ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಮುಕ್ತಗೊಳಿಸಿಲ್ಲ: ನ್ಯಾಯಾಲಯಕ್ಕೆ ಪೊಲೀಸರ ಹೇಳಿಕೆ

ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ
Published 16 ಸೆಪ್ಟೆಂಬರ್ 2023, 15:26 IST
Last Updated 16 ಸೆಪ್ಟೆಂಬರ್ 2023, 15:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊಂದಿರುವ ಕುಸ್ತಿ ಫೆಡರೇಷನ್ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ಧ ಸರ್ಕಾರ ರಚಿಸಿದ ಮೇಲ್ವಿಚಾರಣಾ ಸಮಿತಿಯು ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ದೆಹಲಿ ಪೊಲೀಸರು ನಗರದ ನ್ಯಾಯಾಲಯಕ್ಕೆ ಶನಿವಾರ ತಿಳಿಸಿದ್ದಾರೆ.

ಪ್ರಕರಣದಲ್ಲಿ ಸಿಂಗ್ ವಿರುದ್ಧ ಆರೋಪ ಹೊರಿಸಬೇಕೇ ಎನ್ನುವ ಸಂಬಂಧ ನಡೆದ ವಿಚಾರಣೆಯ ವೇಳೆ ಅಡಿಷನಲ್ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಮುಂದೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.

‘ಮೇಲ್ವಿಚಾರಣಾ ಸಮಿತಿ ಸಿಂಗ್ ಅವರನ್ನು ದೋಷಮುಕ್ತಗೊಳಿಸಿಲ್ಲ. ಸಮಿತಿಯು ಶಿಫಾರಸುಗಳನ್ನಷ್ಟೇ  ನೀಡಿದೆ. ನಿರ್ಧಾರವನ್ನು ತಿಳಿಸಿಲ್ಲ. ಅವರ ವಿರುದ್ಧದ ಆರೋಪಗಳು ನಿರಾಧಾರ ಅಥವಾ ಸುಳ್ಳು ಎಂದು ಎಲ್ಲಿಯೂ ತಿಳಿಸಿಲ್ಲ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಒತ್ತಾಯಿಸಿದರು. ಐಪಿಸಿಯ 354ನೇ ವಿಧಿಯನ್ವಯ (ಹೆಣ್ಣಿನ ಘನತೆಗೆ ಧಕ್ಕೆಯುಂಟುಮಾಡುವುದು) ಕಣ್ಸನ್ನೆ ಮಾಡುವುದೂ ಅಪರಾಧ ಎನಿಸುತ್ತದೆ ಎಂದು ಹೇಳಿದರು.

ದೆಹಲಿ ಪೊಲೀಸರು ಜೂನ್‌ 15ರಂದು ಆರು ಬಾರಿಯ ಸಂಸದ ಸಿಂಗ್ ವಿರುದ್ಧ ಐಪಿಸಿಯ 354, 354 ಎ (ಲೈಂಗಿಕ ಪೀಡನೆ), 354 ಡಿ (ಹಿಂಬಾಲಿಸುವಿಕೆ) ಮತ್ತು 506ರ (ಬೆದರಿಕೆ ಒಡ್ಡುವುದು) ಅಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸಿಂಗ್‌, ಶನಿವಾರ ವಿಚಾರಣೆಯ ವೇಳೆ ಹಾಜರಾಗಿದ್ದರು. ಸಿಂಗ್ ವಿರುದ್ಧ ಆರೋಪಗಳಿಗೆ ಸಂಬಂಧಿಸಿ ದೆಹಲಿ ಪೊಲೀಸರು ಸೆ. 23ರಂದು ವಾದ ಮುಂದುವರಿಸಲಿದ್ದಾರೆ.

ನವದೆಹಲಿಯಲ್ಲಿ ಖ್ಯಾತನಾಮ ಕುಸ್ತಿಪಟುಗಳ ಧರಣಿಯ ನಂತರ, ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿದ ಆರೋಪಗಳ ತನಿಖೆಗೆ ಸಂಬಂಧಿಸಿ ಕೇಂದ್ರ ಕ್ರೀಡಾ ಸಚಿವಾಲಯವು ಬಾಕ್ಸಿಂಗ್ ತಾರೆ ಎಂ.ಸಿ.ಮೇರಿ ಕೋಮ್‌ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ನೇಮಿಸಿತ್ತು.

ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಇದರ ಪ್ರತಿಯನ್ನು, ಸಿಂಗ್ ವಿರುದ್ಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ನೀಡಲಾಗಿತ್ತು.

ಜುಲೈ 20ರಂದು ಸಿಂಗ್ ಅವರಿಗೆ ಜಾಮೀನು ನೀಡಿದ ನ್ಯಾಯಾಲಯವು, ಕುಸ್ತಿ ಫೆಡರೇಷನ್‌ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಅಮಾನತುಗೊಳಿಸಿತ್ತು. ಆದರೆ ಪ್ರಕರಣದಲ್ಲಿ ಇವರ‍್ಯಾರನ್ನೂ ಬಂಧಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT