ್ನ ತಪ್ಪಿದೆ ಎಂದು ಕೆಲವವರು ಹೇಳಿದರೆ ಅದು ಸರಿಯಲ್ಲ. ಈ ವಿಷಯದಲ್ಲಿ ನನ್ನ ಹೆಸರನ್ನು ಎಳೆದು ತರಬಾರದಿತ್ತು’ ಎಂದು ಮೇರಿ ಹೇಳಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖತ್, ‘ಅವರ ನಡವಳಿಕೆಯಿಂದ ನನಗೆ ತೀವ್ರ ಆಘಾತ ಮತ್ತು ದುಃಖವಾಗಿದೆ. ರಿಂಗ್ ಒಳಗೆ ಅವರು ಕೆಟ್ಟ ಪದಗಳಿಂದ ನಿಂದಿಸಿದರು. ಇರಲಿ ಬಿಡಿ. ನಾನೂ ಕಿರಿಯಳು. ಬೌಟ್ ನಂತರ ಅವರು ಆಲಂಗಿಸಿಕೊಂಡಿದ್ದರೆ ಬಹಳ ಸಂತಸವಾಗುತ್ತಿತ್ತು. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ನಾನು’ ಎಂದರು.

‘ಇಂತಹ ರಾಜಕೀಯದ ನಡುವೆ ಬಾಕ್ಸಿಂಗ್ ಬೆಳೆಯುವುದಾದರೂ ಹೇಗೆ’ ಎಂದು ಇಲ್ಲಿ ಹಾಜರಿದ್ದ ತೆಲಂಗಾಣ ಬಾಕ್ಸಿಂಗ್ ಸಂಸ್ಥೆಯ ಪ್ರತಿನಿಧಿ ಎ.ಪಿ. ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸಿದ ಭಾರತ ಬಾಕ್ಸಿಂಗ್ ಫೆಡರೇಷನ್ ಮುಖ್ಯಸ್ಥ ಅಜಯ್ ಸಿಂಗ್, ‘ಯಾರು ಏನೇ ಹೇಳಿದರೂ ಮೇರಿ ಕೋಮ್ ಅಗಾಧ ಪ್ರತಿಭಾನ್ವಿತೆಯಾಗಿದ್ದಾರೆ. ನಿಖತ್ ಕೂಡ ಉಜ್ವಲ ಭವಿಷ್ಯ ಹೊಂದಿದ್ದಾರೆ. ಈ ಬೌಟ್‌ನಲ್ಲಿ ಅವರು ಗಮನ ಸೆಳೆಯುವಂತಹ ಆಟವಾಡಿದ್ದಾರೆ’ ಎಂದರು.

ಇನ್ನುಳಿದ ವಿಭಾಗಗಳಲ್ಲಿ ಸೋನಿಯಾ ಲಾಥರ್ (57 ಕೆ.ಜಿ.), ಸಾಕ್ಷಿ ಚೌಧರಿ ವಿರುದ್ಧ; ಮಾಜಿ ವಿಶ್ವ ಚಾಂಪಿಯನ್ ಎಲ್. ಸರಿತಾ ದೇವಿ (60 ಕೆ.ಜಿ) ಅವರು ರಾಷ್ಟ್ರೀಯ ಚಾಂಪಿಯನ್ ಸಿಮ್ರನ್‌ಜೀತ್ ಕೌರ್ ಎದುರು ಸೋತರು. ಲವ್ಲೀನಾ ಬಾರ್ಗೇನ್ (69 ಕೆ.ಜಿ) ಲಲಿತಾ ವಿರುದ್ಧ ಗೆದ್ದರು.

ಫೆಬ್ರುವರಿ 3ರಿಂದ 14ರವರೆಗೆ ಚೀನಾದಲ್ಲಿ ಒಲಿಂಪಿಕ್ ಕ್ವಾಲಿಫೈಯರ್ ಬಾಕ್ಸಿಂಗ್ ನಡೆಯಲಿದೆ. ಅದರ ಭಾಗವಹಿಸುವ ಭಾರತ ತಂಡವನ್ನು ಇಲ್ಲಿ ಪ್ರಕಟಿಸಲಾಯಿತು. ‌

ತಂಡ: ಎಂ.ಸಿ. ಮೇರಿ ಕೋಮ್ (51 ಕೆ.ಜಿ), ಸಾಕ್ಷಿ ಚೌಧರಿ (57 ಕೆ.ಜಿ.), ಸಿಮ್ರನ್‌ಜೀತ್ ಕೌರ್ (60 ಕೆ.ಜಿ), ಲವ್ಲೀನಾ ಬಾರ್ಗೇನ್ (69 ಕೆ.ಜಿ), ಪೂಜಾ ರಾಣಿ (75 ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT