ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಜರ್‌ ಧ್ಯಾನ್‌ ಚಂದ್‌ಗೆ ಭಾರತ ರತ್ನ ನೀಡಲು ಒತ್ತಾಯ

Last Updated 23 ಆಗಸ್ಟ್ 2020, 12:32 IST
ಅಕ್ಷರ ಗಾತ್ರ

ನವದೆಹಲಿ: ಹಾಕಿ ದಿಗ್ಗಜ ಮೇಜರ್‌ ಧ್ಯಾನ್ ಚಂದ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವಂತೆ ಒತ್ತಾಯಗಳು ಕೇಳಿ ಬಂದಿವೆ. ಧ್ಯಾನ್‌ಚಂದ್‌ ಅವರ 115ನೇ ಜಯಂತಿಯು ಒಂದು ವಾರ ಮುಂದಿರುವಂತೆ ಹಲವು ಮಾಜಿ ಹಾಗೂ ಹಾಲಿ ಆಟಗಾರರು, ದೇಶದ ಅತ್ಯುನ್ನತ ನಾಗರಿಕ ಗೌರವ ನೀಡುವಂತೆ ಆಗ್ರಹಿಸಿದ್ದಾರೆ.

ಧ್ಯಾನ್‌ ಚಂದ್‌ ಅವರ ಬದುಕು ಮತ್ತು ವೃತ್ತಿ ಕುರಿತು ಶನಿವಾರ ನಡೆದ ವರ್ಚುವಲ್‌ ಚರ್ಚೆಯಲ್ಲಿ ಮಾಜಿ ಆಟಗಾರರಾದ ಗುರುಬಕ್ಷ್‌ ಸಿಂಗ್‌, ಹರ್ಬಿಂದರ್‌ ಸಿಂಗ್‌, ಅಶೋಕ್‌ ಕುಮಾರ್‌ ಹಾಗೂ ಹಾಲಿ ಆಟಗಾರ ಯುವರಾಜ್‌ ಅವರು ಭಾಗವಹಿಸಿದ್ದರು.

ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್‌ 29ಅನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.

ಧ್ಯಾನ್‌ಚಂದ್‌ ಅವರಿಗೆ ಭಾರತ ರತ್ನ ನೀಡುವಂತೆ, ಕಳೆದ ವರ್ಷ ಬಿಸಿಸಿಐಈಗಿನ ಅಧ್ಯಕ್ಷ ಸೌರವ್‌ ಗಂಗೂಲಿ, ನಟ ಬಾಬುಶಾನ್‌ ಮೊಹಾಂತಿ ಹಾಗೂ ರಚೆಲ್‌ ವೈಟ್‌ ಅವರು ಆನ್‌ಲೈನ್‌ ಅಭಿಯಾನ ಆರಂಭಿಸಿದ್ದರು. ಅದರ ಭಾಗವಾಗಿ ಶನಿವಾರ ಚರ್ಚೆ ನಡೆಯಿತು.

‘ನಮಗೆ ಧ್ಯಾನ್‌ಚಂದ್‌ ಎಂದರೆ ದೇವರು. ಅವರೊಡನೆ ತಿಂಗಳ ಕಾಲ ಪೂರ್ವ ಆಫ್ರಿಕಾ ಹಾಗೂ ಯೂರೋಪ್‌ ಪ್ರವಾಸ ಮಾಡಿದ್ದು ನಮ್ಮ ಅದೃಷ್ಟ. ಅವರಂತಹ ಉತ್ತಮ ವ್ಯಕ್ತಿ ಹಾಗೂ ಮಹಾನ್‌ ಆಟಗಾರ ಸಿಗುವುದು ಕಷ್ಟ’ ಎಂದು ಅರ್ಜುನ ಪ್ರಶಸ್ತಿ ವಿಜೇತ ಗುರುಬಕ್ಷ್‌ ಸಿಂಗ್‌ ಹೇಳಿದ್ದಾರೆ.

1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಇದ್ದ ಅವರು, ಆ ದಿನಗಳ ಅನುಭವಗಳನ್ನು ಮೆಲುಕುಹಾಕಿದರು.

‘1960ರ ಒಲಿಂಪಿಕ್ಸ್‌ನಲ್ಲಿ ಚಿನ್ನ ನಮ್ಮ ಕೈ ತಪ್ಪಿತ್ತು. ಹೀಗಾಗಿ ನಾವು ಮತ್ತೆ ವೈಭವಕ್ಕೆ ಮರಳಬೇಕಿತ್ತು. 1964ರ ಕೂಟದಲ್ಲಿ ಚಿನ್ನದ ಪದಕ ಗೆದ್ದಾಗ, ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜದ ಆರೋಹನವನ್ನು ನೋಡಿ ಕಣ್ಣು ತುಂಬಿ ಬಂತು. ದೇಶಕ್ಕಾಗಿ ಏನನ್ನಾದರೂ ಕಾಣಿಕೆ ನೀಡಿದ ಹೆಮ್ಮೆ ನನ್ನಲ್ಲಿ ಮೂಡಿತ್ತು‘ ಎಂದು ಗುರುಬಕ್ಷ್ ಹೇಳಿದರು.

‘ದಾದಾ (ಧ್ಯಾನ್‌ಚಂದ್‌) ಕುರಿತು ನನಗೆ ಸಾಕಷ್ಟು ಹೆಮ್ಮೆ ಇದೆ. 100 ಮೀಟರ್‌ ಓಟವನ್ನು ನಾನು 10.8 ಸೆಕೆಂಡುಗಳಲ್ಲಿ ನಾನು ಪೂರ್ಣಗೊಳಿಸಬಲ್ಲವನಾಗಿದ್ದೆ. ಹೀಗಾಗಿ ಹಾಕಿ ಕ್ರೀಡೆಯಲ್ಲಿ ಈ ವೇಗ ಅನುಕೂಲಕ್ಕೆ ಬರುತ್ತಿತ್ತು. ಚೆಂಡಿನ ಮೇಲೆ ಹತೋಟಿ ಸಾಧಿಸುತ್ತಾ ಅದನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ದಾದಾ ನನಗೆ ಹೇಳುತ್ತಿದ್ದರು. ಇದನ್ನು ನಾನು ‘ಗುರುಮಂತ್ರ’ ಎಂದು ಅಭ್ಯಾಸ ಮಾಡಿದೆ‘ ಎಂದು ಹರ್ಬಿಂದರ್‌ ಸಿಂಗ್‌ ನುಡಿದರು.

ಅರ್ಜುನ ಪ್ರಶಸ್ತಿ ವಿಜೇತ, ಧ್ಯಾನ್‌ ಚಂದ್‌ ಅವರ ಪುತ್ರ ಅಶೋಕ್‌ ಕುಮಾರ್‌ ತಮ್ಮ ತಂದೆಯ ಕುರಿತು ಕೆಲವು ಅಪರಿಚಿತ ಸಂಗತಿಗಳನ್ನು ಹಂಚಿಕೊಂಡರು.

‘ನನ್ನನ್ನು ಹಾಗೂ ಹಿರಿಯಣ್ಣನನ್ನು ಹಾಕಿ ಆಟದಿಂದ ವಿಮುಖವಾಗುವಂತೆ ಮಾಡಲು ನಮ್ಮ ತಂದೆ ಪ್ರಯತ್ನಿಸಿದರು. ಈ ಕ್ರೀಡೆಯಲ್ಲಿ ಇರುವ ಆರ್ಥಿಕ ಉತ್ತೇಜನದ ಕೊರತೆಯೇ ಅವರ ಈ ನಡೆಗೆ ಕಾರಣವಾಗಿತ್ತು‘ ಎಂದು ಅಶೋಕ್‌ ಕುಮಾರ್‌ ಹೇಳಿದರು.

1936ರ ಬರ್ಲಿನ್‌ ಒಲಿಂಪಿಕ್ಸ್‌ನ ಕುತೂಹಕಾರಿ ಪ್ರಸಂಗವೊಂದನ್ನು ಅವರು ಮೆಲುಕುಹಾಕಿದರು.

‘ಭಾರಿ ಮಳೆಯ ಹಿನ್ನೆಲೆಯಲ್ಲಿ ಫೈನಲ್‌ ಪಂದ್ಯವನ್ನು ಆಗಸ್ಟ್‌ 15ಕ್ಕೆ ಮುಂದೂಡಲಾಗಿತ್ತು. ಜರ್ಮನಿ ವಿರುದ್ಧ ನಡೆದ ಈ ಹಣಾಹಣಿಯ ಮೊದಲಾರ್ಧದಲ್ಲಿ ಭಾರತ ಕೇವಲ ಒಂದು ಗೋಲು ಗಳಿಸಿತ್ತು. ಇದರಿಂದ ತಂಡ ಸುಲಭವಾಗಿ ಸೋಲುವ ಹಂತದಲ್ಲಿತ್ತು. ದ್ವಿತೀಯಾರ್ಧದ ಆರಂಭಕ್ಕೆ ಮುನ್ನ ತಮ್ಮ ಬೂಟುಗಳನ್ನು ಕಳಚಿಟ್ಟ ಧ್ಯಾನ್‌ ಚಂದ್‌ ಹಾಗೂ ರೂಪ್‌ ಸಿಂಗ್‌ ಅವರು ಬರಿಗಾಲಿನಲ್ಲೇ 35 ನಿಮಿಷ ಆಡಿ ಏಳು ಗೋಲುಗಳನ್ನು (ಇಬ್ಬರೂ ಸೇರಿ) ದಾಖಲಿಸಿದರು. ಪಂದ್ಯ ಮುಗಿದಾಗ ಕ್ರೀಡಾಂಗಣ ಖಾಲಿಯಾಗಿತ್ತು. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಟರ್‌ ಎದುರು ಭಾರತ 8–1ರ ಜಯ ತನ್ನದಾಗಿಸಿಕೊಂಡಿತ್ತು‘ ಎಂದು ಅಶೋಕ್‌ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT