ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್: ಇ ಸ್ಪೋರ್ಟ್ಸ್‌ನಲ್ಲಿ ಪದಕ ನಿರೀಕ್ಷೆ

ಚೀನಾದಲ್ಲಿ ಕೂಟ: ಇದೇ ಮೊದಲ ಬಾರಿ ನಡೆಯುವ ಬ್ರೇಕ್‌ಡಾನ್ಸ್‌; ಭಾರತ ತಂಡವಿಲ್ಲ!
Published 14 ಸೆಪ್ಟೆಂಬರ್ 2023, 15:59 IST
Last Updated 14 ಸೆಪ್ಟೆಂಬರ್ 2023, 15:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇದೇ ತಿಂಗಳು ಚೀನಾದಲ್ಲಿ ಆರಂಭವಾಗಲಿರುವ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಬ್ರೇಕ್‌ ಡಾನ್ಸ್ ಮತ್ತು ಇ ಸ್ಪೋರ್ಟ್ಸ್‌ ಕ್ರೀಡೆಗಳು ಹೊಸದಾಗಿ ಸೇರ್ಪಡೆಗೊಳ್ಳಲಿವೆ.

ಹಾಂಗ್‌ಜೂನಲ್ಲಿ ನಡೆಯಲಿರುವ ಕೂಟದಲ್ಲಿ ಭಾರತದ 15 ಆಟಗಾರರಿರುವ ಇ ಸ್ಪೋರ್ಟ್ಸ್ ತಂಡವು ಕಣಕ್ಕಿಳಿಯಲಿದೆ. ಅದರಲ್ಲಿ ನಿಪುಣರಾಗಿರುವ ಚರಂಜ್ಯೋತ್ ಸಿಂಗ್, ಕ್ರಿಷ್ ಗುಪ್ತಾ ಮತ್ತು ಕೇತನ್ ಗೋಯಲ್ ಅವರು ಪ್ರಮಖರಾಗಿದ್ದಾರೆ.

ಈ ಕ್ರೀಡೆಯಲ್ಲಿರುವ ಫಿಫಾ ಆನ್‌ಲೈನ್ 4 ವಿಭಾಗದಲ್ಲಿ ಭಾರತವು ಪದಕ ಜಯಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಆಟದಲ್ಲಿ ಭಾರತವು ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಹಾಗೂ ಏಷ್ಯಾದಲ್ಲಿ ಮೂರನೇ ಸ್ಥಾನದಲ್ಲಿದೆ. ಸಿಂಗಪುರ ಹಾಗೂ ಸೌದಿ ಅರೇಬಿಯಾ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

ಇ ಸ್ಪೋರ್ಟ್ಸ್‌ನಲ್ಲಿ ಏಳು ವಿಡಿಯೊ ಗೇಮ್‌ಗಳಿವೆ. ಅದರಲ್ಲಿ ಡೊಟಾ ಟು, ಫಿಫಾ ಆನ್‌ಲೈನ್ ಫೋರ್, ಲೀಗ್ ಆಫ್‌ ಲೆಜೆಂಡ್ಸ್, ಅರೆನಾ ಆಫ್‌ ವೆಲೋರ್, ಡ್ರೀಮ್ ತ್ರೀ ಕಿಂಗ್‌ಡಮ್ಸ್‌, ಪಬ್‌ಜಿ ಮೊಬೈಲ್ ಮತ್ತು ಸ್ಟ್ರೀಟ್ ಫೈಟರ್ ಫೈವ್  ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ.

ಬ್ರೇಕ್‌ಡಾನ್ಸ್ ತಂಡಕ್ಕೆ ಅನುಮತಿ ಇಲ್ಲ

ಆದರೆ ಭಾರತದ ಬ್ರೇಕ್‌ಡಾನ್ಸ್ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಗಳಿಸಿಲ್ಲ. ಆಯ್ಕೆ ಪ್ರಕ್ರಿಯೆ ಸಮಂಜಸವಾಗಿರದ ಕಾರಣ ನಾಲ್ವರು ಡಾನ್ಸರ್‌ಗಳು ಇದ್ದ ತಂಡಕ್ಕೆ ಭಾರತ ಸರ್ಕಾರದ ಕ್ರೀಡಾ ಸಚಿವಾಲಯವು ಅನುಮತಿ ನೀಡಿಲ್ಲ.

ಬ್ರೇಕ್‌ ಡಾನ್ಸ್‌ ಸ್ಪರ್ಧೆಯನ್ನು ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸೇರ್ಪಡೆ ಮಾಡಲಾಗಿದೆ. ಪದಕ ವಿಭಾಗದ ಸ್ಪರ್ಧೆಯಾಗಿ ಇದು ಸೇರ್ಪಡೆಗೊಂಡಿದೆ. ಆದ್ದರಿಂದಲೇ ಈಗ ಏಷ್ಯನ್ ಗೇಮ್ಸ್‌ನಲ್ಲಿಯೂ ಬ್ರೇಕ್‌ಡಾನ್ಸ್‌ ಪದಾರ್ಪಣೆ ಮಾಡಲಿದೆ.

ಇದೊಂದು ನೃತ್ಯ ಪ್ರಕಾರ ಕ್ರೀಡೆಯಲ್ಲ ಎಂಬ ಟೀಕೆಗಳೂ ಕೇಳಿಬಂದಿದ್ದವು. ಆದರೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ಇದರಲ್ಲಿ ಆರ್ಟಿಸ್ಟಿಕ್ಸ್ ಜಿಮ್ನಾಸ್ಟಿಕ್ಸ್‌ ಅಂಶಗಳೂ ಇವೆ ಎಂದೂ ಪ್ರತಿಪಾದಿಸಿತ್ತು.

ಈ ಬಾರಿ ಚೆಸ್ ಹಾಗೂ ಕ್ರಿಕೆಟ್‌ ಕೂಡ ಕೂಟದಲ್ಲಿ ಮರುಪ್ರವೇಶ ಗಳಿಸಿವೆ. 2006ರ ದೋಹಾ ಏಷ್ಯನ್ ಗೇಮ್ಸ್‌ನಲ್ಲಿ ಚೆಸ್ ನಡೆದಿತ್ತು. ಅದರಲ್ಲಿ ಮಹಿಳೆಯರ ವೈಯಕ್ತಿಕ ರ‍್ಯಾಪಿಡ್ ವಿಭಾಗದಲ್ಲಿ ಭಾರತದ ಕೊನೇರು ಹಂಪಿ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಕೃಷ್ಣನ್ ಶಶಿಕಿರಣ್, ಪೆಂಟಾಲ ಹರಿಕೃಷ್ಣ ಮತ್ತು ಕೊನೇರು ಹಂಪಿ ಅವರಿದ್ದ ತಂಡವು ಚಿನ್ನದ ಪದಕ ಜಯಿಸಿದ್ದರು. 2010ರಲ್ಲಿ ಗುವಾಂಗ್‌ಜೂನಲ್ಲಿ ನಡೆದಿದ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತದ ಚೆಸ್‌ ಪಟುಗಳೂ ಎರಡು ಕಂಚು ಗಳಿಸಿದ್ದರು.

ಡಿ. ಗುಕೇಶ್, ವಿದಿತ್ ಗುಜರಾತಿ, ಅರ್ಜುನ್ ಇರಿಗೆಶಿ, ಪೆಂಟಾಲ ಹರಿಕೃಷ್ಣ, ರಮೇಶಬಾಬು ಪ್ರಜ್ಞಾನಂದ, ಕೊನೇರು ಹಂಪಿ, ಹಾರಿಕಾ ದ್ರೋಣವಳ್ಳಿ,  ಆರ್. ವೈಶಾಲಿ, ವಂತಿಕಾ ಅಗರವಾಲ್, ಬಿ. ಸವಿತಾಶ್ರೀ ಈ ಸಲ ಕಣಕ್ಕಿಳಿಯುವರು. ಇತ್ತೀಚಿನ ವರ್ಷಗಳಲ್ಲಿ ಭಾರತದ ಚೆಸ್‌ಪಟುಗಳು ವಿಶ್ವಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲುವಿನ ನಿರೀಕ್ಷೆಗಳು ಗರಿಗೆದರಿವೆ.

ಕ್ರಿಕೆಟ್‌ ಕೂಡ 2010 ಹಾಗೂ 2014ರ ಕೂಟಗಳಲ್ಲಿ ಇತ್ತು. 2018ರ ಕೂಟದಲ್ಲಿ ಇರಲಿಲ್ಲ. ಇದೀಗ ಟಿ20 ಕ್ರಿಕೆಟ್ ಸೇರ್ಪಡೆಯಾಗಿದ್ದು ಋತುರಾಜ್ ಗಾಯಕವಾಡ ನಾಯಕತ್ವದ ಪುರುಷರ ತಂಡ ಹಾಗೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮಹಿಳಾ ತಂಡಗಳು ಕಣಕ್ಕಿಳಿಯಲಿವೆ.

ಬ್ರೇಕ್‌ ಡಾನ್ಸ್‌ ಪ್ರಾತ್ಯಕ್ಷಿಕೆ  –ಎಎಫ್‌ಪಿ ಚಿತ್ರ
ಬ್ರೇಕ್‌ ಡಾನ್ಸ್‌ ಪ್ರಾತ್ಯಕ್ಷಿಕೆ  –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT