ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌: ಸೋಲಿನೊಡನೆ ಎರಡನೇ ಸ್ಥಾನಕ್ಕೆ ಗುಕೇಶ್

‘ಡ್ರಾ’ ಪಂದ್ಯದಲ್ಲಿ ಪ್ರಜ್ಞಾನಂದ, ವಿದಿತ್‌
Published 12 ಏಪ್ರಿಲ್ 2024, 12:30 IST
Last Updated 12 ಏಪ್ರಿಲ್ 2024, 12:30 IST
ಅಕ್ಷರ ಗಾತ್ರ

ಟೊರಾಂಟೊ: ಮೊದಲ ಸೋಲು ಕಂಡ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, ಕ್ಯಾಂಡಿಡೆಟ್ಸ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಮೊದಲ ಸ್ಥಾನದಿಂದ ಕೆಳಗೆ ಸರಿದರು. ಆದರೆ ಏಳನೇ ಸುತ್ತಿನಲ್ಲಿ, ಭಾರತದ ಇನ್ನೊಬ್ಬ ಪ್ರತಿಭಾನ್ವಿತ ಆರ್‌.ಪ್ರಜ್ಞಾನಂದ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಎದುರು ಸುಲಭ ‘ಡ್ರಾ’ ಪಡೆಯುವಲ್ಲಿ ಯಶಸ್ವಿಯಾದರು.

ಗುಕೇಶ್‌ ಈ ಸೋಲಿನಿಂದಾಗಿ ಅಮೆರಿಕದ ಕರುವಾನಾ ಮತ್ತು ಪ್ರಜ್ಞಾನಂದ ಜೊತೆ ಎರಡನೇ ಸ್ಥಾನ ಹಂಚಿಕೊಳ್ಳಬೇಕಾಗಿದೆ. ಮೂವರೂ ತಲಾ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.

ಈ ಟೂರ್ನಿ ಅರ್ಧಭಾಗ ಕ್ರಮಿಸಿದ್ದು, ರಷ್ಯಾದ ಇಯಾನ್ ನೆಪೊಮ್‌ನಿಯಾಚಿ (4.5 ಪಾಯಿಂಟ್ಸ್‌) ಅವರು ಅರ್ಧ ಪಾಯಿಂಟ್‌ ಅಂತರದಿಂದ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ನೆಪೊಮ್‌ ಅವರು ಎರಡನೆ ಶ್ರೇಯಾಂಕ ಹಿಕಾರು ನಕಾಮುರಾ ಜೊತೆ ಪಾಯಿಂಟ್ ಹಂಚಿಕೊಂಡರು.

ಭಾರತದ ಮತ್ತೊಬ್ಬ ಆಟಗಾರ ವಿದಿತ್‌ ಗುಜರಾತಿ (3.5) ಅವರು ನಿಜತ್‌ ಅಬಸೋವ್‌ ಜೊತೆ ಡ್ರಾ ಮಾಡಿಕೊಂಡು ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ನಕಾಮುರಾ ಮತ್ತು ಅಲಿರೇಝಾ (ತಲಾ 2.5 ಪಾಯಿಂಟ್ಸ್‌) ಅವರು ಆರು ಮತ್ತು ಏಳನೇ ಸ್ಥಾನದಲ್ಲಿದ್ದರೆ, ಅಬಸೋವ್‌ (2 ಪಾಯಿಂಟ್‌) ಕೊನೆಯ ಸ್ಥಾನದಲ್ಲಿದ್ದಾರೆ.

ವೈಶಾಲಿಗೆ ಹಿನ್ನಡೆ:

ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿದರು. ಚೀನಾದ ಟಿಂಗ್ಜಿ ಲೀ ಅವರು 36 ನಡೆಗಳಲ್ಲಿ ಭಾರತದ ಆಟಗಾರ್ತಿಯನ್ನು ಸೋಲಿಸಿದರು. ಈ ಪಂದ್ಯವೊಂದಲ್ಲಿ ಮಾತ್ರ ಜಯ ಅಪಜಯ ನಿರ್ಣಯವಾಯಿತು. ಈ ವಿಭಾಗದ ಇತರ ಮೂರು ಪಂದ್ಯಗಳು ‘ಡ್ರಾ’ ಆದವು.

ಝೊಂಗ್‌ಯಿ ತಾನ್ (ಚೀನಾ) ಅವರು ಏಳು ಸುತ್ತುಗಳಿಂದ ಐದು ಪಾಯಿಂಟ್ಸ್ ಕಲೆಹಾಕಿ ಅರ್ಧ ಪಾಯಿಂಟ್‌ ಅಂತರದಿಂದ ಲೀಡ್‌ ಉಳಿಸಿಕೊಂಡಿದ್ದಾರೆ. ಅವರು ತಮ್ಮ ನಿಕಟ ಸ್ಪರ್ಧಿ, ರಷ್ಯಾದ  ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (4.5 ಪಾಯಿಂಟ್ಸ್‌) ಜೊತೆ ‘ಡ್ರಾ’ ಮಾಡಿಕೊಂಡರು.

ರಷ್ಯಾದ ಕ್ಯಾಥೆರಿನಾ ಲಾಗ್ನೊ, ಬಲ್ಗೇರಿಯಾದ ನುರ್ಗ್ಯುಲ್ ಸಲಿಮೊವಾ ಅವರ ಜೊತೆ ‘ಡ್ರಾ’ ಮಾಡಿಕೊಂಡರು. ಅನ್ನಾ ಮುಝಿಚುಕ್‌, ಭಾರತದ ಕೋನೇರು ಹಂಪಿ ಅವರ ಜೊತೆ ಪಾಯಿಂಟ್‌ ಹಂಚಿಕೊಳ್ಳಲು ನಿರ್ಧರಿಸಿದರು.

‌ಲಾಗ್ನೊ ಮತ್ತು ಲೀ ತಲಾ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದ್ದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಸಲಿಮೊವಾ ಐದನೇ ಸ್ಥಾನದಲ್ಲಿದ್ದಾರೆ.

ಎರಡನೇ ರೌಂಡ್‌ರಾಬಿನ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೆ ಮಾತ್ರ ಹಂಪಿ ಮತ್ತು ವೈಶಾಲಿ ಅವರಿಗೆ ಅಗ್ರಸ್ಥಾನದತ್ತ ಸಾಗಲು ಅವಕಾಶವಿದೆ.

ಅಲಿರೇಝಾ, 18 ವರ್ಷದ ಗುಕೇಶ್‌ ವಿರುದ್ಧ ಗೆಲ್ಲುವಲ್ಲಿ ಅದೃಷ್ಟದ ಬಲವೂ ನೆರವಾಯಿತು. ಮಿಡ್ಲ್‌ ಗೇಮ್‌ನಲ್ಲಿ ಗುಕೇಶ್ ಅವರ ಪಡೆಗಳ ಸ್ಥಿತಿ ಉತ್ತಮವಾಗಿತ್ತು. ಆದರೆ ಪಂದ್ಯವನ್ನು ಸಂಕೀರ್ಣಗೊಳಿಸಲು ಯತ್ನಿಸಿದ್ದು ದುಬಾರಿಯಾಯಿತು. ನಂತರ ‘ಚೆಕ್‌ಮೇಟ್‌’ ಬೆದರಿಕೆಯೊಡನೆ ಅಲಿರೇಝಾ ಒತ್ತಡ ಹೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT