ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌: ಮುನ್ನಡೆ ಉಳಿಸಿಕೊಂಡ ಗುಕೇಶ್‌, ನೆಪೊಮ್‌

ಹತ್ತನೇ ಸುತ್ತಿನಲ್ಲಿ ಗೆದ್ದ ವೈಶಾಲಿ
Published 16 ಏಪ್ರಿಲ್ 2024, 14:52 IST
Last Updated 16 ಏಪ್ರಿಲ್ 2024, 14:52 IST
ಅಕ್ಷರ ಗಾತ್ರ

ಟೊರಾಂಟೊ: ಹತ್ತನೇ ಸುತ್ತಿನಲ್ಲಿ ‘ಡ್ರಾ’ಕ್ಕೆ ಒಪ್ಪಿಕೊಂಡ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಮತ್ತು ರಷ್ಯಾದ ಇಯಾನ್‌ ನೆಪೊಮ್‌ನಿಯಾಚಿ ಅವರು ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಸಿದ್ದಾರೆ. ಸೋಮವಾರದ ನಂತರ ಇಬ್ಬರೂ ತಲಾ ಆರು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ.

ಟೂರ್ನಿಗೆ ಮಂಗಳವಾರ ವಿಶ್ರಾಂತಿ ದಿನವಾಗಿದ್ದು ಬುಧವಾರ 11ನೇ ಸುತ್ತಿನ ಪಂದ್ಯಗಳು ನಡೆಯಲಿವೆ. 

ಭಾರತೀಯರ ಆಟಗಾರರೇ ಇದ್ದ ಹತ್ತನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಪ್ರಜ್ಞಾನಂದ ಮತ್ತು ವಿದಿತ್ ಸಂತೋಷ್‌ ಗುಜರಾತಿ ಕೂಡ ಪಾಯಿಂಟ್‌ ಹಂಚಿಕೊಳ್ಳುವುದಕ್ಕೆ ಒಪ್ಪಿಕೊಂಡರು. 39 ನಡೆಗಳ ನಂತರ ಇಬ್ಬರೂ ‘ಶಾಂತಿ ಒಪ್ಪಂದ’ಕ್ಕೆ ಸಹಿಮಾಡಿದರು.

ಇನ್ನೆರಡು ಪಂದ್ಯಗಳಲ್ಲಿ ನಿರ್ಣಾಯಕ ಫಲಿತಾಂಶಗಳು ಬಂದವು. ಫ್ಯಾಬಿಯಾನೊ ಕರುವಾನಾ ಮತ್ತು ಹಿಕಾರು ನಕಾಮುರಾ ಕ್ರಮವಾಗಿ ಫಿರೋಜ್‌ ಅಲಿರೇಝಾ ಮತ್ತು ನಿಜತ್‌ ಅಬಸೋವ್‌ ಅವರನ್ನು ಸೋಲಿಸಿದರು.

ಪ್ರಜ್ಞಾನಂದ, ಕರುವಾನ ಮತ್ತು ನಕಾಮುರಾ ತಲಾ 5.5 ಪಾಯಿಂಟ್ಸ್‌ ಸಂಗ್ರಹಿಸಿದ್ದು ಅಗ್ರಸ್ಥಾನ ಹಂಚಿಕೊಂಡಿರುವ ಇಬ್ಬರು ಆಟಗಾರರ ಬೆನ್ನುಬಿದ್ದಿದ್ದಾರೆ.

ಎಂಟು ಆಟಗಾರರ ಯಾದಿಯಲ್ಲಿ ವಿದಿತ್‌ (5) ಆರನೇ ಸ್ಥಾನದಲ್ಲಿದ್ದಾರೆ. ಅಲಿರೇಝಾ (3.5) ಮತ್ತು ಅಬಸೋವ್‌ (2) ಏಳಿಉ ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ.

ಓಪನ್ ವಿಭಾಗದಲ್ಲಿ ನೆಪೊಮ್‌ನಿಯಾಚಿ ಬಿಳಿ ಅಥವಾ ಕಪ್ಪು ಕಾಯಿಗಳಲ್ಲಿ ಆಡುವಾಗ ಒಮ್ಮೆಯೂ ‘ರಿಸ್ಕ್’ ತೆಗೆದುಕೊಂಡಿಲ್ಲ. ಬೇರೆ ಆಟಗಾರರು ತಪ್ಪು ಮಾಡಿದಾಗ ಗೆಲುವಿನ ಅವಕಾಶ ಬಿಟ್ಟಿಲ್ಲ. ಹೀಗಾಗಿ ಅವರು ಟೂರ್ನಿಯಲ್ಲಿ ಅಜೇಯರಾಗಿರುವ ಏಕೈಕ ಆಟಗಾರ ಎನಿಸಿದ್ದಾರೆ. 17 ವರ್ಷದ ಗುಕೇಶ್ ಟೂರ್ನಿಯ ಅತಿ ಕಿರಿಯ ಆಟಗಾರ.

ವೈಶಾಲಿಗೆ ಜಯ:

ಮಹಿಳಾ ವಿಭಾಗದಲ್ಲಿ ಟಿಂಗ್ಜಿ ಲೀ (ಚೀನಾ) ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರ ಅಜೇಯ ಓಟಕ್ಕೆ ಕೊನೆಹಾಡಿದರು. ಜೊತೆಯಲ್ಲೇ, ಸ್ವದೇಶದ ಝೊಂಗ್‌ಯಿ ತಾನ್‌ ಜೊತೆ ಅಗ್ರಸ್ಥಾನ ಹಂಚಿಕೊಂಡರು. ಇಬ್ಬರ ಖಾತೆಗಳಲ್ಲೂ ಆರೂವರೆ ಪಾಯಿಂಟ್‌ಗಳಿವೆ.

ಝೊಂಗ್‌ ಹತ್ತನೇ ಸುತ್ತಿನಲ್ಲಿ ಭಾರತದ ಕೋನೇರು ಹಂಪಿ ಜೊತೆಗಿನ ಪಂದ್ಯವನ್ನು 72 ನಡೆಗಳ ನಂತರ  ‘ಡ್ರಾ’ ಮಾಡಿಕೊಂಡರು. ಹಂಪಿ (4.5) ಐದನೇ ಸ್ಥಾನದಲ್ಲಿದ್ದಾರೆ. ಸಲಿಮೋವಾ, ಮುಝಿಚುಕ್‌ (ತಲಾ 4) ಮತ್ತು ವೈಶಾಲಿ ರಮೇಶ್‌ಬಾಬು (3.5) ನಂತರದ ಸ್ಥಾನಗಳಲ್ಲಿದ್ದಾರೆ.

ಗೊರ್ಯಾಚ್ಕಿನಾ ಮತ್ತು ಕ್ಯಾಥೆರಿನಾ ಲಾಗ್ನೊ (ತಲಾ ಐದೂವರ ಅಂಕ) ಎರಡನೇ ಸ್ಥಾನದಲ್ಲಿದ್ದಾರೆ.

ಎರಡು ಸೋಲುಗಳ ನಂತರ ಚೇತರಿಸಿಕೊಂಡ ಆರ್‌.ವೈಶಾಲಿ, ಬಲ್ಗೇರಿಯಾದ ನುರ್ಗ್ಯುಲ್‌ ಸಲಿಮೋವಾ ಅವರನ್ನು ಸೋಲಿಸಿದರು. ರಷ್ಯಾದ ಕ್ಯಾಥೆರಿನಾ ಲಾಗ್ನೊ, ಉಕ್ರೇನ್‌ನ ಅನ್ನಾ ಮುಝಿಚುಕ್‌ ಸಂಗಡ ಪಾಯಿಂಟ್ಸ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT