ಬುಡಾಪೆಸ್ಟ್: ಒಲಿಂಪಿಯಾಡ್‌ನಲ್ಲಿ ಭಾರತ ಓಪನ್ ಮತ್ತು ಮಹಿಳೆಯರ ವಿಭಾಗದಲ್ಲಿ ಭಾನುವಾರ ಇತಿಹಾಸ ನಿರ್ಮಿಸಿತು. ಎರಡೂ ತಂಡಗಳು ಇದೇ ಮೊದಲ ಬಾರಿಗೆ ಚಿನ್ನದ ಪದಕಗಳನ್ನು ಗೆದ್ದು ಬೀಗಿದವು.
ಪುರುಷರ ವಿಭಾಗದಲ್ಲಿ ಭಾರತ 11ನೇ ಸುತ್ತಿನಲ್ಲಿ ಸ್ಲೊವೇನಿಯಾ ತಂಡವನ್ನು 3.5–0.5 ರಿಂದ ಸೋಲಿಸಿತು. ಆ ಮೂಲಕ ಗರಿಷ್ಠ 22ರಲ್ಲಿ 21 ಪಾಯಿಂಟ್ಸ್ ಕಲೆಹಾಕಿತು. 10 ಪಂದ್ಯಗಳನ್ನು ಗೆದ್ದು, ಒಂದನ್ನು (ಉಜ್ಬೇಕಿಸ್ತಾನ ವಿರುದ್ಧ) ಡ್ರಾ ಮಾಡಿಕೊಂಡಿತು. ಅರ್ಜುನ್ ಇರಿಗೇಶಿ ಮತ್ತು ಡಿ.ಗುಕೇಶ್ ಅವರ ನಿರಂತರ ಉತ್ತಮ ಪ್ರದರ್ಶನ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಮಹಿಳೆಯರ ವಿಭಾಗದಲ್ಲಿ ಭಾರತ ಕೊನೆಯ ಸುತ್ತಿನಲ್ಲಿ ಅಜರ್‌ಬೈಜಾನ್ ತಂಡವನ್ನು ಮಣಿಸಿತು. ಭಾರತ 19 ಪಾಯಿಂಟ್ಸ್ ಕಲೆಹಾಕಿದರೆ, ಕಜಕಸ್ತಾನ 18 ಪಾಯಿಂಟ್ಸ್ ಗಳಿಸಿ ಬೆಳ್ಳಿ ಮತ್ತು ಅಮೆರಿಕ (17 ಪಾಯಿಂಟ್ಸ್) ಕಂಚಿನ ಪದಕ ಗಳಿಸಿತು.