ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸೇಬಲ್ ಮಾಸ್ಟರ್ಸ್ ಟೂರ್ನಿ ಫೈನಲ್: ಭಾರತದ ಪ್ರಜ್ಞಾನಂದಗೆ ಚೀನಾದ ದಿಂಗ್‌ ಸವಾಲು

ಅನೀಶ್ ಗಿರಿಗೆ ಸೋಲುಣಿಸಿದ ಭಾರತದ ಆಟಗಾರ ಫೈನಲ್‌ಗೆ
Last Updated 25 ಮೇ 2022, 16:44 IST
ಅಕ್ಷರ ಗಾತ್ರ

ಚೆನ್ನೈ: ಜಯದ ಓಟ ಮುಂದುವರಿಸಿರುವ ಆರ್‌. ಪ್ರಜ್ಞಾನಂದ, ಮೆಲ್ಟ್‌ವಾಟರ್‌ ಚಾಂಪಿಯನ್ಸ್ ಚೆಸ್‌ ಟೂರ್‌ ಚೆಸೇಬಲ್ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಆನ್‌ಲೈನ್‌ ಮೂಲಕ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ತಡರಾತ್ರಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ 16 ವರ್ಷದ ಪ್ರಜ್ಞಾನಂದ 3.5–2.5ರಿಂದ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಅವರನ್ನು ಸೋಲಿಸಿದರು. ನಾಲ್ಕು ಗೇಮ್‌ಗಳ ಈ ಜಿದ್ದಾಜಿದ್ದಿನ ಪಂದ್ಯವು 2–2ರಿಂದ ಸಮಬಲವಾಗಿತ್ತು. ಆದರೆ ಟೈಬ್ರೇಕ್‌ನಲ್ಲಿ ಪ್ರಜ್ಞಾನಂದ ಮೇಲುಗೈ ಸಾಧಿಸಿದರು.

ಸೆಮಿಫೈನಲ್‌ನ ಮೊದಲ ಗೇಮ್ ಡ್ರಾನಲ್ಲಿ ಕೊನೆಗೊಂಡಿತು. ಎರಡನೇ ಗೇಮ್‌ನಲ್ಲಿ ಪ್ರಜ್ಞಾನಂದ ವಿಜಯ ಸಾಧಿಸಿದರು. ಇದು ಗಿರಿ ಅವರಿಗೆ ಟೂರ್ನಿಯ ಮೊದಲ ಸೋಲಾಗಿತ್ತು. ಮೂರನೇ ಗೇಮ್‌ನ ಆರಂಭದಲ್ಲಿ ಡಚ್ ಆಟಗಾರ ಮೇಲುಗೈ ಸಾಧಿಸುವಂತೆ ಕಂಡರೂ ಚಾಣಾಕ್ಷತನ ಮೆರೆದ ಪ್ರಜ್ಞಾನಂದ ಡ್ರಾ ಮಾಡಿಕೊಂಡರು. ನಾಲ್ಕನೇ ಗೇಮ್‌ನಲ್ಲಿ ಗಿರಿ ಯಶಸ್ಸು ಸಾಧಿಸಿದರು.

ಟೈಬ್ರೇಕ್‌ನಮೊದಲ ಬ್ಲಿಟ್ಜ್‌ ಗೇಮ್‌ನಲ್ಲಿ 33 ನಡೆಗಳಲ್ಲಿ ಪ್ರಜ್ಞಾನಂದ ಜಯಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಗಿರಿ ತಿರುಗೇಟು ನೀಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಗೇಮ್ ಡ್ರಾನಲ್ಲಿ ಕೊನೆಗೊಂಡಿತು.ಪಂದ್ಯವು ಬುಧವಾರ ಮುಂಜಾವು ಅಂತ್ಯಗೊಂಡಿತು. ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ಪ್ರಜ್ಞಾನಂದ ‘ನಾನು ಬೆಳಗಿನ 8.45ರ ವೇಳೆಗೆ ಶಾಲೆಯಲ್ಲಿರಬೇಕು‘ ಎಂದರು.

ಫೈನಲ್‌ನಲ್ಲಿ ಪ್ರಜ್ಞಾನಂದ ಅವರಿಗೆ ಚೀನಾದ ದಿಂಗ್ ಲಿರೆನ್ ಸವಾಲು ಎದುರಾಗಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ದಿಂಗ್‌ 2.5–1.5ರಿಂದ ಅಗ್ರ ಕ್ರಮಾಂಕದ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮಣಿಸಿದರು.

ಪ್ರಜ್ಞಾನಂದ ಪ್ರಿಲಿಮನರಿ ಸುತ್ತಿನಲ್ಲಿ ಕಾರ್ಲ್‌ಸನ್ ಅವರಿಗೆ ಸೋಲುಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT