ಕರಾಚಿ (ಪಿಟಿಐ): ಒಲಿಂಪಿಕ್ ಅರ್ಹತಾ ಹಾಕಿ ಟೂರ್ನಿಯನ್ನು ಆಯೋಜಿಸಲು ಸಜ್ಜಾಗುತ್ತಿದ್ದ ಪಾಕಿಸ್ತಾನದ ಹಕ್ಕುಗಳನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಹಿಂಪಡೆದಿದೆ.
ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್) ಮತ್ತು ಪಾಕಿಸ್ತಾನ ಕ್ರೀಡಾ ಮಂಡಳಿ (ಪಿಎಸ್‌ಬಿ) ನಡುವಣ ಒಳಜಗಳವೇ ಎಫ್‌ಐಎಚ್ ನಿರ್ಧಾರಕ್ಕೆ ಕಾರಣವಾಗಿದೆ.
‘ಎಫ್‌ಐಎಚ್ ನಮ್ಮಿಂದ ಒಲಿಂಪಿಕ್ ಹಾಕಿ ಕ್ವಾಲಿಫೈಯರ್ ಆಯೋಜನೆಯ ಹಕ್ಕುಗಳನ್ನು ಮರಳಿ ಪಡೆಯುವುದರೊಂದಿಗೆ ಸರ್ಕಾರ ಹಾಗೂ ಪಿಎಸ್‌ಬಿಯು ನಮಗೆ ಸರಿಯಾದ ಬೆಂಬಲ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ’ ಎಂದು ಪಿಎಚ್‌ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬೆಳವಣಿಗೆಯು ಪಾಕಿಸ್ತಾನ ಹಾಕಿ ಕ್ರೀಡಾಕ್ಷೇತ್ರಕ್ಕೆ ದೊಡ್ಡ ಪೆಟ್ಟಾಗಿದೆ. ಸುಮಾರು ಒಂದು ದಶಕದ ನಂತರ ಅಂತರರಾಷ್ಟ್ರೀಯ ಮಟ್ಟದ ಕೂಟವನ್ನು ಆಯೋಜಿಸುವ ಹಕ್ಕು ದೇಶಕ್ಕೆ ಸಿಕ್ಕಿತ್ತು. ಲಾಹೋರ್‌ನಲ್ಲಿ ಟೂರ್ನಿ ನಡೆಸಲು ಪಿಎಚ್‌ಎಫ್ ನಿರ್ಧರಿಸಿತ್ತು.
ಆದರೆ ಇತ್ತೀಚೆಗೆ ಪಿಎಚ್‌ಎಫ್ ಕಾರ್ಯಗಳಲ್ಲಿ ಕ್ರೀಡಾ ಮಂಡಳಿಯು ಹಸ್ತಕ್ಷೇಪ ಮಾಡಲಾರಂಭಿಸಿತ್ತು. ಇದರಿಂದಾಗಿ ಪಿಎಚ್‌ಎಫ್ ಪದಾಧಿಕಾರಿಗಳು ತೀವ್ರ ಅಸಮಾಧಾನಗೊಂಡಿದ್ದರು.
ದೇಶದ ಕೆಲವು ಒಲಿಂಪಿಯನ್ ಆಟಗಾರರು, ಸರ್ಕಾರದ ಆಂತರಿಕ ಹಾಗೂ ಪ್ರಾಂತೀಯ ಸಮನ್ವಯ ಸಚಿವಾಲಯದ ಬೆಂಬಲದೊಂದಿಗೆ ಪಿಎಚ್‌ಎಫ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧರಾಗಿದ್ದರು. ಪಿಎಚ್‌ಎಫ್ ಅಧ್ಯಕ್ಷ ಬ್ರಿಗೇಡಿಯರ್ ಖಾಲೀದ್ ಸಜ್ಜಾದ್ ಖೋಕರ್ ಮತ್ತು ಕಾರ್ಯದರ್ಶಿ ಹೈದರ್ ಹುಸೇನ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅವರ ಗುರಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.