ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ 7 ವರ್ಷದೊಳಗಿನವರ ಚೆಸ್‌: ಪ್ರಶಸ್ತಿಯತ್ತ ದೇವನಾರಾಯಣನ್

Published 4 ಸೆಪ್ಟೆಂಬರ್ 2024, 16:26 IST
Last Updated 4 ಸೆಪ್ಟೆಂಬರ್ 2024, 16:26 IST
ಅಕ್ಷರ ಗಾತ್ರ

ಮೈಸೂರು: ಕೇರಳದ ದೇವನಾರಾಯಣನ್ ಕಲ್ಲಿಯತ್‌ ಇದುವರೆಗೆ ಆಡಿರುವ ಎಂಟೂ ಸುತ್ತುಗಳಲ್ಲಿ ಗೆದ್ದು, 37ನೇ ರಾಷ್ಟ್ರೀಯ 7 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾನೆ. ಇನ್ನೊಂದು ಸುತ್ತು ಉಳಿದಿರುವಂತೆ, ಉಳಿದವರಿಗಿಂತ ಒಂದು ಪಾಯಿಂಟ್‌ ಮುಂದಿರುವ ಐದನೇ ಶ್ರೇಯಾಂಕದ ಈ ಆಟಗಾರ ಪ್ರಶಸ್ತಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.

ವಿಜಯನಗರ ನಾಲ್ಕನೇ ಹಂತದ ಸಂಭ್ರಮ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಏಳನೇ ಸುತ್ತಿನಲ್ಲಿ ದೇವನಾರಾಯಣನ್ (8 ಪಾಯಿಂಟ್ಸ್‌), ಪಶ್ಚಿಮ ಬಂಗಾಳದ ಆರಾಧ್ಯೊ ಗುಯಿನ್ (6.5) ವಿರುದ್ಧ ಜಯಗಳಿಸಿದ.

ಮೂವರು ಆಟಗಾರರು– ಕವಿನ್‌ ವೆಳವನ್ (ತಮಿಳುನಾಡು), ಇನ್ಬಾ ದಿನೇಶಬಾಬು (ತಮಿಳುನಾಡು) ಮತ್ತು ಪ್ರಯಂಕ್ ಗಾಂವಕರ್ (ಗೋವಾ)– ತಲಾ ಏಳು ಪಾಯಿಂಟ್ಸ್ ಗಳಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಅಗ್ರ ಶ್ರೇಯಾಂಕದ ಅಯಾನ್ಶ್‌ ಶಾ (ಉತ್ತರ ಪ್ರದೇಶ), ಆರಾಧ್ಯೊ, ಆನಂದ್ ತಕ್ಷಂತ್ (ತಮಿಳುನಾಡು) ಸೇರಿದಂತೆ ಆರು ಆಟಗಾರರು ತಲಾ 6.5 ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನದಲ್ಲಿದ್ದಾರೆ. ಆಯಾನ್ಶ್‌ ಏಳನೇ ಸುತ್ತಿನಲ್ಲಿ ಪ್ರಯಂಕ್‌ ಗಾಂವ್ಕರ್ ಎದುರು ಸೋತಿದ್ದು ಹಿನ್ನಡೆ ಉಂಟುಮಾಡಿತು.

ಬಾಲಕಿಯರ ವಿಭಾಗದಲ್ಲಿ ಐದು ಮಂದಿ ತಲಾ ಏಳು ಪಾಯಿಂಟ್ಸ್‌ ಗಳಿಸಿದ್ದು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಶ್ರೇಯಾನ್ಶಿ ಜೈನ್‌, ಪೌಶಿತಾ ಪಾಲಿವಾಲ್ (ಇಬ್ಬರೂ ರಾಜಸ್ಥಾನ), ಆರಣ್ಯಾ (ತಮಿಳುನಾಡು), ಅರ್ಪಿತಾಂಗ್ಶಿ ಭಟ್ಟಾಚಾರ್ಯ (ತಮಿಳುನಾಡು), ಅನ್ವಿ ದೀಪಕ್‌ ಹಿಂಗೆ (ಮಹಾರಾಷ್ಟ್ರ) ಇವರು ಆ ಐವರು. 6.5 ಪಾಯಿಂಟ್ಸ್ ಗಳಿಸಿರುವ ಸಾಯಿಆಸ್ತಾ ಸಿಂಗ್ (ಪಶ್ಚಿಮ ಬಂಗಾಳ) ಎರಡನೇ ಸ್ಥಾನದಲ್ಲಿದ್ದಾಳೆ. 13 ಆಟಗಾರ್ತಿಯರು ತಲಾ 6 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಎರಡನೇ ಶ್ರೇಯಾಂಕದ ಅರ್ಪಿತಾಂಗ್ಶಿ ಏಳನೇ ಸುತ್ತಿನಲ್ಲಿ ಶ್ರೇಯಾನ್ಶಿ ವಿರುದ್ಧ, ಆರಣ್ಯಾ, ತೆಲಂಗಾಣದ ರೌದಾ ಸೈಯ್ಯದ್‌ (6) ವಿರುದ್ಧ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT