ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ವಿಶ್ವಾಸದಲ್ಲಿರುವ ಭಾರತಕ್ಕೆ, ಬ್ರಿಟನ್ ಎದುರಾಳಿ

ನಾಳೆ ಕ್ವಾರ್ಟರ್‌ಫೈನಲ್‌ ಪಂದ್ಯ
Published : 3 ಆಗಸ್ಟ್ 2024, 14:40 IST
Last Updated : 3 ಆಗಸ್ಟ್ 2024, 14:40 IST
ಫಾಲೋ ಮಾಡಿ
Comments

ಪ್ಯಾರಿಸ್: ಟೋಕಿಯೊ ಕ್ರೀಡೆಗಳ ಬೆಳ್ಳಿ ವಿಜೇತ ಆಸ್ಟ್ರೇಲಿಯಾದ ಮೇಲೆ ಶುಕ್ರವಾರ ಚಾರಿತ್ರಿಕ ಜಯ ದಾಖಲಿಸಿದ ನಂತರ ಭಾರತ ಹಾಕಿ ತಂಡದ ಆತ್ಮವಿಶ್ವಾಸ ವೃದ್ಧಿಸಿದೆ. ಈ ಉತ್ಸಾಹದ ಇಂಧನ ತುಂಬಿಕೊಂಡು ಭಾರತ ತಂಡ ಭಾನುವಾರ ನಡೆಯುವ ಒಲಿಂಪಿಕ್ಸ್‌ ಹಾಕಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬ್ರಿಟನ್ ತಂಡವನ್ನು ಎದುರಿಸಲಿದೆ.

ಭಾರತ ತನ್ನ ಅತ್ಯುತ್ತಮ ಆಟವನ್ನು ಆಸ್ಟ್ರೇಲಿಯಾ ವಿರುದ್ಧ ‘ಬಿ’ ಗುಂಪಿನ ಕೊನೆಯ ಪಂದ್ಯಕ್ಕೆ ಉಳಿಸಿಕೊಂಡಂತೆ ಇತ್ತು. 3–2 ರಿಂದ ಗೆದ್ದ ಭಾರತ ಒಲಿಂಪಿಕ್ಸ್‌ನಲ್ಲಿ 52 ವರ್ಷಗಳ ನಂತರ ಈ ಎದುರಾಳಿಗೆ ಸೋಲುಣಿಸಿತ್ತು. ಹಾಕಿಯನ್ನು ಆಸ್ಟ್ರೋಟರ್ಫ್‌ನಲ್ಲಿ ಆಡುವುದಕ್ಕಿಂತ ಮುಂಚೆ ಆ ಗೆಲುವು ಒಲಿದಿತ್ತು.

ಭಾರತ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಹಾಲಿ ಚಾಂಪಿಯನ್ ಬೆಲ್ಜಿಯಂ ಮೊದಲನೇ ಸ್ಥಾನ ಗಳಿಸಿತ್ತು. ಭಾರತ ಎದುರಾಳಿಯಾಗಿರುವ ಬ್ರಿಟನ್‌ ‘ಎ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಆಸ್ಟ್ರೇಲಿಯಾ ವಿರುದ್ಧ ಭಾರತ ಆಕ್ರಮಣಕಾರಿಯಾಗಿ ಆಡಿತ್ತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಂತೂ ಪಂದ್ಯ ಭಾರತದ ನಿಯಂತ್ರಣದಲ್ಲಿದಲ್ಲಿತ್ತು.

ಪಂದ್ಯದಲ್ಲಿ ಎದ್ದುಕಂಡ ಅಂಶವೆಂದರೆ ಮನ್‌ಪ್ರೀತ್ ಸಿಂಗ್ ಮತ್ತು ಉಪನಾಯಕ ಹಾರ್ದಿಕ್‌ ಸಿಂಗ್‌ ನೇತ್ವತ್ವದ ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್‌ ಲೈನ್‌ನ ಹೊಂದಾಣಿಕೆ. ಫಾರ್ವರ್ಡ್‌ ವಿಭಾಗದಲ್ಲಿ ಗುರ್ಜಂತ್ ಸಿಂಗ್ ಮತ್ತು ಸುಖಜೀತ್ ಆಟ ಎದ್ದುಕಂಡಿತು.

ಈ ಎರಡು ವಿಭಾಗದ ಸಮನ್ವಯದಿಂದ ಭಾನುವಾರದ ಪಂದ್ಯದಲ್ಲಿ ವಿಶ್ವದ ನಂಬರ್ ಎರಡನೇ ತಂಡವನ್ನು ಹಿಮ್ಮೆಟ್ಟಿಸಲು ಭಾರತ ತಂಡ ಗಮನಹರಿಸಲಿದೆ.

ಅಭಿಷೇಕ್ ಮುಂಚೂಣಿ ಪಡೆಯಲ್ಲಿ ಚುರುಕಾಗಿದ್ದಾರೆ. ಈ ಕ್ರೀಡೆಗಳಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಸೇರಿ ಎರಡು ಗೋಲುಗಳನ್ನು ಗಳಿಸಿದ್ದಾರೆ. ನಾಯಕ ಹರ್ಮನ್‌ಪ್ರೀತ್ ಈ ಕ್ರೀಡೆಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಶುಕ್ರವಾರ ಗಳಿಸಿದ ಎರಡು ಗೋಲು ಸೇರಿದಂತೆ ಆರು ಗೋಲು ಗಳಿಸಿದ್ದಾರೆ.

ರಕ್ಷಣೆಯಲ್ಲಿ ಅಮಿತ್ ರೋಹಿದಾಸ್‌ ಮತ್ತು ಜರ್ಮನ್‌ಪ್ರೀತ್‌ ಹೆಗಲಾಗಿದ್ದಾರೆ. ಕೊನೆಯ ಸಲ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿರುವ ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಎದುರಾಳಿಗಳ ಹಲವು ಗೋಲು ಯತ್ನಗಳನ್ನು ಭಗ್ನಗೊಳಿಸಿದ್ದಾರೆ. ಈ ಪಂದ್ಯವೂ ಅವರಿಗೆ ಸತ್ವಪರೀಕ್ಷೆ.

ಇತರ ಕ್ವಾರ್ಟರ್‌ಫೈನಲ್ಸ್‌

ಬೆಲ್ಜಿಯಂ– ಸ್ಪೇನ್‌

ಆಸ್ಟ್ರೇಲಿಯಾ– ನೆದರ್ಲೆಂಡ್ಸ್‌

ಜರ್ಮನಿ– ಅರ್ಜೆಂಟೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT