ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌: ಪ್ರಶಸ್ತಿಗೆ ಹತ್ತಿರವಾದ ಗುಕೇಶ್

Published 21 ಏಪ್ರಿಲ್ 2024, 14:16 IST
Last Updated 21 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ಟೊರಾಂಟೊ: ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್‌  ಟೂರ್ನಿಯ 13ನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು ಸೋಲಿಸಿ ಪ್ರಶಸ್ತಿಗೆ ಹತ್ತಿರವಾದರು. ಇನ್ನೊಂದು ಸುತ್ತು ಉಳಿದಿರುವಂತೆ 17 ವರ್ಷದ ಭಾರತದ ಆಟಗಾರ  ಏಕಾಂಗಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.

ಚೆಸ್‌ ಇತಿಹಾಸದಲ್ಲೇ ವಿಶ್ವ ಚಾಂಪಿಯನ್‌ಗೆ ಸವಾಲು ಹಾಕಲಿರುವ ಅತಿ ಕಿರಿಯ ಆಟಗಾರ ಎಂಬ ಶ್ರೇಯಸ್ಸಿಗೆ ಅವರು ತೀರಾ ಹತ್ತಿರದಲ್ಲಿದ್ದಾರೆ. ಈ ಟೂರ್ನಿ ಗೆದ್ದಲ್ಲಿ ಅವರು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಚೀನಾದ ಡಿಂಗ್‌ ಲಿರೆನ್ ಅವರನ್ನು ಎದುರಿಸಲಿದ್ದಾರೆ.

ಶನಿವಾರ ಇನ್ನೊಂದು ಪ್ರಮುಖ ಪಂದ್ಯದಲ್ಲಿ ರಷ್ಯಾದ ಇಯಾನ್‌ ನೆಪೊಮ್‌ನಿಯಚಿ ಮತ್ತು ಅಮೆರಿಕದ ಹಿಕಾರು ನಕಾಮುರಾ ಅವರು ಬೇಗನೇ ಅಂದರೆ 26 ನಡೆಗಳಲ್ಲಿ ಪಾಯಿಂಟ್‌ ಹಂಚಿಕೊಳ್ಳಲು ಒಪ್ಪಿಕೊಂಡರು.

ಗುಕೇಶ್ ಅವರ ಸಂಯಮದ ಆಟಕ್ಕೆ ಜಯ ಒಲಿಯಿತು. ಸಂಕೀರ್ಣ ಸ್ಥಿತಿಗೆ ಹೋಗಿದ್ದ ಪಂದ್ಯದ 47ನೇ ನಡೆಯಲ್ಲಿ ಅಲಿರೇಝಾ ತಪ್ಪು  ಎಸಗಿದಾಗ ಭಾರತದ ಆಟಗಾರ ಆ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಲಿಲ್ಲ. 63ನೇ ನಡೆಯಲ್ಲಿ ಗುಕೇಶ್ ‍ಪಂದ್ಯ ಗೆದ್ದರು. ಅವರ ಬಳಿ ಸಂಭವನೀಯ 13ರಲ್ಲಿ 8.5 ಪಾಯಿಂಟ್ಸ್‌ ಇವೆ. ಇದು ನಕಾಮುರಾ, ನೆಪೊಮ್‌ನಿಯಾಚಿ ಮತ್ತು ಅಮೆರಿದಕ ಫ್ಯಾಬಿಯಾನೊ ಕರುವಾನಾ ಅವರಿಗಿಂತ ಅರ್ಧ ಪಾಯಿಂಟ್‌ ಹೆಚ್ಚು.

ಹೀಗಾಗಿ ಕೊನೆಯ ಸುತ್ತಿನಲ್ಲಿ ನಾಲ್ವರಿಗೆ ಪ್ರಶಸ್ತಿ ಗೆಲುವಿನ ಅವಕಾಶ ಜೀವಂತವಾಗಿದೆ. ಗುಕೇಶ್ ಅಂತಿಮ ಸುತ್ತಿನಲ್ಲಿ ನಕಾಮುರಾ ಅವರನ್ನು ಎದುರಿಸಲಿದ್ದಾರೆ. ನಕಾಮುರಾ ಬಿಳಿ ಕಾಯಿಗಳಲ್ಲಿ ಆಡಲಿದ್ದಾರೆ. ಕರುವಾನಾ ಇನ್ನೊಂದು ಪಂದ್ಯದಲ್ಲಿ ನೆಪೊಮ್‌ನಿಯಾಚಿ ವಿರುದ್ಧ ಆಡಲಿದ್ದಾರೆ. ಕರುವಾನಾ ಬಿಳಿ ಕಾಯಿಗಳನ್ನು ಮುನ್ನಡೆಸಲಿದ್ದಾರೆ. ಕೊನೆಯ ಸುತ್ತಿನಲ್ಲಿ ‘ಡ್ರಾ’ ಕೂಡ ಗುಕೇಶ್‌ಗೆ ನೆರವಾಗಬಹುದು ಎಂಬುದು ಚೆಸ್‌ ಪಂಡಿತರ ಲೆಕ್ಕಾಚಾರ.

ಆರ್‌.ಪ್ರಜ್ಞಾನಂದ ಮತ್ತು ವಿದಿತ್‌ ಎಸ್‌.ಗುಜರಾತಿ ಅವರು ಆರು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನ ಹಂಚಿಕೊಂಡಿದ್ದಾರೆ. ಫಿರೋಜಾ ಅವರು 4.5 ಪಾಯಿಂಟ್ಸ್ ಗಳಿಸಿದ್ದರೆ, ತಳದಲ್ಲಿರುವ ಅಬಸೋವ್ ಬಳಿ ಮೂರೂವರೆ ಪಾಯಿಂಟ್ಸ್ ಇವೆ.

ಇತರ ಪಂದ್ಯಗಳಲ್ಲಿ ಕರುವಾನಾ ಅವರು ತೀವ್ರ ಹೋರಾಟದ ನಂತರ ಪ್ರಜ್ಞಾನಂದ ಅವರನ್ನು 89 ನಡೆಗಳಲ್ಲಿ ಸೋಲಿಸಿದರೆ, ವಿದಿತ್‌ ಇನ್ನೊಂದು ಪಂದ್ಯದಲ್ಲಿ ಅಜರ್‌ಬೈಜಾನ್‌ನ ನಿಜತ್‌ ಅಬಸೋವ್‌ ಜೊತೆ 31 ನಡೆಗಳ ನಂತರ ‍‘ಡ್ರಾ’ ಮಾಡಿಕೊಳ್ಳಲಷ್ಟೇ ಶಕ್ತರಾದರು.

ವೈಶಾಲಿಗೆ ಸತತ ನಾಲ್ಕನೇ ಜಯ

ಮಹಿಳಾ ವಿಭಾಗದಲ್ಲಿ ಭಾರತದ ವೈಶಾಲಿ ರಮೇಶಬಾಬು (ಪ್ರಜ್ಞಾನಂದ ಅವರ ಅಕ್ಕ) ಅವರು ಚೀನಾದ ಲೀ ಟಿಂಗ್ಜೀ ಅವರನ್ನು ಸೋಲಿಸಿದರು. ಆರಂಭದ ಸುತ್ತುಗಳಲ್ಲಿ ಪರದಾಡಿದ್ದ ಭಾರತದ ಆಟಗಾರ್ತಿಗೆ ಇದು ಸತತ ನಾಲ್ಕನೇ ಗೆಲುವು.

ಆದರೆ ಈ ವಿಭಾಗದಲ್ಲಿ ಚೀನಾದ ಇನ್ನೊಬ್ಬ ಆಟಗಾರ್ತಿ ಝೊಂಗ್‌ಯಿ ತಾನ್ ಅವರು ಕೊನೆಯ ಸುತ್ತು ಇರುವಂತೆ ತಮ್ಮ ನಿಕಟ ಎದುರಾಳಿ ಟಿಂಗ್ಜೀ ಅವರಿಗಿಂತ ಒಂದು ಪಾಯಿಂಟ್‌ ಲೀಡ್‌ ಪಡೆದಿದ್ದು, ಪ್ರಶಸ್ತಿಯನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಕೊನೆಯ ಪಂದ್ಯ ಡ್ರಾ ಆದರೂ ಅವರೇ ವಿಜೇತರಾಗಲಿದ್ದಾರೆ.

ಝೊಂಗ್‌ಯಿ 13ನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (ರಷ್ಯಾ) ಜೊತೆ ಡ್ರಾ ಮಾಡಿಕೊಂಡರು. ಒಂದು ಹಂತದಲ್ಲಿ ಸತತ ಮೂರು (ಏಳರಿಂದ ಒಂಬತ್ತನೇ ಸುತ್ತು) ಪಂದ್ಯಗಳನ್ನು ಸೋತಿದ್ದ ವೈಶಾಲಿ ಅಮೋಘ ಚೇತರಿಕೆ ತೋರಿದ್ದು, ಶನಿವಾರ ಉತ್ತಮ ಗೆಲುವಿನ ಮೂಲಕ ಟಿಂಗ್ಜೀ ಅವರ ಪ್ರಶಸ್ತಿ ಆಸೆಯನ್ನು ಭಗ್ನಗೊಳಿಸಿದರು.

ಕೋನೇರು ಹಂಪಿ ಮತ್ತು ಅನ್ನಾ ಮುಝಿಚುಕ್‌ ನಡುವಣ ಪಂದ್ಯ ಡ್ರಾ ಆಯಿತು. ಬಲ್ಗೇರಿಯಾದ ನುರ್ಗ್ಯುಲ್‌ ಸಲಿಮೋವಾ ಮತ್ತು ರಷ್ಯಾದ ಕ್ಯಾಥೆರಿನಾ ಲಾಗ್ನೊ ನಡುವಣ ಪಂದ್ಯವೂ ಅದೇ ಹಾದಿ ಹಿಡಿಯಿತು.

ಲೀ (7.5) ಎರಡನೇ ಸ್ಥಾನದಲ್ಲಿದ್ದಾರೆ. ಗೊರ್ಯಾಚ್ಕಿನಾ, ಲಾಗ್ನೊ, ಹಂಪಿ ಮತ್ತು ವೈಶಾಲಿ ತಲಾ 6.5 ಪಾಯಿಂಟ್ಸ್‌ ಸಂಗ್ರಹಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಝೊಂಗ್‌ಯಿ ತಾನ್‌ ಅಂತಿಮ ಸುತ್ತಿನಲ್ಲಿ ಮುಝಿಚುಕ್ ಎದುರು ಆಡಬೇಕಾಗಿದೆ. ಟಿಂಗ್ಜಿ ಅವರು ಹಂಪಿ ವಿರುದ್ಧ ಆಡಲಿದ್ದಾರೆ. ವೈಶಾಲಿ ಅವರ ಎದುರಾಳಿ ಲಾಗ್ನೊ. ಗೊರ್ಯಾಚ್ಕಿನಾ ಅವರಿಗೆ ಸಲಿಮೋವಾ ಮುಖಾಮುಖಿ ಆಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT