ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ರಫೆಲ್‌ ನಡಾಲ್‌ ನಿರ್ಗಮನ

Published 28 ಮೇ 2024, 0:05 IST
Last Updated 28 ಮೇ 2024, 0:05 IST
ಅಕ್ಷರ ಗಾತ್ರ

ಪ್ಯಾರಿಸ್‌: ರೋಲಂಡ್‌ ಗ್ಯಾರೋಸ್‌ನಲ್ಲಿ ಗೆಲುವಿನ ಹಲವು ದಾಖಲೆಗಳನ್ನು ಸ್ಥಾಪಿಸಿದ್ದ ಸ್ಪೇನ್‌ನ ರಫೆಲ್ ನಡಾಲ್ ಅವರ ಬಹುತೇಕ ಕೊನೆಯ ಫ್ರೆಂಚ್‌ ಓಪನ್ ಟೂರ್ನಿ ಸೋಮವಾರ ಮೊದಲ ಸುತ್ತಿನ ಸೋಲಿನೊಂದಿಗೆ ಅಂತ್ಯಗೊಂಡಿತು. 14 ಬಾರಿ ಇಲ್ಲಿ ಟ್ರೋಫಿ ಎತ್ತಿರುವ ನಡಾಲ್‌, ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್‌ ಜ್ವರೇವ್ ಅವರಿಗೆ ನೇರ ಸೆಟ್‌ಗಳಲ್ಲಿ ಮಣಿದರು.

ಜೂನ್ 3ರಂದು 38ನೇ ವರ್ಷಕ್ಕೆ ಕಾಲಿಡಲಿರುವ ನಡಾಲ್ 6–3, 7–6 (7–5), 6–3 ರಿಂದ ಜರ್ಮನಿಯ ಆಟಗಾರನಿಗೆ ಮಣಿದರು. 2005 ರಲ್ಲಿ ಆವೆಮಣ್ಣಿನ ಅಂಕಣದ ಈ ಟೂರ್ನಿಯಲ್ಲಿ ಪ್ರಶಸ್ತಿಯೊಡನೆ ಪದಾರ್ಪಣೆ ಮಾಡಿದ್ದ ನಡಾಲ್ ಅವರಿಗೆ ಇದು ಇಲ್ಲಿ 116 ಪಂದ್ಯಗಳಲ್ಲಿ ಕೇವಲ ನಾಲ್ಕನೇ ಸೋಲು ಎನಿಸಿತು. ಅವರು ಇಲ್ಲಿ ಎಂದೂ ಮೊದಲ ಸುತ್ತಿನಲ್ಲಿ ಸೋತಿರಲಿಲ್ಲ.

ಈಗ ಅವರ ವೃತ್ತಿಜೀವನದ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ‘ಕೊನೆಯ ಬಾರಿ ನಾನು ಇಲ್ಲಿ ಆಡುತ್ತಿದ್ದೇನೆಯೇ ಎಂಬುದು ಗೊತ್ತಿಲ್ಲ. ಈ ವಿಷಯದಲ್ಲಿ ಶೇ 100ರಷ್ಟು ಖಚಿತವಿಲ್ಲ. ಆದರೆ ಕೊನೆಯದಾದರೆ ಖುಷಿಯಿಂದ ಆಡುವೆ’ ಎಂದು ನಡಾಲ್ ಹೇಳಿದ್ದರು.

ಗಾಯದ ಸಮಸ್ಯೆಯಿದ ಅವರು ಜನವರಿಯಿಂದೀಚೆಗೆ ಕೇವಲ ನಾಲ್ಕು ಟೂರ್ನಿಗಳಲ್ಲಿ ಆಡಿದ್ದಾರೆ. ವಿಶ್ವದ ಅಗ್ರ ಕ್ರಮಾಂಕದ ಆಟಗಾರನಾಗಿದ್ದ ಅವರು ಈಗ 275ನೇ ಕ್ರಮಾಂಕಕ್ಕೆ ಕುಸಿದಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಅವರು ಈ ಬಾರಿ ಶ್ರೇಯಾಂಕರಹಿತ ಆಟಗಾರನಾಗಿದ್ದರು.

2022ರಲ್ಲಿ ನಡಾಲ್ ಮತ್ತು ಜ್ವರೇವ್ ಇಲ್ಲಿ ಸೆಮಿಫೈನಲ್‌ನಲ್ಲಿ ಎದುರಾಳಿಗಳಾಗಿದ್ದರು. ಆಗ ಪಾದದ ನೋವಿನಿಂದ ಜ್ವರೇವ್ ಪಂದ್ಯದಿಂದ ಹೊರನಡೆದಿದ್ದರು. ಆದರೆ ಸಂಪೂರ್ಣ ಫಿಟ್‌ ಆಗಿದ್ದ 27 ವರ್ಷ ವಯಸ್ಸಿನ ಜ್ವರೇವ್ ಹಿಂದಿನ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ 50 ನಿಮಿಷಗಳಲ್ಲಿ ಜಯಿಸಿದರು. ಎರಡನೇ ಸೆಟ್‌ ಟೈಬ್ರೇಕರ್‌ಗೆ ಬೆಳೆಯಿತು. ಮೂರನೇ ಸೆಟ್‌ನ ಆರಂಭದಲ್ಲಿ ನಡಾಲ್ 2–0 ಮುನ್ನಡೆ ಪಡೆದರೂ, ನಂತರ ಜ್ವರೇವ್ ಪ್ರಾಬಲ್ಯ ಹೆಚ್ಚಿತು.

ಫಿಲಿಪ್‌ ಶಾಟಿಯೆ ಕೋರ್ಟ್‌ನಲ್ಲಿ ‘ರಫಾ, ರಫಾ’ ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

ಶ್ವಾಂಟೆಕ್‌ ಮುನ್ನಡೆ: ಸತತ ಮೂರನೇ ಸಲ ಪ್ರಶಸ್ತಿ ಗೆಲುವಿನ ಪ್ರಯತ್ನದಲ್ಲಿರುವ ಪೋಲೆಂಡ್‌ನ ಇಗಾ ಶ್ವಾಂಟೆಕ್‌ ಮೊದಲ ಸುತ್ತಿನ ಪಂದ್ಯದಲ್ಲಿ ಲಿಯೊಲಿಯಾ ಜೀನ್‌ಜೀನ್ ಅವರನ್ನು ಸೋಲಿಸಿ ದರು. ಇದು ಅವರಿಗೆ ಇಲ್ಲಿ ಸತತ 15ನೇ ಗೆಲುವು.

ಶ್ವಾಂಟೆಕ್ ಈ ಪಂದ್ಯವನ್ನು 6–1, 6–2 ರಿಂದ ಸುಲಭವಾಗಿ ಗೆದ್ದುಕೊಂಡರು.

ವಿಂಬಲ್ಡನ್ ಚಾಂಪಿಯನ್ ಮರ್ಕೆತಾ ವೊಂದ್ರುಸೋವಾ 6–1, 6–3 ರಿಂದ ರೆಬೆಕಾ ಮಸರೋವಾ ಅವರನ್ನು ಹಿಮ್ಮೆಟ್ಟಿಸಿದರೆ, ಎರಡು ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಫೈನಲ್ ತಲುಪಿರುವ ಆನ್ಸ್‌ ಜೇಬರ್ (ಟ್ಯುನೀಷಿಯಾ) 6–3, 6–2 ರಿಂದ ಅಮೆರಿಕದ ಸಚಿಯಾ ವಿಕೆರಿ ಅವರನ್ನು ಪರಾಭವಗೊಳಿಸಿದರು. ವಿಕೆರಿ ಈ ಟೂರ್ನಿಗೆ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು.

ಗಾಫ್ ಮುನ್ನಡೆ: ಮೂರನೇ ಶ್ರೇಯಾಂಕದ ಕೊಕೊ ಗಾಫ್‌ ಮೊದಲ ಸುತ್ತಿನಲ್ಲಿ ರಷ್ಯಾದ ಕ್ವಾಲಿಫೈಯರ್ ಜೂಲಿಯಾ ಅವ್ಡೀವಾ ಅವರನ್ನು 6–1, 6–1 ರಿಂದ ಸೋಲಿಸಲು ತೆಗೆದುಕೊಂಡಿದ್ದು 52 ನಿಮಿಷಗಳನ್ನಷ್ಟೇ. ಇದು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಅಮೆರಿಕದ ಆಟಗಾರ್ತಿಗೆ 50ನೇ ಜಯವಾಯಿತು. ಜೂಲಿಯಾ ವಿಶ್ವಕ್ರಮಾಂಕದಲ್ಲಿ 208ನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಓಪನ್ ಚಾಂಪಿಯನ್ ಆಗಿರುವ ಗಾಫ್‌, 2022ರಲ್ಲಿ ಈ ಟೂರ್ನಿಯಲ್ಲಿ ಇಗಾ ಎದುರು ಫೈನಲ್‌ನಲ್ಲಿ ಸೋತಿದ್ದರು.

ಸಿನ್ನರ್‌ಗೆ ಸುಲಭ ಜಯ ಪುರುಷರ ಸಿಂಗಲ್ಸ್‌ನಲ್ಲಿ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಯಾನಿಕ್ ಸಿನ್ನರ್ 6–3, 6–3, 6–4 ರಿಂದ ಕ್ರಿಸ್‌ ಯುಬ್ಯಾಂಕ್ಸ್‌ ಅವರನ್ನು ಮಣಿಸಿದರು. ಸಿನ್ನರ್‌ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದರು. 10 ಬ್ರೇಕ್‌ಪಾಯಿಂಟ್‌ಗ ಳಲ್ಲಿ 5 ಅನ್ನು ಪರಿವರ್ತಿಸಿದರು. ಒಂದು ಬಾರಿ ಮಾತ್ರ ಸರ್ವ್‌ ಕಳೆದುಕೊಂಡರು.

ಒಂಬತ್ತನೇ ಶ್ರೇಯಾಂಕದ ಆಟಗಾರ ಸ್ಟಿಫಾನೊಸ್‌ ಸಿಸಿಪಸ್‌ (ಗ್ರೀಸ್‌) ಅವರು 7–6 (9–7), 6–4, 6–1 ರಿಂದ ಹಂಗೆರಿಯ ಮಾರ್ಟನ್‌ ಫುಸ್ಕೊವಿಸ್‌ ಅವರನ್ನು ಸೋಲಿಸಿದರು.

ಸುಮಿತ್‌ಗೆ ಸೋಲು

ಪ್ಯಾರಿಸ್‌: ಕೊನೆಗಳಿಗೆಯ ಹೋರಾಟದ ಹೊರತಾಗಿಯೂ ಭಾರತದ ಸುಮಿತ್ ನಗಾಲ್, ಫ್ರೆಂಚ್‌ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭರ್ಜರಿ ಹೊಡೆತಗಳನ್ನಟ್ಟುವ ರಷ್ಯದ ಆಟಗಾರ ಕರೆನ್ ಕಚನೋವ್ ಅವರಿಗೆ ಸೋಮವಾರ ನೇರ ಸೆಟ್‌ಗಳಲ್ಲಿ ಸೋತರು.

ವಿಶ್ವ ಕ್ರಮಾಂಕದಲ್ಲಿ 95ನೇ ಸ್ಥಾನದಲ್ಲಿರುವ ಭಾರತದ ಆಟಗಾರ 2–6, 0–6, 6–7 (5–7) ರಲ್ಲಿ ಸೋತರು. ಆಸ್ಟ್ರೇಲಿಯಾ ಓಪನ್‌ನ ಮೊದಲ ಸುತ್ತಿನಲ್ಲಿ 31ನೇ ರ‍್ಯಾಂಕಿನ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು. ಆದರೆ ಇಲ್ಲಿ ಅಂಥ ಆಟ ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT