ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್‌ ಮಹಿಳಾ ಹಾಕಿ ಕ್ವಾಲಿಫೈರ್ಸ್: ಭಾರತಕ್ಕೆ ಅಮೆರಿಕದ ಸವಾಲು

Published 12 ಜನವರಿ 2024, 12:14 IST
Last Updated 12 ಜನವರಿ 2024, 12:14 IST
ಅಕ್ಷರ ಗಾತ್ರ

ರಾಂಚಿ: ಭಾರತ ಮಹಿಳಾ ಹಾಕಿ ತಂಡ, ಶನಿವಾರ ಇಲ್ಲಿ ಆರಂಭವಾಗುವ ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ. ಆತಿಥೇಯ ತಂಡ ತವರಿನಲ್ಲಿ ಆಡುವ ಪ್ರಯೋಜನ ಪಡೆದು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸಲು ತವಕದಿಂದ ಇದೆ.

ಏಷ್ಯನ್‌ ಗೇಮ್ಸ್‌ನಲ್ಲಿ ಮೂರನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದ ಅದನ್ನು ಮರೆತು ಇಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಗಳಿಸುವ ತಂಡಗಳಿಗೆ ಒಲಿಂಪಿಕ್ಸ್‌ಗೆ ಟಿಕೆಟ್‌ ದೊರೆಯಲಿದೆ. ಇದಕ್ಕಾಗಿ ಎಂಟು ತಂಡಗಳು– ಆತಿಥೇಯ ಭಾರತ, ಜರ್ಮನಿ, ಝೆಕ್‌ ರಿಪಬ್ಲಿಕ್‌, ಇಟಲಿ, ಜಪಾನ್‌, ಅಮೆರಿಕ, ಚಿಲಿ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ.

ಪ್ಯಾರಿಸ್‌ ಒಲಿಂಪಿಕ್ಸ್ ಬರುವ ಜುಲೈ 26 ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ.

ವಿಶ್ವದ ಐದನೇ ಕ್ರಮಾಂಕದ ಜರ್ಮನಿ ಇಲ್ಲಿ ಅತಿ ಹೆಚ್ಚಿನ ರ್‍ಯಾಂಕ್ ಪಡೆದ ತಂಡವಾಗಿದೆ. ಭಾರತ (ಆರನೇ ಕ್ರಮಾಂಕ) ಎರಡನೇ ಉತ್ತಮ ರ್‍ಯಾಂಕ್‌ನ ತಂಡವಾಗಿದೆ.

ಭಾರತ, ನ್ಯೂಜಿಲೆಂಡ್‌, ಇಟಲಿ, ಅಮೆರಿಕ ತಂಡಗಳು ‘ಬಿ’ ಗುಂಪಿನಲ್ಲಿವೆ. ಭಾರತ ಎರಡನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ (ಜ. 14) ಮತ್ತು ಮೂರನೇ ಪಂದ್ಯವನ್ನು ಇಟಲಿ (ಜ. 16) ವಿರುದ್ಧ ಆಡಲಿದೆ. ಸೆಮಿಫೈನಲ್ ಪಂದ್ಯಗಳು ಜ. 18ರಂದು ಮತ್ತು ಫೈನಲ್ ಜ. 19ರಂದು ನಿಗದಿಯಾಗಿವೆ.

1983 ರಿಂದೀಚೆಗೆ ಭಾರತ ಮತ್ತು ಅಮೆರಿಕ ತಂಡಗಳು 15 ಸಲ ಮುಖಾಮುಖಿ ಆಗಿದ್ದು, ಅಮೆರಿಕ ಒಂಬತ್ತು ಪಂದ್ಯಗಳಲ್ಲಿ, ಭಾರತ ನಾಲ್ಕು ಪಂದ್ಯಗಳಲ್ಲಿ ಜಯಗಳಿಸಿವೆ. ಎರಡು ಡ್ರಾ ಆಗಿವೆ.

‘ಏಷ್ಯನ್‌ ಗೇಮ್ಸ್‌ನಲ್ಲಿ ನಾವು ಅರ್ಹತೆ ಪಡೆಯಲಿಲ್ಲ. ನಾವು ಅವಕಾಶ ಕಳೆದುಕೊಂಡಿದ್ದೆವು. ಆದರೆ ಹಳೆಯದರ ಬಗ್ಗೆ ತಲೆಕೆಡಿಸಿಕೊಂಡು  ಕೂರುವುದಿಲ್ಲ’ ಎಂದು ಭಾರತ ತಂಡದ ಚೀಫ್ ಕೋಚ್‌ ಯಾನೆಕ್‌ ಷೋಪ್ಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ ಫಾರ್ವರ್ಡ್‌ ಆಟಗಾರ್ತಿ ವಂದನಾ ಕಟಾರಿಯಾ ಅವರು ತಂಡದಿಂದ ಹೊರಬಿದ್ದಿರುವುದು ತಂಡದ ತಯಾರಿಗೆ ಕೊಂಚ ಹಿನ್ನಡೆ ಉಂಟುಮಾಡಿದೆ. ಕೆಲದಿನಗಳ ಹಿಂದೆ ತರಬೇತಿಯ ವೇಳೆ ದವಡೆಯ ಮೂಳೆಮುರಿದ ಕಾರಣ ಅವರು ಆಡುತ್ತಿಲ್ಲ. 300 ಪಂದ್ಯಗಳನ್ನು ಆಡಿರುವ ಭಾರತದ ಮೊದಲ ಆಟಗಾರ್ತಿಯಾದ ವಂದನಾ, ಮುನ್ಪಡೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದರು. ಅವರ ಸ್ಥಾನದಲ್ಲಿ ಬಲ್ಜೀತ್‌ ಕೌರ್‌ ಅವಕಾಶ ಪಡೆದಿದ್ದಾರೆ.

ಭಾರತದ ಆಟಗಾರ್ತಿಯರು ‘ಪೆನಾಲ್ಟಿ ಕಾರ್ನರ್‌’ ಪರಿವರ್ತನೆಯ ಪ್ರಮಾಣ ಹೆಚ್ಚಿಸುವತ್ತ ಗಮನಹರಿಸುತ್ತಿದ್ದಾರೆ. ದೀರ್ಘಕಾಲದಿಂದ ತಂಡ ಈ ಸಮಸ್ಯೆ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಹಿರಿಯ ಆಟಗಾರ ರೂಪಿಂದರ್‌ಪಾಲ್‌ ಸಿಂಗ್ ಜೊತೆಗೆ ಮುನ್ನಡೆ ಆಟಗಾರ್ತಿಯರಿಗೆ ಅಲ್ಪಾವಧಿಯ ತರಬೇತಿ ನಡೆದಿತ್ತು.

‌ವಂದನಾ ಅನುಪಸ್ಥಿತಯಲ್ಲಿ, ತಂಡದ ದಾಳಿಗೆ ಬಲ ತುಂಬುವಲ್ಲಿ ಲಾಲ್ರೆಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ ಮತ್ತು ಬಲ್ಜೀತ್‌ ಮೇಲೆ ಹೆಚ್ಚಿನ ಹೊಣೆಯಿದೆ.

ದಿನದ ಇತರ ಪಂದ್ಯಗಳಲ್ಲಿ ಜರ್ಮನಿ ತಂಡ, ಚಿಲಿ ಎದುರು ಆಡಲಿದೆ. ಜಪಾನ್‌, ಝೆಕ್‌ ರಿಪಬ್ಲಿಕ್ ವಿರುದ್ಧ, ನ್ಯೂಜಿಲೆಂಡ್‌, ಇಟಲಿ ವಿರುದ್ಧ ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT