ಬುಡಾಪೆಸ್ಟ್ : ಅಗ್ರ ಶ್ರೇಯಾಂಕದ ಭಾರತ ಮಹಿಳೆಯರ ತಂಡ, 45ನೇ ಚೆಸ್ ಒಲಿಂಪಿಯಾಡ್‌ನ ಎಂಟನೇ ಸುತ್ತಿನಲ್ಲಿ ಗುರುವಾರ ಪೊಲೆಂಡ್ ಎದುರು 1.5–2.5 ಅಂತರದಲ್ಲಿ ಆಘಾತ ಅನುಭವಿಸಿತು. ಇದು ಭಾರತ ವನಿತೆಯರಿಗೆ ಎದುರಾದ ಮೊದಲ ಸೋಲು.
ಓಪನ್ ವಿಭಾಗದಲ್ಲಿ ಭಾರತ ತಂಡ ಸಂಭವನೀಯ 16 ಪಾಯಿಂಟ್ಸ್ ಕಲೆ ಹಾಕಿದ್ದು, ಚಿನ್ನ ಗೆಲ್ಲುವ ಹಾದಿಯಲ್ಲಿದೆ. ಎರಡನೇ ಸ್ಥಾನದಲ್ಲಿರುವ ಹಂಗರಿ ಮತ್ತು ಉಜ್ಬೇಕಿಸ್ತಾನ ತಂಡಗಳಿಗಿಂತ ಭಾರತ ತಂಡ 2 ಪಾಯಿಂಟ್ ಮುನ್ನಡೆ ಹೊಂದಿದೆ.
ಮಹಿಳಾ ವಿಭಾಗದ ಮೊದಲ ಬೋರ್ಡ್‌ನಲ್ಲಿ ದ್ರೋಣವಲ್ಲಿ ಹಾರಿಕಾ ಅವರು ಎಂಟನೇ ಸುತ್ತಿನಲ್ಲೂ ಲಯಕ್ಕೆ ಮರಳಲಾಗಲಿಲ್ಲ. ಅಲಿನಾ ಕಾಶ್ಲಿನ್‌ಸ್ಕಾಯಾ ಎದುರು ಸೋಲು ಅನುಭವಿಸಿದರು. ಮೋನಿಕಾ ಸೊಕೊ, ಎರಡನೇ ಬೋರ್ಡ್‌ನಲ್ಲಿ ಆರ್.ವೈಶಾಲಿ ಎದುರು ಜಯಗಳಿಸಿದರು.
ದಿವ್ಯಾ ದೇಶಮುಖ್, ಅಲೆಕ್ಸಾಂಡ್ರಾ ಮಾಸ್ಟ್‌ಸೆವ್‌ಸ್ಕಾಯಾ ಎದುರು ಜಯಗಳಿಸಿದ್ದರಿಂದ ಎಲ್ಲರ ಕಣ್ಣು, ಕೊನೆಯ ಬೋರ್ಡ್‌ನಲ್ಲಿದ್ದ ವಂತಿಕಾ ಅಗರವಾಲ್– ಅಲಿಸಿಯಾ ಸ್ಲಿವಿಕಾ ಪಂದ್ಯದ ಮೇಲೆ ನೆಟ್ಟಿತು. ಆದರೆ ಈ ಪಂದ್ಯ ಅಂತಿಮವಾಗಿ ‘ಡ್ರಾ’ ಆಯಿತು.