ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಐಎಚ್‌ ಪ್ರೊ ಲೀಗ್: ಹರ್ಮನ್‌ಪ್ರೀತ್ ಹ್ಯಾಟ್ರಿಕ್, ಭಾರತಕ್ಕೆ ಜಯ

ಆರ್ಜೆಂಟೀನಾಕ್ಕೆ ಸೋಲು
Published 27 ಮೇ 2024, 13:56 IST
Last Updated 27 ಮೇ 2024, 13:56 IST
ಅಕ್ಷರ ಗಾತ್ರ

ಆ್ಯಂಟ್‌ವರ್ಪ್ (ಬೆಲ್ಜಿಯಂ): ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಅಮೋಘ ಹ್ಯಾಟ್ರಿಕ್ ನೆರವಿನಿಂದ ಭಾರತ ತಂಡ ರೋಚಕವಾಗಿದ್ದ ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಆರ್ಜೆಂಟೀನಾ ತಂಡವನ್ನು 5–4 ಗೋಲುಗಳಿಂದ ಸೋಲಿಸಿತು.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಪಂದ್ಯದ 29, 50 ಮತ್ತು 52ನೇ ನಿಮಿಷ ಗೋಲುಗಳನ್ನು ಗಳಿಸಿದರು. ಜೊತೆಗೆ  ಅರಿಜಿತ್ ಸಿಂಗ್ ಹುಂಡಲ್ (7ನೇ) ಮತ್ತು ಗುರುಪ್ರೀತ್ ಸಿಂಗ್‌ (18ನೇ ನಿಮಿಷ) ಅವರೂ ಒಂದೊಂದು ಗೋಲು ಗಳಿಸಿದರು. ಆರ್ಜೆಂಟೀನಾ ಪರ ಫೆಡೆರಿಕೊ ಮೊಂಜಾ (3ನೇ), ನಿಕೋಲಸ್‌ ಕೀನಾನ್ (24ನೇ ನಿಮಿಷ) ಮತ್ತು ತಾಡಿಯೊ ಮರುಸ್ಸಿ (54) ಮತ್ತು ಲುಕಾಸ್ ಮಾರ್ಟಿನೆಝ್ (57ನೇ) ಚೆಂಡನ್ನು ಗುರಿಮುಟ್ಟಿಸಿದರು.

ಭಾರತ ಉತ್ತಮ ಆರಂಭ ಮಾಡಿತು. ಮೊದಲ ಕ್ವಾರ್ಟರ್‌ನ ಬಹುತೇಕ ಅವಧಿಯಲ್ಲಿ ಕರಾರುವಾಕ್ ಪಾಸ್‌ಗಳೊಡನೆ ಆರ್ಜೆಂಟೀನಾ ಗೋಲು ಭಾಗದಲ್ಲಿ ದಾಳಿ ನಡೆಸಿತು. ಆದರೆ ಮೊದಲು ಗೋಲು ಗಳಿಸಿದ್ದು ಆರ್ಜೆಂಟೀನಾ ತಂಡವೇ. ಮೂರು ನಿಮಿಷಗಳ ನಂತರ ಅರಿಜಿತ್ ಹುಂಡಲ್ ಫೀಲ್ಡ್ ಗೋಲಿನ ಮೂಲಕ ಸ್ಕೋರ್‌ ಸಮ ಮಾಡಿದರು. ಮೊದಲ ಕ್ವಾರ್ಟರ್‌ಕೊನೆಗೆ 1–1 ಆಗಿತ್ತು.

ಎರಡನೇ ಕ್ವಾರ್ಟರ್‌ನಲ್ಲಿ ಗುರ್ಜಂತ್ ಅವರು ಫೀಲ್ಡ್‌ ಗೋಲಿನ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಈ ಹಂತದಲ್ಲಿ ಸ್ವಲ್ಪ ಸಡಿಲಬಿಟ್ಟ ಕಾರಣ ಆರ್ಜೆಂಟೀನಾ ತಂಡ ಪ್ರತಿದಾಳಿ ನಡೆಸಿತು. ಚೆಂಡಿನೊಡನೆ ಮುನುಗ್ಗಿದ ಕೀನಾನ್‌, ಭಾರತದ ರಕ್ಷಣೆ ಆಟಗಾರರನ್ನು ವಂಚಿಸಿ ಗೋಲು ಹೊಡೆದಾಗ ಸ್ಕೋರ್ ಮತ್ತೆ 2–2 ರಲ್ಲಿ ಸಮನಾಯಿತು. ಎರಡನೇ ಕ್ವಾರ್ಟರ್‌ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಹರ್ಮನ್ ಪ್ರೀತ್ ಭಾರತಕ್ಕೆ ಮತ್ತೆ ಮುನ್ನಡೆ (3–2) ಒದಗಿಸಿದರು. 

ವಿರಾಮದ ನಂತರದ (ಮೂರನೇ ಕ್ವಾರ್ಟರ್‌) ಆಟ ಜಿದ್ದಾಜಿದ್ದಿಯಿಂದ ಕೂಡಿತ್ತು. ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್ ಅವರ ಉತ್ತಮ ಯತ್ನಕ್ಕೆ ಎದುರಾಳಿ ಗೋಲ್‌ಕೀಪರ್ ಗೋಡೆಯಾದರು. ಇಬ್ಬರೂ ರಕ್ಷಣೆಗೆ ಒತ್ತುಕೊಟ್ಟ ಕಾರಣ ಈ ಕ್ವಾರ್ಟರ್‌ನಲ್ಲಿ ಗೋಲು ಬರಲಿಲ್ಲ.

ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ಒತ್ತಡ ಹೇರಿ ಆರ್ಜೆಂಟೀನಾ ತಂಡ ತಪ್ಪುಗಳನ್ನು ಎಸಗುವಂತೆ ಮಾಡಿತು. ಮುಕ್ತಾಯಕ್ಕೆ 10 ನಿಮಿಷ ಇರುವಾಗ ಹರ್ಮನ್‌ಪ್ರೀತ್ ಎರಡನೇ ಗೋಲು (ಪೆನಾಲ್ಟಿ ಸ್ಟ್ರೋಕ್‌ ಮೂಲಕ) ಗಳಿಸಿದರು. ಎರಡು ನಿಮಿಷ ನಂತರ ತಂಡಕ್ಕೆ ಮತ್ತೊಮ್ಮೆ ಪೆನಾಲ್ಟಿ ಸ್ಟ್ರೋಕ್ ದೊರೆಯಿತು. ಇದರಲ್ಲಿ ಹರ್ಮನ್‌ಪ್ರೀತ್ ಮತ್ತೊಮ್ಮೆ ಯಶಸ್ವಿ ಆದರು.

ಆರ್ಜೆಂಟೀನಾ ಆಟದ ಅವಧಿ ಮುಕ್ತಾಯದತ್ತ ಸಾಗುತ್ತಿದ್ದಂತೆ ಅಲ್ಪಾವಧಿಹಯಲ್ಲಿ ತಾಡಿಯೊ ಮತ್ತು ಲುಕಾಸ್ ಗೋಲುಗಳ ಮೂಲಕ ಸೋಲಿನ ಅಂತರವನ್ನು 4–5ಕ್ಕೆ ಇಳಿಸಿತು.

ಭಾರತ ತನ್ನ ಮುಂದಿನ ಪಂದ್ಯವನ್ನು ಲಂಡನ್‌ನಲ್ಲಿ ಜೂನ್ 1ರಂದು ಜರ್ಮನಿ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT